ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದೆ. ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡನೆ ಮಾಡಿದ ಸರ್ಕಾರ ಯಾವುದೇ ಚರ್ಚೆ ನಡೆಸದೆ ಅಂಗೀಕಾರ ಮಾಡಿದೆ. ವಿರೋಧ ಪಕ್ಷಗಳು ಕೃಷಿ ಕಾಯ್ದೆಗಳ ಅಪಾಯಗಳು ಬಗ್ಗೆ ಚರ್ಚೆ ಮಾಡಲು ಬಯಸಿದ್ದರು. ಅದಕ್ಕಾಗಿ ಪ್ರತಿಭಟನೆ ನಡೆಸಿದರು. ಅದರಿಂದ ಒಂದು ಗಂಟೆಗೂ ಹೆಚ್ಚು ಕಾಲ ಅಧಿವೇಶನವನ್ನು ಮುಂದೂಡಲಾಗಿತ್ತು. ಮಸೂದೆ ಕುರಿತು ಅವಕಾಶ ನೀಡದ ಸ್ಪೀಕರ್ ಓಂ ಬಿರ್ಲಾರವರು ಲೋಕಸಭೆಯಲ್ಲಿ ಅಂಗೀಕರಿಸಿದ್ದಾರೆ.
ರಾಜ್ಯಸಭೆಯ ಅಧಿವೇಶನದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡೀಸ್‌ರವರಿಗೆ ಶ್ರಧ್ಧಾಂಜಲಿ ಸಲ್ಲಿಸುವ ವಿಚಾರವಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ ಕಾರಣದಿಂದಾಗಿ ಅಧಿವೇಶನವನ್ನು ಮುಂದೂಡಲಾಗಿದೆ.
ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ರವರು ಕೃಷಿ ಕಾಯ್ದೆಗಳನ್ನು ಅಂಗೀಕರಿಸುವ ಮಸೂದೆಯನ್ನು ಮಂಡಿಸಿದ್ದಾರೆ. ಕೇವಲ ನಾಲ್ಕು ನಿಮಿಷಗಳಲ್ಲಿ ಅದನ್ನು ಅಂಗೀಕರಿಸಲಾಯಿತು. ಈ ಕುರಿತು ಒಕ್ಕೂಟ ಸರ್ಕಾರದೊಂದಿಗೆ ಕೃಷಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಮ್ಮ ಪಕ್ಷವನ್ನು ಸಜ್ಜುಗೊಳಿಸಿದ್ದರು. ತಮ್ಮ ಸಂಸದರಿಗೆ ಇಂದು ಕಡ್ಡಾಯವಾಗಿ ಹಾಜರಾಗುವಂತೆ ಪ್ರತಿಪಕ್ಷ ಕಾಂಗ್ರೆಸ್ ವಿಪ್ ಜಾರಿಗೊಳಿಸಿತ್ತು. ಆದರೆ ಚರ್ಚೆಗೆ ಸ್ಪೀಕರ್ ಅವಕಾಶ ನೀಡದೆ ಪಾಸ್ ಮಾಡಿದ್ದಾರೆ ಮತ್ತು ಮಧ್ಯಾಹ್ನ 2 ಗಂಟೆಯವರೆಗೆ ಅಧಿವೇಶನವನ್ನು ಮುಂದೂಡಿದ್ದಾರೆ.
ಕೃಷಿ ಕಾನೂನುಗಳ ರದ್ದತಿ ಮಸೂದೆ 2021 ರ ಮೇಲೆ ಚರ್ಚೆ ನಡೆಯಬೇಕೆಂದು ನಾವು ಬಯಸುತ್ತೇವೆ. ಆದರೆ ಲೋಕಸಭೆಯಲ್ಲಿ ಈ ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸುವುದರೊಂದಿಗೆ, ಸರ್ಕಾರ ತಾವು ರೈತರ ಪರ ಎಂದು ತೋರಿಕೆಗೆ ಮುಂದಾಗಿದೆ ಎಂದು ಕಾಂಗ್ರೆಸ್ ಮುಖಂಡ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನ 25 ದಿನಗಳ ಚಳಿಗಾಲದ ಅಧಿವೇಶನದಲ್ಲಿ ಒಟ್ಟು 36 ಮಸೂದೆಗಳನ್ನು ಅಂಗೀಕರಿಸುವ ನಿರೀಕ್ಷೆಯಿದೆ. ಕ್ರಿಪ್ಟೋಕರೆನ್ಸಿ ಮಸೂದೆಯು ಸಹ ಪಟ್ಟಿಯಲ್ಲಿದೆ. ಪೆಗಾಸಸ್ ಕಣ್ಗಾವಲು ಪ್ರಕರಣ ಮತ್ತು ಬೆಲೆ ಏರಿಕೆ ಸೇರಿ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿವೆ.
ಇದನ್ನೂ ಓದಿ: ಸಂಸತ್ ಅಧಿವೇಶನ: ಅನ್ನದಾತರಿಗಾಗಿ ಸೂರ್ಯೋದಯ ಎಂದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ


