ಬೆಂಗಳೂರಿನ ಕೆಂಗೇರಿ ಸಮೀಪದ, ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಮಾತು ಬಾರದ ಮತ್ತು ಕಿವಿ ಕೇಳದ ಅಕ್ಕಿಪಿಕ್ಕಿ ಸಮುದಾಯದ ಬಾಲಕಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲ್ಲಲಾಗಿದೆ ಎಂದು ಪೋಷಕರು ಆರೋಪಿಸಿದ್ದು, ಅಧಿಕಾರಿಗಳ ಸಮ್ಮುಖದಲ್ಲಿ ಬುಧವಾರ ಅಂತ್ಯಸಂಸ್ಕಾರ ನಡೆಯಿತು.
“ತಮ್ಮ ಮಗಳ ಮೇಲೆ ಅತ್ಯಾಚಾರ ಎಸಗಿ, ಚಿತ್ರಹಿಂಸೆ ನೀಡಿ ಕ್ರೂರವಾಗಿ ಕೊಲೆ ಮಾಡಲಾಗಿದೆ. ಹಂತಕರನ್ನು ಪೊಲೀಸರು ಬಂಧಿಸುವವರೆಗೆ ಆಕೆಯ ಶವಸಂಸ್ಕಾರ ಮಾಡುವುದಿಲ್ಲ” ಎರಡು ದಿನಗಳಿಂದ ಪೋಷಕರು ಹಠ ಹಿಡಿದ್ದರು. ಕೊನೆಗೆ ಅಧಿಕಾರಿಗಳು ಪಾಲಕರ ಮನವೊಲಿಸಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಥಳಕ್ಕೆ ಧಾವಿಸಿದ ಮೇಲೆ ಸ್ಥಳೀಯ ಸ್ಮಶಾನದಲ್ಲಿ ಬಾಲಕಿಯ ಅಂತ್ಯಸಂಸ್ಕಾರ ನಡೆದಿದೆ.
ಕಳೆದ ಭಾನುವಾರ, 14 ವರ್ಷದ ಕಿವುಡ-ಮೂಕ ಬಾಲಕಿಯನ್ನು ಅಪಹರಿಸಲಾಗಿತ್ತು; ಬಳಿಕ ಆಲೆಯ ಕತ್ತು ನುಲುಚಿ, ಬೆನ್ನು ಮೂಳೆ ಮುರಿದು ಕೊಲೆ ಮಾಡಲಾಗಿದೆ. ಬಿಡದಿ ಹೋಬಳಿ ಬಳಿಯ ಭದ್ರಾಪುರ ಹತ್ತಿರದ ರೈಲ್ವೆ ಟ್ರಾಕ್ ಬಳಿ ಶವ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆರೋಪಿಗಳಿಗಾಗಿ ಬಿಡದಿ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಮೂರು ದಿನಗಳ ಹಿಂದೆ ಅರೆ ನಗ್ನಾವಸ್ಥೆಯಲ್ಲಿ ಶವವಾಗಿ ಪತ್ತೆಯಾದ ಮಾತು ಬಾರದ ಮತ್ತು ಕಿವಿ ಕೇಳಿಸದ ಬಾಲಕಿ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ್ದಾಳೆ. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಅವರು, ಗ್ರಾಮಕ್ಕೆ ಬುಧವಾರ ಭೇಟಿ ನೀಡಿದಾಗ ಕುಟುಂಬದವರು ಮತ್ತು ಗ್ರಾಮಸ್ಥರು ತಮ್ಮ ನೋವು ತೋಡಿಕೊಂಡರು.
“ಮಗಳ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿದರೂ ಪೊಲೀಸರು ನಂಬುತ್ತಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದರೆ ಗೊತ್ತಾಗುತ್ತದೆ ಎನ್ನುತ್ತಿದ್ದಾರೆ. ಆದರೆ, ನಿನ್ನೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರೂ, ಇನ್ನೂ ವರದಿ ಸಿಕ್ಕಿಲ್ಲ ಎನ್ನುತ್ತಿದ್ದಾರೆ. ವರದಿ ಬಂದು ಯಾವ ರೀತಿ ಕೊಲೆ ಮಾಡಿದ್ದಾರೆ? ಅತ್ಯಾಚಾರ ಆಗಿದೆಯೇ ಇಲ್ಲವೊ ಎಂದು ಖಚಿತವಾಗಿ ಹೇಳುವವರೆಗೆ ನಾವು ಮಗಳನ್ನು ಅಂತ್ಯಸಂಸ್ಕಾರ ಮಾಡುವುದಿಲ್ಲ” ಎಂದು ಬೆಳಿಗ್ಗೆಯಿಂದ ಪಾಲಕರು ಪಟ್ಟು ಹಿಡಿದಿದ್ದರು.

ಪರಿಹಾರ ವಿತರಣೆ: ಹತ್ಯೆ ಆಗಿರುವ ಅಪ್ರಾಪ್ತ ವಯಸ್ಸಿನ ಬಾಲಕಿ ಖುಷಿ ಅವರ ಪೋಷಕರಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬುಧವಾರ ಸಾಂತ್ವನ ಹೇಳಿ ಜಿಲ್ಲಾಡಳಿತದ ವತಿಯಿಂದ 4,12,500 ರೂ. ಹಾಗೂ ಪಂಚಾಯಿತಿ ವತಿಯಿಂದ 50 ಸಾವಿರ ಪರಿಹಾರದ ಚೆಕ್ ನೀಡಿದರು.
ಕುಣಿಗಲ್ ಶಾಸಕ ಡಾ. ರಂಗನಾಥ್, ಜಿಲ್ಲಾಧಿಕಾರಿ ಯಶವಂತ್ ಗುರುಕರ್, ಎಸ್‌ಪಿ ಶ್ರೀನಿವಾಸಗೌಡ, ಕಾಂಗ್ರೆಸ್ ಮುಖಂಡ ಗಾಣಕಲ್ ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ| ಕುರಾನ್-ಹದೀಸ್ ಪುಸ್ತಕಗಳನ್ನು ಸುಟ್ಟ ಕಿಡಿಗೇಡಿಗಳು; ಪ್ರತಿಭಟನೆ


