ಮುಂಬೈನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಎರಡನೆ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಎಡಗೈ ಸ್ಪಿನ್ನರ್ ಏಜಾಜ್ ಪಟೇಲ್ ಒಬ್ಬರೆ ಭಾರತದ 10 ಆಟಗಾರರ ವಿಕೆಟ್ ಕಬಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆ ಮೂಲಕ ಈ ಸಾಧನೆಗೈದ ವಿಶ್ವದ ಮೂರನೇ ಬೌಲರ್ ಎನಿಸಿದ್ದಾರೆ.
1999 ರಲ್ಲಿ ಪಾಕಿಸ್ತಾನದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಲೆಗ್ ಸ್ಪಿನ್ ಲೆಜೆಂಡ್ ಎಂದು ಕರೆಸಿಕೊಳ್ಳುವ ಅನಿಲ್ ಕುಂಬ್ಳೆ 10 ವಿಕೆಟ್ ಪಡೆಯುವ ಮೂಲಕ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದಿದ್ದ ಇಂಗ್ಲೆಂಡ್‌ನ ಸ್ಪಿನ್ನರ್ ಜಿಮ್ ಲೇಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಇಂದು ಆ ಪಟ್ಟಿಗೆ ನ್ಯೂಜಿಲೆಂಡ್‌ನ ಏಜಾಜ್ ಪಟೇಲ್ ಸಹ ಸೇರಿಕೊಂಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದ ಭಾರತ ಉತ್ತಮ ಆರಂಭವನ್ನೇ ಪಡೆದಿತ್ತು. ಮಯಾಂಕ್ ಅಗರ್ವಾಲ್ ಶತಕ ಬಾರಿಸಿದರೆ, ಶುಭಮನ್ ಗಿಲ್ ಮತ್ತು ಅಕ್ಷರ್ ಪಟೇಲ್ ಅರ್ಧಶತಕ ಬಾರಿಗೆ ಭಾರತ 325 ರನ್‌ಗಳ ಉತ್ತಮ ಮೊತ್ತ ಕಲೆ ಹಾಕಲು ನೆರವಾದರು. ಆದರೆ ನ್ಯೂಜಿಲೆಂಡ್‌ನ ಏಜಾಜ್ ಪಟೇಲ್ ಮಾತ್ರ ತಮ್ಮ ಮೊನಚಾದ ಬೌಲಿಂಗ್ ದಾಳಿಯಿಂದ 10 ವಿಕೆಟ್ ಪಡೆದು ಮಿಂಚಿದರು.
ಒಟ್ಟು 47.5 ಓವರ್ ಬೌಲ್ ಮಾಡಿದ ಅವರು, 119 ರನ್ ನೀಡಿ 10 ವಿಕೆಟ್ ಗಳಿಸಿದರು. ಕೊನೆಯದಾಗಿ ಭಾರತದ ಆಟಗಾರ ಸಿರಾಜ್ ಮೊಹಮ್ಮದ್ ಪಟೇಲ್ ಬೌಲಿಂಗ್‌ನಲ್ಲಿ ಮಿಡ್‌ಆನ್ ನಲ್ಲಿ ಕ್ಯಾಚ್ ನೀಡಿದರು.
ಮೊದಲ ದಿನ 4 ವಿಕೆಟ್ ಪಡೆದಿದ್ದ ಅವರು ಇಂದು ಉಳಿದ 6 ವಿಕೆಟ್ ಗಳಿಸಿ ಭಾರತವನ್ನು ಆಲೌಟ್ ಮಾಡಿದರು. ಭಾರತ 325ರನ್ ಗಳಿಸಿದೆ. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡುತ್ತಿರುವ ನ್ಯೂಜಿಲೆಂಡ್ ಊಟದ ವಿರಾಮದ ವೇಳೆಗಾಗಲೇ ಕೇವಲ 16 ರನ್‌ಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಇದನ್ನೂ ಓದಿ: ಟಿ20 ಕ್ರಿಕೆಟ್‌ನಲ್ಲಿ ದಾಖಲೆ: 4 ಓವರ್‌ನಲ್ಲಿ ಒಂದೂ ರನ್ ಕೊಡದ ಮೊದಲ ಬೌಲರ್ ಅಕ್ಷಯ್!


