ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಅವರು ಚುನಾವಣಾ ರಾಜಕೀಯಕ್ಕೆ ಸೇರಬಹುದು ಎಂಬ ವರದಿಗಳಾಗುತ್ತಿದೆ. ಇದರ ನಡುವೆ ಪ್ರತಿಕ್ರಿಯೆ ನೀಡಿರುವ ಹರ್ಭಜನ್, “ಹಲವಾರು ರಾಜಕೀಯ ಪಕ್ಷಗಳವರು ಆಫರ್‌ಗಳನ್ನು ನೀಡುತ್ತಿದ್ದಾರೆ. ರಾಜಕೀಯ ಅಥವಾ ಬೇರೆ ಯಾವುದಾದರೂ ರೀತಿಯಲ್ಲಿ ಪಂಜಾಬ್‌ಗೆ ಸೇವೆ ಸಲ್ಲಿಸುತ್ತೇನೆ” ಎಂದಿದ್ದಾರೆ.
“ಭವಿಷ್ಯದ ಯೋಜನೆ ಕುರಿತು ಯೋಚಿಸಿಲ್ಲ. ನಾನು ಕ್ರಿಕೆಟ್‌ನೊಂದಿಗೆ ಸಂಪರ್ಕದಲ್ಲಿರುತ್ತೇನೆ. ಯಾಕೆಂದರೆ ಕ್ರಿಕೆಟ್‌ನಿಂದಾಗಿ ಜನರು ನನ್ನನ್ನು ಗುರುತಿಸಿದ್ದಾರೆ. ನನ್ನ ರಾಜಕೀಯ ವೃತ್ತಿಜೀವನವನ್ನು ನಿರ್ಧರಿಸಿದಾಗ ನಾನು ಎಲ್ಲರಿಗೂ ತಿಳಿಸುತ್ತೇನೆ” ಎಂದು ಹೇಳಿದ್ದಾರೆ.
“ನನಗೆ ಎಲ್ಲಾ ಪಕ್ಷದ ರಾಜಕಾರಣಿಗಳು ಗೊತ್ತು. ನಾನು ಯಾವುದೇ ಪಕ್ಷ ಸೇರುವುದಾದರೆ ಮೊದಲೇ ಘೋಷಣೆ ಮಾಡುತ್ತೇನೆ. ರಾಜಕೀಯ ಅಥವಾ ಯಾವುದಾದರೂ ರೀತಿಯಲ್ಲಿ ಪಂಜಾಬ್‌ಗೆ ಸೇವೆ ಸಲ್ಲಿಸುತ್ತೇನೆ. ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ” ಎಂದು ಹರ್ಭಜನ್ ಪ್ರತಿಕ್ರಿಯೆ ನೀಡಿದ್ದಾರೆ.
“ನಿಜ ಹೇಳಬೇಕೆಂದರೆ, ನಾನು ಅದರ ಬಗ್ಗೆ ಯೋಚಿಸಲಿಲ್ಲ, ನಾನು ರಾಜಕೀಯ ಸೇರಲು ವಿವಿಧ ಪಕ್ಷಗಳಿಂದ ಆಫರ್‌ಗಳಿವೆ … ಆದರೆ ನಾನು ತುಂಬಾ ಬುದ್ಧಿವಂತಿಕೆಯಿಂದ ಕುಳಿತು ಯೋಚಿಸಬೇಕಾಗಿದೆ. ಇದು ಬಹುಬೇಡಿಕೆ ಕೆಲಸವಾದ್ದರಿಂದ ನಿರ್ಧಾರ ಸುಲಭದ್ದಲ್ಲ. ನಾನು ಅರೆಮನಸ್ಸಿನಿಂದ ರಾಜಕಾರಣ ಮಾಡಲು ಬಯಸುವುದಿಲ್ಲ. ರಾಜಕಾರಣ ಮಾಡಲು ಸಿದ್ಧನಿದ್ದೇನೆ ಎಂದು ಭಾವಿಸಿದ ದಿನ, ನಾನು ರಾಜಕಾರಣಕ್ಕೆ ಹೋಗುತ್ತೇನೆ” ಎಂದಿದ್ದಾರೆ.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ನವಜೋತ್ ಸಿಧು ಅವರು ಹರ್ಭಜನ್ ಸಿಂಗ್ ಅವರೊಂದಿಗೆ ಫೋಟೋವನ್ನು ಪೋಸ್ಟ್ ಮಾಡಿದ ಬಳಿಕ, ಹರ್ಭಜನ್ ಅವರು ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ಹಲವು ಊಹಾಪೋಹಗಳು ಹರಿದಾಡಿದ್ದವು.
“ಸಾಧ್ಯತೆಗಳಿಂದ ಕೂಡಿರುವ ಚಿತ್ರವಿದು… ಭಜ್ಜಿ, ಮಿನುಗುವ ತಾರೆ” ಎಂದು ಸಿಧು ಬರೆದಿದ್ದರು.
ಸಿಧು ಜೊತೆಗಿನ ಫೋಟೋ ಬಗ್ಗೆ ಹರ್ಭಜನ್ ಅವರಲ್ಲಿ ಪ್ರಶ್ನಿಸಿದ್ದಾಗ, “ಇದು ಸಾಂದರ್ಭಿಕ ಭೇಟಿಯಾಗಿದೆ. ಚುನಾವಣೆ ಹತ್ತಿರದಲ್ಲಿದೆ, ಜನರು ಏಕೆ ಊಹಿಸುತ್ತಾರೆ ಎಂದು ನನಗೆ ಅರ್ಥವಾಯಿತು … ಆದರೆ ಏನೂ ಇಲ್ಲ. ನಾನು ರಾಜಕೀಯಕ್ಕೆ ಬಂದರೆ, ನಾನು ಎಲ್ಲರಿಗೂ ತಿಳಿಸುತ್ತೇನೆ” ಎಂದಿದ್ದರು.
2022ರಲ್ಲಿ ನಡೆಯುವ ಪಂಜಾಬ್‌ನ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಹರ್ಭಜನ್ ಮತ್ತು ಭಾರತದ ಮತ್ತೊಬ್ಬ ಮಾಜಿ ಕ್ರಿಕೆಟ್ ತಾರೆ ಯುವರಾಜ್ ಸಿಂಗ್ ಬಿಜೆಪಿಗೆ ಸೇರಬಹುದು ಎಂಬ ವದಂತಿಗಳನ್ನೂ ಹರ್ಭಜನ್ ಅಲ್ಲಗಳೆದಿದ್ದಾರೆ.


