ಭಾರತೀಯ ಹವಾಮಾನ ಇಲಾಖೆ ಜವಾದ್ ಚಂಡಮಾರುತದ ಎಚ್ಚರಿಕೆ ನೀಡಿದೆ. ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ಒಡಿಶಾ ಮತ್ತು ಆಂಧ್ರಪ್ರದೇಶ ಕರಾವಳಿ ಜಿಲ್ಲೆಗಳಲ್ಲಿ ಸ್ಥಳಾಂತರಿ ಪ್ರಕ್ರಿಯೆ ಆರಂಭಿಸಲಾಗಿದೆ. ಜವಾದ್ ಚಂಡಮಾರುತ ಎಂಬ ಹೆಸರನ್ನು ಸೌದಿ ಅರೇಬಿಯಾ ನೀಡಿದೆ.
ಶನಿವಾರ ಬೆಳಿಗ್ಗೆ ಒಡಿಶಾ ಮತ್ತು ಆಂಧ್ರಪ್ರದೇಶದ ಉತ್ತರ ಕರಾವಳಿಗೆ ಕಾಲಿಟ್ಟಿರುವ ಜವಾದ್ ಚಂಡಮಾರುತ, ಮಧ್ಯಾಹ್ನದ ಹೊತ್ತಿಗೆ ಪುರಿಯ ತೀರವನ್ನು ಮುಟ್ಟುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ತೀರಗಳಲ್ಲಿ ಅಂಗಡಿ, ಮುಂಗಟ್ಟುಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.
ಮುನ್ನೆಚ್ಚರಿಕೆಯಾಗಿ ಚಂಡಮಾರುತಕ್ಕೆ ಒಳಗಾಗಲಿವೆ ಎಂದಿರುವ ಪ್ರದೇಶಗಳಲ್ಲಿ ಅರವತ್ನಾಲ್ಕು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ತಮಿಳುನಾಡು ಸಂಸದನ ಮಾನಹಾನಿ: BJP ನಾಯಕನ ವಿರುದ್ಧ 1 ಕೋಟಿ ಮಾನನಷ್ಟ ಮೊಕದ್ದಮೆ
ಆಂಧ್ರಪ್ರದೇಶದ ಶ್ರೀಕಾಕುಳಂ, ವಿಜಯನಗರ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಿಗೆ ಶನಿವಾರ ರೆಡ್ ಅಲರ್ಟ್ ಘೋಷಿಸಲಾಗಿದೆ. ಒಡಿಶಾದ ಜಿಲ್ಲೆಗಳಾದ ಗಜಪತಿ, ಗಂಜಾಂ, ಪುರಿ ಮತ್ತು ಜಗತ್‌ಸಿಂಗ್‌ಪುರದಲ್ಲೂ ರೆಡ್ ಅಲರ್ಟ್ ನೀಡಲಾಗಿದೆ.
ಹವಾಮಾನ ಮುನ್ಸೂಚನೆಯಿಂದಾಗಿ ಆಂಧ್ರಪ್ರದೇಶ ಮತ್ತು ಒಡಿಶಾದ ಕರಾವಳಿ ಪ್ರದೇಶಗಳ ಮೂಲಕ ಚಲಿಸುವ 107 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ. ಒಡಿಶಾದ 19 ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಪುರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಶಾಸ್ತ್ರೀಯ ನೃತ್ಯ ಉತ್ಸವ, ಕೋನಾರ್ಕ್ ಉತ್ಸವ ಮತ್ತು ಮರಳು ಕಲಾ ಕಾರ್ಯಕ್ರಮ, ಅಂತರರಾಷ್ಟ್ರೀಯ ಮರಳು ಕಲಾ ಉತ್ಸವವನ್ನು ರದ್ದುಗೊಳಿಸಲಾಗಿದೆ.
ಆಂಧ್ರಪ್ರದೇಶದ ಮೂರು ಜಿಲ್ಲೆಗಳಿಂದ 54,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ರಕ್ಷಣಾ ತಂಡವು ಶ್ರೀಕಾಕುಳಂ ಜಿಲ್ಲೆಯಿಂದ 15,755 ಜನರನ್ನು, ವಿಜಯನಗರದಿಂದ 1,700 ಮತ್ತು ವಿಶಾಖಪಟ್ಟಣದಿಂದ 36,553 ಜನರನ್ನು ಸ್ಥಳಾಂತರಿಸಿದೆ.
ಜನರ ನೆರವಿಗೆ ವಿಪತ್ತು ನಿರ್ವಹಣಾ ಘಟಕಗಳನ್ನು ತೆರೆಯಲಾಗಿದೆ. ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲು ಮತ್ತು ಸಹಾಯ ಮಾಡಲು ಪ್ರಮುಖ ರೈಲು ನಿಲ್ದಾಣಗಳಲ್ಲಿ ಸಹಾಯ ಕೇಂದ್ರಗಳನ್ನು ಸಹ ತೆರೆಯಲಾಗಿದೆ.


