ಡಿಸೆಂಬರ್ 29, ಜಾತಿ -ಧರ್ಮಗಳನ್ನು ಮೀರಿದ ವಿಶ್ವಮಾನವ ಸಂದೇಶವನ್ನು ನಾಡಿಗೆ ಸಾರಿದ ಕುವೆಂಪು ಅವರ ಜನ್ಮದಿನದಂದು, ಕರ್ನಾಟಕ ವಿದ್ಯಾರ್ಥಿ ಸಂಘಟನೆ (KVS)ಯು ವಿದ್ಯಾರ್ಥಿ- ಯುವಜನರಿಗಾಗಿ ‘ನೆಲದ ಪದ’ ದೇಸಿ ಯುವ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸ್ಪೂರ್ತಿಧಾಮದಲ್ಲಿ ಒಂದಿಡಿ ದಿನ ಕಾರ್ಯಕ್ರಮ ನಡೆಯಲಿದ್ದು, ನಾಡಿದ ಖ್ಯಾತ ಸಂಗೀತಗಾರ ಡಾ. ಹಂಸಲೇಖ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ವಿವಿಧ ಜಾತಿ, ಧರ್ಮ, ಭಾಷೆ, ಲಿಂಗ, ಪ್ರದೇಶಗಳಿಗೆ ಸೇರಿದ ಸಾಮಾನ್ಯ ಜನರ ಕೂಡಿಬಾಳುವ ಬದುಕಿನ ತತ್ವವನ್ನು ಸಾರುವ, ನಮ್ಮದೇ ನೆಲಮೂಲದ ಹಾಡು, ಕಥೆ, ಕಾವ್ಯ, ಕುಣಿತ, ವಾದ್ಯಗಳ ಲಯವನ್ನು ಮೈಗೂಡಿಸಿಕೊಂಡ ಯುವ ಸಮುದಾಯ ತನ್ನದೇ ಭಾಷೆಯಲ್ಲಿ ಮಾತಾಡಬೇಕು, ಹಾಡಬೇಕು, ಕುಣಿಯಬೇಕು. ಬಹುಆಯಾಮಗಳ ಸಾಂಸ್ಕೃತಿಕ ಪರಿಸರವನ್ನು ಕಟ್ಟಿಕೊಳ್ಳಲು ಮುಂದಡಿಯಿಡಬೇಕು ಎಂಬ ಉದ್ದೇಶದಿಂದ ನೆಲದ ಪದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎನ್ನುತ್ತಾರೆ ಕೆವಿಎಸ್ ಸಂಚಾಲಕರಾದ ಸರೋವರ್ ಬೆಂಕಿಕೆರೆ.

