ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಮತ್ತು ಓಮಿಕ್ರಾನ್ ರೂಪಂತರದ ಪರಿಸ್ಥಿತಿ ಬಗ್ಗೆ ಗುರುವಾರ (ಜ.13) ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಗುರುವಾರ ಸಂಜೆ 4:30ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೋವಿಡ್-ಸಂಬಂಧಿತ ಪರಿಸ್ಥಿತಿಯ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದೆ.
ಭಾನುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಿದ್ದ ಪ್ರಧಾನಿ, ಜಿಲ್ಲಾ ಮಟ್ಟದಲ್ಲಿ ಸಾಕಷ್ಟು ಆರೋಗ್ಯ ಮೂಲಸೌಕರ್ಯವನ್ನುಸಜ್ಜುಗೊಳಿಸಲು ಮತ್ತು 18 ರಿಂದ 15 ವರ್ಷ ಒಳಗಿನವರ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲು ಕರೆ ನೀಡಿದ್ದರು.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ’ಸಂತ್ರಸ್ತೆಯಾಗಿ ಬದುಕುವುದು ಸುಲಭವಲ್ಲ’ 5 ವರ್ಷಗಳ ಪ್ರಯಾಣ ನೆನಪಿಸಿಕೊಂಡ ನಟಿ ಭಾವನಾ
ಇತರ ಖಾಯಿಲೆ ಇರದ 60 ವರ್ಷಕ್ಕಿಂತ ಮೇಲ್ಪಟ್ಟವರನ್ನು ಹೊರತುಪಡಿಸಿ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ ಲಸಿಕೆ ಅಭಿಯಾನವನ್ನು ಕೂಡಾ ಪ್ರಾರಂಭಿಸಲಾಗಿದೆ.
ಆಯಾ ರಾಜ್ಯಗಳ ನಿರ್ದಿಷ್ಟ ಪರಿಸ್ಥಿತಿಗಳು ಮತ್ತು ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯನ್ನು ಚರ್ಚಿಸಲು ಸಿಎಂಗಳೊಂದಿಗೆ ಸಭೆ ಕರೆಯಲಾಗುವುದು ಎಂದು ಪ್ರಧಾನಿ ಈ ಹಿಂದೆ ಹೇಳಿದ್ದರು.
ದೇಶದಲ್ಲಿ ಇಂದು 2.47 ಲಕ್ಷ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಇದು ಮೂರನೇ ಅಲೆಯಲ್ಲಿ ವರದಿಯಾದ ಅತಿ ಹೆಚ್ಚು ದೈನಂದಿನ ಪ್ರಕರಣಗಳಾಗಿವೆ. ಇದರಿಂದ ಒಟ್ಟು ಕೊರೊನ ಆಪ್ರಕರಣಗಳ ಸಂಖ್ಯೆ 3.63 ಕೋಟಿಗೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು ಓಮಿಕ್ರಾನ್ ರೂಪಾಂತರದ ಪ್ರಕರಣಗಳು 5,488 ದಾಖಲಾಗಿವೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾಗಿರುವ ಮಹಾರಾಷ್ಟ್ರದಲ್ಲಿ ಕಳೆದ 24 ಗಮಟೆಗಳಲ್ಲಿ 46,723 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ ಪ್ರಕರಣಗಳ ಸಂಖ್ಯೆ 70 ಲಕ್ಷ ಗಡಿ ದಾಟಿದೆ. ದೆಹಲಿಯಲ್ಲಿ 27,561 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 21,390 ಹೊಸ ಕೊರೊನಾ ಕೇಸ್‌ಗಳು ವರದಿಯಾಗಿವೆ. ಬೆಂಗಳೂರು ಒಂದರಲ್ಲೆ 15,617 ಸೋಂಕಿತರು ಪತ್ತೆಯಾಗಿದ್ದಾರೆ.


