ಸೋಮವಾರ ಉಭಯ ಸದನಗಳು ಸಂಸತ್ತಿನಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಿದ ಕೃಷಿ ಕಾನೂನುಗಳ ರದ್ದತಿ ಕಾಯ್ದೆ-2021 ಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಬುಧವಾರ ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ.
ಸೋಮವಾರದಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ವಿಷಯದ ಬಗ್ಗೆ ಪ್ರತಿ ಪಕ್ಷಗಳು ಚರ್ಚೆಯನ್ನು ಬಯಸಿ ಭಾರೀ ಘೋಷಣೆಗಳನ್ನು ಕೂಗಿದ್ದವು. ಆದರೆ ಯಾವುದೆ ಚರ್ಚೆಯಿಲ್ಲದೆ ಧ್ವನಿ ಮತದ ಮೂಲಕ ‘ದಿ ಫಾರ್ಮ್ ಲಾಸ್ ರಿಪೀಲ್ ಬಿಲ್-2021 ಅನ್ನು ಸರ್ಕಾರವು ಅಂಗೀಕರಿಸಿತ್ತು. ಉಭಯ ಸದನಗಳಲ್ಲಿ ಈ ಕಾಯ್ದೆಯನ್ನು ಸರ್ಕಾರವು ಮಂಡಿಸಿದ ಕೆಲವೇ ನಿಮಿಷಗಳಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿತ್ತು. ನವೆಂಬರ್ 19 ರಂದು ಪ್ರಧಾನಿ ನರೇಂದ್ರ ಮೋದಿಯವರು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ:ಕೃಷಿ ಕಾನೂನುಗಳ ರದ್ಧತಿ ಮಸೂದೆ -2021 ಹುತಾತ್ಮ ರೈತರಿಗೆ ಅರ್ಪಣೆ: ರಾಕೇಶ್ ಟಿಕಾಯತ್
ಈ ಮಧ್ಯೆ, ಸರ್ಕಾರವು ಪ್ರಮುಖ ಬೇಡಿಕೆಯನ್ನು ಈಡೇರಿಸಿರುವುದರಿಂದ 32 ರೈತ ಸಂಘಗಳು ಆಂದೋಲನವನ್ನು ಕೊನೆಗೊಳಿಸಲು ಬಯಸುತ್ತಿವೆ ಎಂಬುವುದಾಗಿ ಮಾಧ್ಯಮಗಳು ವರದಿಗಳು ಮಾಡಿವೆ. ಈ ವರದಿಗೆ ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್, ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೆ ನಾವು ಮನೆಗೆ ಹಿಂತಿರುಗುವುದಿಲ್ಲ, ರೈತರನ್ನು ಒಡೆಯಲು ಸರಕಾರ ವದಂತಿಗಳನ್ನು ಹಬ್ಬಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಡಿಸೆಂಬರ್ 4 ರಂದು ನಡೆಯಲಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಭೆಯಲ್ಲಿ ಮುಂದಿನ ಹೋರಾಟದ ಹಾದಿಯನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದ ಅವರು, ರೈತರು ರೈತ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಒಗ್ಗಟ್ಟಾಗಿ ಉಳಿಯಬೇಕು ಮತ್ತು ಸಂಘಟನೆಯ ಅನುಮೋದನೆಯಿಲ್ಲದೆ ಯಾವುದೇ ಹೇಳಿಕೆ ನೀಡಬಾರದು ಎಂದು ಹೇಳಿದ್ದಾರೆ.
ಸರ್ಕಾರ ರೈತರೊಂದಿಗೆ ಮಾತುಕತೆ ನಡೆಸಲು ಬಯಸುವುದಿಲ್ಲ ಎಂದು ಟಿಕಾಯತ್ ಆರೋಪಿಸಿದ್ದಾರೆ.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸರ್ಕಾರ ರದ್ದುಗೊಳಿಸಿದಾಗ ಆಂದೋಲನವನ್ನು ಕೊನೆಗೊಳಿಸದಿರುವುದು ಬ್ಲ್ಯಾಕ್‌ಮೇಲ್ ಅಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಬಗ್ಗೆ ಚರ್ಚಿಸಲು ಹಲವು ವಿಷಯಗಳಿವೆ. ಆಂದೋಲನದ ಸಂದರ್ಭದಲ್ಲಿ ರೈತರ ವಿರುದ್ಧ ದಾಖಲಿಸಲಾದ ಎಲ್ಲಾ ಪ್ರಕರಣಗಳನ್ನು ಸರ್ಕಾರ ಹಿಂಪಡೆಯಬೇಕು. ಸುಮಾರು 150 ಟ್ರ್ಯಾಕ್ಟರ್‌ಗಳನ್ನು ರೈತರು ಕಳೆದುಕೊಂಡಿದ್ದಾರೆ. ಇಂತಹ ಪ್ರಧಾನಿ ರೈತರಿಗೆ ಹೊಸ ಟ್ರ್ಯಾಕ್ಟರ್‌ಗಳನ್ನು ನೀಡಲಾರರು. ನಾರಾಯಣ ದತ್ತ್ ತಿವಾರಿ ಅವರು ಯುಪಿ ಮುಖ್ಯಮಂತ್ರಿಯಾಗಿದ್ದಾಗ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಿದ್ದರು. ನಷ್ಟವನ್ನು ಸರ್ಕಾರದಿಂದ ತುಂಬಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಲಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬಿಜೆಪಿಯ ದುರಹಂಕಾರಕ್ಕಾಗಿಯು ರೈತ ಚಳುವಳಿ ನೆನಪಿನಲ್ಲಿ ಉಳಿಯುತ್ತದೆ: ಪ್ರಿಯಾಂಕಾ ಗಾಂಧಿ


