ತಮಟೆ ಬಾರಿಸಿದ್ದಕ್ಕಾಗಿ ದಲಿತ ವ್ಯಕ್ತಿಯನ್ನು ಜಾತಿವಾದಿಗಳು ಥಳಿಸಿದ್ದಾರೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐವರ ಮೇಲೆ ಜಾತಿ ದೌರ್ಜನ್ಯ ಪ್ರಕರಣ ದಾಖಲಾಗಿದೆ.
ನೆಲಮಂಗಲ ತಾಲ್ಲೂಕಿನ ಮೊದಲಕೋಟೆ ನಿವಾಸಿ ನಾರಾಯಣಸ್ವಾಮಿಯವರು ಸುಮಾರು ಹದಿನೈದು ಜನರ ಮೇಲೆ ದೂರು ನೀಡಿದ್ದು, ಐವರ ಮೇಲಷ್ಟೇ ಪ್ರಕರಣ ದಾಖಲಾಗಿದೆ.
“ಭಾನುವಾರ (ಡಿ.12) ಮಧ್ಯಾಹ್ನ ಸುಮಾರು 12.15ರ ಸಮಯದಲ್ಲಿ ನಾನು ನನ್ನ ಆಟೋದಲ್ಲಿ ಊರಿನ (ಮೊದಲಕೋಟೆ) ಪ್ರೌಢಶಾಲೆಯ ರಸ್ತೆಯ ಮೂಲಕ ನಾನು ಹಾಗೂ ನನ್ನ ಸ್ನೇಹಿತ ವಿಶ್ವ ಎನ್ನುವವರು ತೆರಳುತ್ತಿದ್ದೆವು. ನನ್ನ ಆಟೋದಲ್ಲಿ ತಮಟೆ ಒಂದನ್ನು ಇಟ್ಟಿಕೊಂಡಿದ್ದೆವು. ಅಕಸ್ಮಾತ್ ಆಗಿ ಕೆಲವು ಸೆಕೆಂಡ್ ತಮಟೆಯನ್ನು ಭಾರಿಸಿದ್ದು ಮೇಲ್ಜಾತಿಯ ಜನರು ಥಳಿಸಲು ಕಾರಣವಾಗಿದೆ” ಎಂದು ಅವರು ದೂರಿದ್ದಾರೆ.
“ಗ್ರಾಪಂ ಮಾಜಿ ಅಧ್ಯಕ್ಷ ಗೋವಿಂದರಾಜು (ಗೋವಿ) ಅವರ ಮನೆ ಅಲ್ಲಿಯೇ ಸಮೀಪದಲ್ಲೇ ಇತ್ತು. ತಮಟೆ ಬಾರಿಸಿದಾಗ ಗೋವಿಂದರಾಜು ಹಾಗೂ ಅವರ ಪತ್ನಿ, ಸಂಬಂಧಿಗಳಾದ ರಾಜ, ಮೂರ್ತಿ ಹಾಗೂ ಅವರ ಪತ್ನಿ, ನಾಗರಾಜು, ರಂಗಣ್ಣ ಹಾಗೂ ಅವರ ಪತ್ನಿ, ಶಿವ ಹಾಗೂ ಅವರ ಪತ್ನಿ ಶಶಿಕಲಾ, ಗೋವಿಂದರಾಜು ಅವರ ತಾಯಿ, ಶಂಕರ್, ರಂಗಮ್ಮ ಅವರು ನನ್ನನ್ನು ಅಡ್ಡಗಟ್ಟಿ, ಜಾತಿ ನಿಂದನೆ ಮಾಡಿ, ಅಸಂವಿಧಾನಿಕ ಪದಗಳಿಂದ ಬೈದು ನನ್ನನ್ನು ಥಳಿಸಿದ್ದಾರೆ” ಎಂದು ನಾರಾಯಣಸ್ವಾಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


“ನನ್ನನ್ನು ಒದ್ದು ಜಾತಿ ನಿಂದನೆ ಮಾಡಿ ಪೊರಕೆಗಳಿಂದ ಶಶಿಕಲಾ ಎಂಬವರು ಥಳಿಸಿದ್ದಾರೆ. ಚಪ್ಪಳಿಗಳಿಂದ ಎಲ್ಲರೂ ನನ್ನನ್ನು ಹೊಡೆದು ದೊಳ್ಳೆಗಳಿಂದ ಗಾಯಗೊಳಿಸಿದ್ದಾರೆ. ಗೋವಿಂದರಾಜು ಎಂಬವರು ನನ್ನ ತಲೆ ಹಾಗೂ ಎದೆಯ ಭಾಗಕ್ಕೆ ಹೊಡೆದರು. ಹೀಗೆ ಎಲ್ಲರೂ ಸೇರಿ ಹಿಂಸಿಸಿದರು” ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
“ನಾನು ಪ್ರಜ್ಞೆ ತಪ್ಪಿ ಬಿದ್ದೆನು. ಅಷ್ಟರಲ್ಲಿ ನನ್ನ ತಂದೆ, ನನ್ನ ಅಣ್ಣನವರಿಗೆ ವಿಷಯ ತಿಳಿದು ಅಲ್ಲಿಗೆ ಬಂದು ನನ್ನನ್ನು ರಕ್ಷಿಸಿದರು. ಅಲ್ಲದೇ ಗೋವಿಂದರಾಜು ಅವರು ನನ್ನ ಪೋಷಕರನ್ನು ಅವ್ಯಾಚ್ಯ ಪದಗಳಿಂದ ನಿಂದಿಸಿದರು. ನಮ್ಮನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದರು. ಅಷ್ಟರಲ್ಲಿ ಪೊಲೀಸರು ಬಂದು ಠಾಣೆಗೆ ಬರುವಂತೆ ತಿಳಿಸಿದರು. ಗಾಯಗೊಂಡಿದ್ದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ” ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.
ಗೋವಿಂದರಾಜು, ಗಂಗಾಮಣಿ, ಶಿವಕುಮಾರ್, ಶಶಿಕಲಾ, ರಂಗಣ್ಣ ಎಂಬವರ ಮೇಲೆ ಐಪಿಸಿ ಸೆಕ್ಷನ್ 143, 147, 323, 504, 355, 324, 149 ಮತ್ತು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.


