2019ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಸಹಾಯಕ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಮತ್ತು ಮೀಸಲಾತಿ ಸರಿಯಾಗಿ ಅನ್ವಯವಾಗಿಲ್ಲ ಎಂದು ಆರೋಪಿಸಿ ಲಕ್ನೋದಲ್ಲಿ ಪ್ರತಿಭಟಿಸುತ್ತಿದ್ದ ನೂರಾರು ಯುವಜನರ ಮೇಲೆ ಪೊಲೀಸರು ಅಮಾನವೀಯ ಲಾಠೀ ಚಾರ್ಜ್ ನಡೆಸಿದ್ದಾರೆ. ಯುವಜನರನ್ನು ಗುರಿಯಾಗಿಸಿ ಪೊಲೀಸರು ಚಿತ್ರಹಿಂಸೆ ನೀಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಯುಪಿ ಸರ್ಕಾರದ ವಿರುದ್ಧ ಆಕ್ರೋಶ ಹುಟ್ಟಿಸಿವೆ.
ಉತ್ತರ ಪ್ರದೇಶ ಸರ್ಕಾರವು 2019ರಲ್ಲಿ 69,000 ಸಹಾಯಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿತ್ತು. ಆದರೆ ಈ ಇಡೀ ಪ್ರಕ್ರಿಯೆ ಅಕ್ರಮವಾಗಿದೆ ಮತ್ತು ದಲಿತ, ಒಬಿಸಿ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಎರಡು ವರ್ಷದಿಂದಲೂ ಪ್ರತಿಭಟನೆ ನಡೆಯುತ್ತಿತ್ತು. ಆ ಅಂಗವಾಗಿ ಶನಿವಾರ ಸಂಜೆ ಮುಖ್ಯಮಂತ್ರಿ ಮನೆಯೆಡೆಗೆ ಪಂಜಿನ ಮೆರವಣಿಗೆ ಹೊರಟಿದ್ದ ಯುವಜನರ ಮೇಲೆ ಪೊಲೀಸರು ಲಾಠೀ ಪ್ರಹಾರ ನಡೆಸಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ‘ಈ ಮಕ್ಕಳೂ ಸಹ ತಾಯಿ ಭಾರತಾಂಬೆಯ ಮಕ್ಕಳೆ. ಆದರೆ ಅವರ ನೋವನ್ನು, ಅವರ ಮಾತನ್ನು ಕೇಳಲು ಯಾರೂ ಸಿದ್ಧರಿಲ್ಲ. ಅವರ ಮೇಲೆ ಈ ಬರ್ಬರ ಲಾಠಿ ಚಾರ್ಜ್ ನಡೆಯುತ್ತಿದೆ. ನಿಮ್ಮ ಎದೆಯ ಮೇಲೆ ಕೈಯಿಟ್ಟು ಯೋಚಿಸಿ, ಇವರು ನಿಮ್ಮ ಮಕ್ಕಳಾಗಿದ್ದರೆ, ಆಗಲೂ ಇದೇ ರೀತಿ ನಡೆಸಿಕೊಳ್ಳುತ್ತಿದ್ದೀರಾ? ನಿಮ್ಮಲ್ಲಿ ಖಾಲಿ ಹುದ್ದೆಗಳು ಮತ್ತು ಅರ್ಹ ಅಭ್ಯರ್ಥಿಗಳು ಇದ್ದಾರೆ, ಆದ್ದರಿಂದ ಏಕೆ ನೇಮಕಾತಿ ಮಾಡಬಾರದು?’ ಎಂದು ಪ್ರಶ್ನಿಸಿದ್ದಾರೆ.
‘ಉದ್ಯೋಗ ಕೇಳಿದ ಯುವಜನರಿಗೆ ಯುಪಿ ಸರ್ಕಾರ ಲಾಠೀ ಏಟು ನೀಡಿದೆ. ಬಿಜೆಪಿಯವರು ಮತ ಕೇಳಲು ಬಂದಾಗ ಇದು ನೆನಪಿರಲಿ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಸಮಾಜವಾದಿ ಪಕ್ಷವು ಈ ವಿಡಿಯೋವನ್ನು ಪೋಸ್ಟ್ ಮಾಡಿ “ಸಿಎಂ ಯೋಗಿ ಆದಿತ್ಯನಾಥ್ 69000 ಶಿಕ್ಷಕರ ನೇಮಕಾತಿಯಲ್ಲಿ ದಲಿತರಿಗೆ ಮತ್ತು ಹಿಂದುಳಿದವರಿಗೆ ಮೀಸಲಾತಿ ನೀಡಿಲ್ಲ. ಆದರೆ ಅದನ್ನು ಪ್ರಶ್ನಿಸಿದವರಿಗೆ ಲಾಠೀ ಏಟು ನೀಡುತ್ತಿದೆ” ಎಂದು ಕಿಡಿಕಾರಿದೆ.
ಇದನ್ನೂ ಓದಿ: ಡಿ.6 ಬಾಬರಿ ಮಸೀದಿ ಧ್ವಂಸ ದಿನ: ಮಥುರಾದಲ್ಲಿ ನಿಷೇದಾಜ್ಞೆ, ಪೊಲೀಸ್ ಬಿಗಿ ಭದ್ರತೆ


