ಕೃಷಿ ಕಾನೂನುಗಳ ವಿರುದ್ಧ ವರ್ಷವಿಡೀ ನಡೆದ ಹೋರಾಟದ ಸಂದರ್ಭದಲ್ಲಿ “ಪೊಲೀಸರು ಜರುಗಿಸಿದ ಕ್ರಮಗಳಿಂದ ಯಾವುದೇ ರೈತರು ಸಾವನ್ನಪ್ಪಿಲ್ಲ” ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.
ರೈತರ ವಿರುದ್ಧದ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಸೇರಿದಂತೆ ರೈತರ ಪ್ರಮುಖ ಬೇಡಿಕೆಗಳನ್ನು ಜಾರಿಗೊಳಿಸಲು ಕ್ರಮ ವಹಿಸಲಾಗುವುದು ಎಂದು ಕೇಂದ್ರ ಸರ್ಕಾರ ಲಿಖಿತವಾಗಿ ಭರವಸೆ ನೀಡಿದ ಬಳಿಕ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಹೋರಾಟವನ್ನು ಗುರುವಾರ ಹಿಂಪಡೆದಿದೆ.
ಶುಕ್ರವಾರ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, “ರೈತ ಚಳವಳಿಯಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರದ ನೀಡಬೇಕಾದದ್ದು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದೆ” ಎಂದು ತಿಳಿಸಿದ್ದಾರೆ.
ರೈತರ ಆಂದೋಲನದ ಸಂದರ್ಭದಲ್ಲಿ ಪೊಲೀಸರ ಕ್ರಮದಿಂದ ಯಾವುದೇ ರೈತರು ಸಾವನ್ನಪ್ಪಿಲ್ಲ ಎಂದು ಅವರು ಹೇಳಿದ್ದಾರೆ. “ಪ್ರತಿಭಟನೆಯ ಸಂದರ್ಭದಲ್ಲಿ ಸಾವಿಗೀಡಾದ ರೈತರ ಬಗ್ಗೆ ಯಾವುದೇ ಮಾಹಿತಿ ಇಲ್ಲ” ಎಂದು ಕೇಂದ್ರ ಸರ್ಕಾರ ಜೂನ್‌ನಲ್ಲಿ ಸಂಸತ್ತಿನಲ್ಲಿ ಹೇಳಿತ್ತು.
ಕಾಂಗ್ರೆಸ್ ನಾಯಕ ಧೀರಜ್ ಪ್ರಸಾದ್ ಸಾಹು ಮತ್ತು ಎಎಪಿ ನಾಯಕ ಸಂಜಯ್ ಸಿಂಗ್ ಅವರ ಜಂಟಿ ಪ್ರಶ್ನೆಗೆ ತೋಮರ್ ಈಗ ಪ್ರತಿಕ್ರಿಯಿಸಿದ್ದಾರೆ.
ರೈತರ ಪ್ರತಿಭಟನೆಯ ವೇಳೆ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಜೀವನೋಪಾಯ ಮತ್ತು ಆರ್ಥಿಕ ಪರಿಹಾರವನ್ನು ನೀಡಲು ಸರ್ಕಾರ ಚಿಂತಿಸಿದೆಯೇ ಎಂದು ಸದಸ್ಯರು ಪ್ರಶ್ನಿಸಿದ್ದಾರೆ. ಒಂದು ವರ್ಷದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಾವಿಗೀಡಾದ ರೈತರ ಬಗ್ಗೆ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ದನಿ ಎತ್ತುತ್ತಲೇ ಇವೆ.
ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ರೈತರು, ಕೋವಿಡ್-19 ಮತ್ತು ವ್ಯತಿರಿಕ್ತ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಿ ಹೋರಾಟ ನಡೆಸಿದ್ದರು. ನವೆಂಬರ್ 2020ರ ಅಂತ್ಯದಿಂದ ದೆಹಲಿಯ ಗಡಿಯಲ್ಲಿ ಹೋರಾಟ ನಡೆಸಿದರು. ಪ್ರತಿಭಟನೆಯ ಸಂದರ್ಭದಲ್ಲಿ 700 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ ಎಂದು ಎಸ್‌ಕೆಎಂ ಹೇಳಿದೆ.
“ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಹಿಂದೆ ‘ಶ್ರೀಮಂತ ರೈತರು’ ಹೆಚ್ಚಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದ ಇಬ್ಬರು ಅರ್ಥಶಾಸ್ತ್ರಜ್ಞರು ನಡೆಸಿದ ಅಧ್ಯಯನವು ನೀಡಿದ ವರದಿ ಸರ್ಕಾರದ ಹೇಳಿಕೆಗೆ ವಿರುದ್ಧವಾಗಿತ್ತು. ಪ್ರತಿಭಟನೆಯ ಸಮಯದಲ್ಲಿ ಸಾವನ್ನಪ್ಪಿದವರು ಸರಾಸರಿ 2.94 ಎಕರೆಗಿಂತ ಹೆಚ್ಚು ಭೂಮಿಯನ್ನು ಸಾಗುವಳಿ ಮಾಡುತ್ತಿರಲಿಲ್ಲ. ಅವರೆಲ್ಲರೂ ಸಣ್ಣ ಮಟ್ಟದ ರೈತರಾಗಿದ್ದರು” ಎಂದು ‘ದಿ ವೈರ್’ ವರದಿ ಮಾಡಿತ್ತು.
ಎಂಎಸ್‌ಪಿ ಕುರಿತ ಪ್ರತ್ಯೇಕ ಪ್ರಶ್ನೆಗಳಿಗೆ ಉತ್ತರಿಸಿದ ತೋಮರ್, “ಶೂನ್ಯ ಬಜೆಟ್ ಆಧಾರಿತ ಕೃಷಿಯನ್ನು ಉತ್ತೇಜಿಸಲು, ದೇಶದ ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಬೆಳೆ ಮಾದರಿಯನ್ನು ಬದಲಾಯಿಸಲು, ಎಂಎಸ್‌ಪಿಯನ್ನು ಹೆಚ್ಚು ಪರಿಣಾಮಕಾರಿ ಹಾಗೂ ಪಾರದರ್ಶಕಗೊಳಿಸಲು ಸಮಿತಿಯನ್ನು ರಚಿಸಲಾಗುತ್ತಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿರಿ: ಹರಿಯಾಣದ ಹಳ್ಳಿಗಳಿಗೆ ತೆರಳಿ ಧನ್ಯವಾದ ತಿಳಿಸುತ್ತಿರುವ ಪಂಜಾಬ್ ರೈತರು!


