ದೆಹಲಿ ಸರ್ಕಾರವು ಕಳೆದ ಎರಡು ದಿನಗಳಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ 7,778 ಪ್ರಕರಣಗಳಲ್ಲಿ, 1.54 ಕೋಟಿ ರೂಪಾಯಿಗಳನ್ನು ದಂಡವಾಗಿ ಸಂಗ್ರಹಿಸಿದೆ ಎಂದು ವರದಿಯಾಗಿದೆ. ಇದು ಇತ್ತೀಚಿನ ವಾರಗಳಲ್ಲಿ ಸಂಗ್ರಹವಾದ ಅತ್ಯಧಿಕ ಮೊತ್ತವಾಗಿ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೂರ್ವ ದೆಹಲಿಯಲ್ಲಿ 1,245 ಕೊರೊನಾ ನಿಯಮ ಉಲ್ಲಂಘನೆಗಳು ದಾಖಲಾಗಿದ್ದರೆ, ಉತ್ತರದಲ್ಲಿ 1,446 ಪ್ರಕರಣಗಳು ದಾಖಲಾಗಿವೆ. ಒಟ್ಟು 7,778 ಮಂದಿಯ ವಿರುದ್ಧ ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿರುವುದು ಮತ್ತು ಜನಸಂದಣಿಯ ಮೂಲಕ ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾಗಿ ದಂಡ ವಸೂಲಿ ಮಾಡಲಾಗಿದೆ. ಅಲ್ಲದೆ, 163 ಎಫ್‌ಐಆರ್‌ಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಒಮೈಕ್ರಾನ್ ಆತಂಕ: ದೆಹಲಿಯಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ನಿಷೇಧ
ಕೊರೊನಾ ನಿಯಮಾವಳಿಗಳನ್ನು ಮೀರಿ ಸರೋಜಿನಿ ನಗರದಲ್ಲಿ ಜನರು ಸೇರಿರುವ ವೀಡಿಯೊವೊಂದು ಇತ್ತೀಚೆಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಸೇರಿದಂತೆ ಅಧಿಕಾರಿಗಳ ಗಮನ ಸೆಳೆದಿತ್ತು. ಈ ಹಿನ್ನೆಲಯಲ್ಲಿ ಎಫ್ಟಿನೆಂಟ್ ಗವರ್ನರ್ ಕಚೇರಿಯು ಹೇಳಿಕೆ ನೀಡಿದೆ.
“ಮಾಧ್ಯಮ ವರದಿಗಳು ಮತ್ತು ಆಂತರಿಕ ಮಾಹಿತಿಗಳ ಪ್ರಕಾರ ಅಲ್ಲಿನ ಮಾರುಕಟ್ಟೆಗಳು ಕಿಕ್ಕಿರಿದಿವೆ. ಎಲ್ಲಾ ಮಾರುಕಟ್ಟೆಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ನಿಯಮಾವಳಿಗಳ ಉಲ್ಲಂಘನೆ ಆಗುತ್ತಿವೆ. ಇದರಿಂದಾಗಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಿವೆ” ಎಂದು ಲೆಫ್ಟಿನೆಂಟ್ ಕಚೇರಿ ತಿಳಿಸಿದೆ.
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಈ ವರ್ಷ ರಾಷ್ಟ್ರ ರಾಜಧಾನಿಯಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಚರಣೆಗಳನ್ನು ನಿಷೇಧಿಸಿದೆ. ಒಮೈಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಶುಕ್ರವಾರದಂದು ದೆಹಲಿಯಲ್ಲಿ 180 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದು ಕಳೆದ ಆರು ತಿಂಗಳಲ್ಲೇ ವರದಿಯಾದ ಅತಿ ಹೆಚ್ಚು ಪ್ರಕರಣವಾಗಿದೆ.
ಇದನ್ನೂ ಓದಿ: ಸಂಪೂರ್ಣ ಲಸಿಕೆ ಪಡೆದಿರುವ ದೆಹಲಿಗರಿಗೆ ಬೂಸ್ಟರ್ ಡೋಸ್ ನೀಡಲು ಅನುಮತಿ ಕೊಡಿ: ಕೇಂದ್ರಕ್ಕೆ ಕೇಜ್ರಿವಾಲ್ ಮನವಿ