ನೆಲದ ಪದ ಉತ್ಸವವು ಒಂದು ಕಾರ್ಯಕ್ರಮ ಮಾತ್ರವಲ್ಲದೆ, ತಳಸಮುದಾಯಗಳ ಅಸಲೀ ಸಂಸ್ಕೃತಿಯನ್ನು, ದಮನಿಸಲ್ಪಡುತ್ತಿರುವ ಭಾಷೆ-ಧರ್ಮಗಳ ಪ್ರತಿರೋಧದ ದನಿಗಳನ್ನು ಸಮಾಜದ ಎಲ್ಲ ಸ್ತರಗಳ ಯುವಜನರೂ ಒಗ್ಗೂಡಿ ಅಭಿವ್ಯಕ್ತಿಸುವ ಮತ್ತು ಸಂಭ್ರಮಿಸುವ ವಿಶಿಷ್ಟ ಹಬ್ಬವಾಗಿದೆ ಎಂದು ಅವರು ತಿಳಿಸಿದ್ದಾರೆ.
ಫ್ಯಾಸಿಸ್ಟ್ ಶಕ್ತಿಗಳು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಸಮಾಜವನ್ನು ಜಾತಿ-ಧರ್ಮಗಳಾಗಿ ಒಡೆದು, ಸಹಬಾಳ್ವೆಯ ತತ್ವಗಳನ್ನು ಕಳಚಿ ದ್ವೇಷ ಭಿತ್ತುವ ಮೂಲಕ ಬಹುಜನರ ವಿರೋಧಿ ಸಾಂಸ್ಕೃತಿಕ ರಾಜಕಾರಣವನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ. ಬಹುತ್ವದ ತಾತ್ವಿಕತೆಯ ಬದಲು ಏಕರೂಪ ನಿರಂಕುಶತೆಯನ್ನೂ, ನೆಲಮೂಲದ ಸಂಸ್ಕೃತಿಯ ಬದಲು ಆಳುವವರ ಸಂಸ್ಕೃತಿಯನ್ನೂ ಜನರ ಬುದ್ಧಿಯೊಳಕ್ಕೆ ತೂರಿಸುತ್ತಿರುವ ಈ ಸಂದರ್ಭದಲ್ಲಿ ಬಹುಜನರ ಸಂಸ್ಕೃತಿಯನ್ನೂ-ಸಹಬಾಳ್ವೆಯ ತತ್ವವನ್ನು ಸಾಗುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ತಮಟೆ, ನಗಾರಿ, ಮೊಹರಂ ಅಲೈ ಕುಣಿತ ಸೇರಿದಂತೆ ವಿವಿಧ ವಾದ್ಯಗಳು, ರಾಜ್ಯದ ವಿವಿಧ ಪ್ರದೇಶಗಳ ವಿಶಿಷ್ಟ ಜನಪದ ಸಾಂಸ್ಕೃತಿ ಪ್ರಕಾರಗಳು, ತಳಸಮುದಾಯಗಳ ನೆಲಮೂಲದ ಹಾಡು-ಕುಣಿತ, ಸೌಹಾರ್ದತೆಯ ತತ್ವಗಳನ್ನು ಸಾರುವ ಹಾಡು, ಕವಿತೆ ನಾಟಕಗಳು ಪ್ರದರ್ಶನವಾಗಲಿವೆ.
ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಎಂ.ಡಿ ಪಲ್ಲವಿ, ಯುವ ನಿರ್ದೇಶಕ ಮಂಸೋರೆ, ಸಾಹಿತಿ-ನಿರ್ದೇಶಕ ಯೋಗೇಶ್ ಮಾಸ್ಟರ್, ನಿರ್ದೇಶಕ ಬಿ.ಎಂ.ಗಿರಿರಾಜ್, ಯುವ ಗಾಯಕ ಚಿಂತನ್ ವಿಕಾಶ್, ಚಿಂತಕರಾದ ಜಾಪರ್ ಮೊಹಿಯುದ್ದೀನ್, ಜನಪ್ರಿಯ ಕಲಾವಿದ ಜಂಬೆ ಬಾಲು, ಗಾಯಕ ನಾದ ಮಣಿನಾಲ್ಕೂರು, ಗಾಯಕ ವಾಸು ದೀಕ್ಷಿತ್, ಕಲಾವಿದರಾದ ಹ.ರಾ.ಮಹೇಶ್, ಕವಯಿತ್ರಿ ಉಮಾ, ಯುವ ಕಲಾವಿದೆ ಸೌಮಿನಿ, ಕಲಾವಿದ ಸೌರಪಲ್ಲಿ ಚಂದ್ರು ಸೇರಿದಂತೆ ವಿವಿಧ ಕಲಾವಿದರು ಭಾಗಿಯಾಗಲಿದ್ದಾರೆ.

ಕಾರ್ಯಕ್ರಮವು ಡಿ.29ರ ಬುಧವಾರ ಬೆಳಗ್ಗೆ 10-30ರಿಂದ ಆರಂಭವಾಗಲಿದೆ. ಮಾಗಡಿ ರಸ್ತೆಯಲ್ಲಿರುವ ಅಂಜನಾನಗರದ ಬಳಿಯ ಸ್ಫೂರ್ತಿಧಾಮದ ವಿಶಾಲ ಸಾಂಸ್ಕೃತಿಕ ವಾತವಾರಣದಲ್ಲಿ ನೆಲಪ ಪದ ಮೇಳೈಸಲಿದೆ.

ಇದನ್ನೂ ಓದಿ: ಕುವೆಂಪು ಅವರ ಜನುಮದಿನದಂದು ‘ಕೊಲುವೆನೆಂಬ ಭಾಶೆ’ ಕೃತಿ ಬಿಡುಗಡೆ; ಸಂವಾದ


