ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳಿಂದ ಕೊಲ್ಲಲ್ಪಟ್ಟ ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್ ದ್ಯಾನಿಶ್ ಸಿದ್ದೀಕಿ ಅವರಿಗೆ ಮರಣೋತ್ತರವಾಗಿ ಮುಂಬೈ ಪ್ರೆಸ್ ಕ್ಲಬ್ 2020 ರ ‘ವರ್ಷದ ಪತ್ರಕರ್ತ’ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಬುಧವಾರ ಮುಂಬೈ ಪ್ರೆಸ್ ಕ್ಲಬ್ ಸ್ಥಾಪಿಸಿದ ವಾರ್ಷಿಕ ‘ರೆಡ್‌ಇಂಕ್ ಅವಾರ್ಡ್ಸ್ ಫಾರ್ ಎಕ್ಸಲೆನ್ಸ್ ಇನ್ ಜರ್ನಲಿಸಂ’ ಅನ್ನು ವರ್ಚುವಲ್ ಈವೆಂಟ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
“ತನಿಖಾ ಮತ್ತು ಪ್ರಭಾವಶಾಲಿ ಸುದ್ದಿ ಛಾಯಾಗ್ರಹಣಕ್ಕಾಗಿ” ದಾನಿಶ್ ಸಿದ್ದೀಕಿ ಅವರಿಗೆ ಪ್ರಶಸ್ತಿ ನೀಡಲಾಗಿದೆ. ದಾನಿಶ್ ಸಿದ್ದೀಕಿ ಪತ್ನಿ ಫ್ರೆಡ್ರಿಕ್ ಸಿದ್ದೀಕಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
“ಅವರು ಮಾಂತ್ರಿಕ ಕಣ್ಣು ಹೊಂದಿದ್ದ ವ್ಯಕ್ತಿ ಮತ್ತು ಈ ಯುಗದ ಅಗ್ರಗಣ್ಯ ಫೋಟೋ ಜರ್ನಲಿಸ್ಟ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟಿದ್ದಾರೆ. ಒಂದು ಚಿತ್ರವು ಸಾವಿರ ಪದಗಳನ್ನು ಹೇಳಬಲ್ಲದಾದರೆ, ಅವರ ಫೋಟೋಗಳು ಕಾದಂಬರಿಗಳಾಗಿವೆ” ಎಂದು ಮುಖ್ಯ ನ್ಯಾಯಮೂರ್ತಿ ರಮಣ ಅವರು ಸಿದ್ದೀಕಿ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಅಫ್ಘಾನ್‌ನಲ್ಲಿ ಹತರಾದ ಖ್ಯಾತ ಫೋಟೊ ಜರ್ನಲಿಸ್ಟ್ ದಾನಿಶ್ ಕ್ಲಿಕ್ಕಿಸಿದ ಕೆಲವು ಫೋಟೊಗಳು!
83 ವರ್ಷದ ಹಿರಿಯ ಪತ್ರಕರ್ತ ಪ್ರೇಮ್ ಶಂಕರ್ ಝಾ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು. “ಕಠಿಣ ಪರಿಶ್ರಮ, ಅತ್ಯುನ್ನತ ನೈತಿಕ ಮಾನದಂಡಗಳು ಮತ್ತು ಬೌದ್ಧಿಕ ಜ್ಞಾನದಿಂದ ಈ ಕ್ಷೇತ್ರದಲ್ಲಿ ಅಪಾರ ಖ್ಯಾತಿ ಗಳಿಸಿದ್ದಾರೆ” ಎಂದು ಮುಖ್ಯ ನ್ಯಾಯಮೂರ್ತಿ ರಮಣ, ಪ್ರೇಮ್ ಶಂಕರ್ ಝಾ ಅವರನ್ನು ಅಭಿನಂದಿಸಿದರು.
ಮುಂಬೈ ಪ್ರೆಸ್ ಕ್ಲಬ್ ಒಂದು ದಶಕದ ಹಿಂದೆ ಉತ್ತಮ ತನಿಖಾ ಮತ್ತು ವೈಶಿಷ್ಟ್ಯಪೂರ್ಣ ಬರವಣಿಗೆಯನ್ನು ಗುರುತಿಸಲು ದಿ ರೆಡ್‌ಇಂಕ್ ಪ್ರಶಸ್ತಿಗಳನ್ನು ನೀಡುತ್ತಿದೆ. ಈ ಬಾರಿಯ 10 ನೇ ಆವೃತ್ತಿಯ ಭಾಗವಾಗಿ 12 ವಿಭಾಗಗಳಲ್ಲಿ ವಿವಿಧ ಇತರ ಪತ್ರಕರ್ತರಿಗೆ ಪ್ರಶಸ್ತಿ ನೀಡಲಾಯಿತು.
ರಾಯ್ಟರ್ಸ್‌ನ ಮುಖ್ಯ ಫೋಟೋಗ್ರಾಫರ್ ಆಗಿದ್ದ 38 ವರ್ಷದ ದಾನಿಶ್ ಸಿದ್ದೀಕಿ ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಅಫ್ಘಾನ್ ಪಡೆಗಳು ಮತ್ತು ತಾಲಿಬಾನ್ ನಡುವೆ ನಡೆದ ಘರ್ಷಣೆಯಲ್ಲಿ ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಅವರು ಅಫ್ಘಾನ್ ವಿಶೇಷ ಪಡೆಯೊಂದಿಗೆ ವರದಿಗಾಗಿ ಅಲ್ಲಿ ನಿಯೋಜನೆಗೊಂಡಿದ್ದರು ಎನ್ನಲಾಗಿದೆ.
ಆದರೆ, ಪುಲಿಟ್ಜರ್ ಪ್ರಶಸ್ತಿ ವಿಜೇತ ಫೋಟೊ ಜರ್ನಲಿಸ್ಟ್ ದಾನಿಶ್ ಸಿದ್ದೀಕಿ ಅಫ್ಘಾನಿಸ್ತಾನದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿಲ್ಲ. ಅವರ ಗುರುತನ್ನು ಪತ್ತೆ ಹಚ್ಚಿದ ಬಳಿಕ ತಾಲಿಬಾನಿಗಳು ಅವರನ್ನು “ಕ್ರೂರವಾಗಿ ಕೊಂದಿದ್ದಾರೆ” ಎಂದು ಅಮೆರಿಕದ ನಿಯತಕಾಲಿಕವೊಂದರ ವರದಿಯಲ್ಲಿ ಹೇಳಲಾಗಿದೆ.


