ಇತ್ತೀಚಿನ ದಿನಗಳಲ್ಲಿ ಮುಖ್ಯವಾಗಿ ಪಶ್ಚಿಮ ಬಂಗಾಳದಲ್ಲಿ ಸಾಲು ಸಾಲು ಬಿಜೆಪಿ ನಾಯಕರು, ಶಾಸಕರು, ಸಂಸದರು ಬಿಜೆಪಿ ತೊರೆದು ಟಿಎಂಸಿ ಸೇರಿದ್ದನ್ನು ನೋಡಿದ್ದೆವು. ಆ ಸರದಿಗೆ ಕಾಂಗ್ರೆಸ್ ಕೈ ಜೋಡಿಸಿದಂತೆ ಕಾಣುತ್ತಿದೆ. ಇಂದು ನವ ದೆಹಲಿಯಲ್ಲಿ ಬಿಹಾರದ ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್ ಟಿಎಂಸಿ ಸೇರಲಿದ್ದಾರೆ ಎಂದು ವರದಿಯಾಗಿದೆ.
ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಭಾಗವತ್ ಝಾ ಆಜಾದ್‌ರವರ ಪುತ್ರರಾದ ಕೀರ್ತಿ ಆಜಾದ್ ಮೂರು ಬಾರಿ ಬಿಹಾರದ ದರ್ಬಾಂಗ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಕ್ರಿಕೆಟಿಗರು ಆಗಿದ್ದ ಕೀರ್ತಿ ಆಜಾದ್ 1983ರ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು ಎಂದು ತಮ್ಮ ಟ್ವಿಟರ್ ಪರಿಚಯದಲ್ಲಿ ಅವರು ಬರೆದುಕೊಂಡಿದ್ದರೆ.
2014ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದು ಸಂಸದರಾಗಿದ್ದ ಅವರು ಆಗಿನ ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ಬಹಿರಂಗವಾಗಿ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಅಲ್ಲದೆ ಕ್ರಿಕೆಟ್ ಮಂಡಳಿಗಳಲ್ಲಿನ ಭ್ರಷ್ಟಾಚಾರವನ್ನು ಟೀಕಿಸಿದ್ದರು. ಹಾಗಾಗಿ ಅವರನ್ನು 2015 ರಲ್ಲಿ ಅವರನ್ನು ಬಿಜೆಪಿಯು ಪಕ್ಷದಿಂದ ಅಮಾನತ್ತು ಮಾಡಿತ್ತು. ನಂತರ ಅವರು 2018ರಲ್ಲಿ ಕಾಂಗ್ರೆಸ್ ಸೇರಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಅವರು ಸೋಲುಂಡಿದ್ದರು. ಈಗ ಟಿಎಂಸಿ ಸೇರುವುದಾಗಿ ಘೋಷಿಸಿದ್ದಾರೆ. ಮಂಗಳವಾರ ಸಂಜೆ ದೆಹಲಿಯಲ್ಲಿ ಅಧಿಕೃತವಾಗಿ ಟಿಎಂಸಿ ಸೇರಲಿದ್ದಾರೆ. ಪಕ್ಷದ ಮುಖ್ಯಸ್ಥೆ ಮತ್ತು ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಈ ಸಂದರ್ಭದಲ್ಲಿ ಹಾಜಲಿರಲಿದ್ದಾರೆ.
ಇದನ್ನೂ ಓದಿ: ಸಿಎಂ ಯೋಗಿ, ಪಿಎಂ ಮೋದಿ ಗಹನ ಚಿಂತನೆಯ ಫೋಟೋ: ವ್ಯತ್ಯಾಸ ಗುರುತಿಸಿದ ನೆಟ್ಟಿಗರು


