ತಾನು ಮಹಿಳೆ ಮತ್ತು ಹುಡುಗಿಯರನ್ನು ಕೇವಲ ಮುಖ್ಯಮಂತ್ರಿಯಾಗಿ ಮಾತ್ರವಲ್ಲ ತಂದೆಯಂತೆ ಕಾಪಾಡುತ್ತೇನೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಶುಕ್ರವಾರ ಹೇಳಿದ್ದಾರೆ. ತಮ್ಮ ಸರ್ಕಾರವು ಕೆಲಸದ ಸ್ಥಳಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆ ಮತ್ತು ಹುಡುಗಿಯರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಭರವಸೆ ನೀಡಿದ್ದಾರೆ.
“ನಿಮ್ಮನ್ನು ಮುಖ್ಯಮಂತ್ರಿಯಾಗಿ ಮಾತ್ರವಲ್ಲದೆ ತಂದೆಯಂತೆ ಕಾಪಾಡುತ್ತೇನೆ. ಶಿಕ್ಷಣ ಸಂಸ್ಥೆಗಳು, ತಮ್ಮ ಸಂಸ್ಥೆಯ ‘ಪ್ರತಿಷ್ಠೆಯನ್ನು ರಕ್ಷಿಸಲು’ ಲೈಂಗಿಕ ಅಪರಾಧಗಳ ದೂರುಗಳು ಮತ್ತು ಘಟನೆಗಳನ್ನು ಮುಚ್ಚಿಡಬಾರದು” ಎಂದು ಸ್ಟಾಲಿನ್ ಕರೆ ನೀಡಿದ್ದಾರೆ.
ಇದನ್ನೂ ಓದಿ: ‘ಜೈ ಭೀಮ್’ ನಂತಹ ಮತ್ತಷ್ಟು ಚಿತ್ರಗಳು ಬರಲಿ: ಚಿತ್ರತಂಡಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್ ಶ್ಲಾಘನೆ
“ಅಧಿಕಾರಿಗಳು ಸರಿಯಾಗಿ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಗಳು ದೂರುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರು ಯಾವುದೇ ಅನಾಹುತಗಳನ್ನು ಮಾಡಿಕೊಳ್ಳಬಾರದು. ಅದರ ಬದಲಾಗಿ ಹೋರಾಟ ಮಾಡಿ, ಅಪರಾಧಿಗಳನ್ನು ಕಾನೂನಿನ ಮುಂದೆ ತರಬೇಕು’’ ಎಂದು ಸ್ಟಾಲಿನ್ ಹೇಳಿದ್ದಾರೆ.
“ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುವವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗೆ ನಮ್ಮು ಸರ್ಕಾರವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ” ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ಕೊನೆಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದ ಸ್ಟಾಲಿನ್, ಸಂತ್ರಸ್ತರು 1098 ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಬಸ್ ಹತ್ತಿ ಜನರ ಸಮಸ್ಯೆ ಆಲಿಸಿದ ತಮಿಳುನಾಡು ಸಿಎಂ ಸ್ಟಾಲಿನ್!


