- Advertisement -
- Advertisement -
ಬಲಿತು ಸುಲಿಯದ ಹಣ್ಣಿನ ಮನಸ್ಸಿನ ಅವಳು
ಅರೇ ಪ್ರಕಟಿತ…!
ಹಣೆ ಕೊರಳು ಹೆರಳಿನ ಮೇಲೆಲ್ಲ ಮುಚ್ಚು ಮರೆಯ ಪರದೆಗಳ ಕಾಗದಗಳಿವೆ…!
ಅಲ್ಲೆಲ್ಲ ಬರೆದಿಡಲಾದ ಸಾಲುಗಳು,
ಕೆಲವನ್ನು ತಿದ್ದಲಾಗಿದೆ
ಒಂದಷ್ಟು ಅವಳದೇ ಅಕ್ಷರದಲ್ಲಿ, ಒಂದಷ್ಟು ಮತ್ಯಾರದ್ದೋ..!
ಕುಟುಂಬ, ಧರ್ಮ, ಜಾತಿ ಜೀವಗಳ ಮರ್ಯಾದೆಯನ್ನು ದುಪ್ಪಟ್ಟದಲ್ಲಿ ಸುತ್ತಿಕೊಂಡು
ಪಾವಿತ್ರ್ಯತೆಯನು ಯೋನಿಯಲ್ಲಿ ಕಾಪಾಡಿಕೊಂಡು,
ಸಂಸ್ಕೃತಿ, ಪರಂಪರೆಯ ಸಂಪ್ರದಾಯದ ಗೋಡೆಗಳ ಮೇಲೆ
ಇಂದಿಗೂ ತೂಗುವ ಭಿತ್ತಿ ಪತ್ರದ ಜೀವದವಳು…
ತೆರೆದು ಬಿದ್ದ ಪ್ರಪಂಚದಲ್ಲೂ
ಜೀವಿತವಾಗಿರುವ ಈ ಕವಿತೆ ಪ್ರಕಟವಾಗುವುದು
ಪತ್ರಿಕೆ ಮತ್ತು ಪರದೆಗಳ ಮೇಲಷ್ಟೆ…
ಮನಸ್ಸಿನಲ್ಲಿ ಉಳಿಯುವ ವಿರಳ ಉಸಿರಾಟ ಅವಳದ್ದೇ..
ಸಂಪ್ರದಾಯಗಳ ಹೆಣದ ಪೆಟ್ಟಿಗೆಗೆ
ಆ ಕವಿತೆಯ ಸುಲಿದ ಚರ್ಮದ ಹೊದಿಕೆಯ ರಕ್ಷಣೆ…
-ಗೋಪಾಲಕೃಷ್ಣ ಹುಲಿಮನೆ

(ಗೋಪಾಲಕೃಷ್ಣ ಹುಲಿಮನೆಯವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿಮನೆ ಗ್ರಾಮದ ಯುವ ಕವಿ)
ಇದನ್ನೂ ಓದಿ: ಗೋಪಾಲಕೃಷ್ಣ ಹುಲಿಮನೆಯವರ ಕವನ – ‘ಇಲ್ಲಿ ಗದ್ದಲ ಬೇಡ’


