ಸುಡಾನ್‌ನ ಪಶ್ಚಿಮ ಪ್ರದೇಶದ ಡಾರ್ಫರ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಒಂದು ಹಳ್ಳಿ ಸಂಪೂರ್ಣ ನಾಶವಾಗಿದ್ದು, ಸುಮಾರು 1,000 ಜನರು ಸಾವನ್ನಪ್ಪಿದ್ದಾರೆ ಎಂದು ಆ ಪ್ರದೇಶವನ್ನು ನಿಯಂತ್ರಿಸುವ ಬಂಡಾಯ ಗುಂಪು ಸೋಮವಾರ (ಸೆ.1) ತಡರಾತ್ರಿ ಮಾಹಿತಿ ನೀಡಿದೆ.
ಆಗಸ್ಟ್ ಅಂತ್ಯದಲ್ಲಿ ಕೆಲವು ದಿನಗಳ ಕಾಲ ಸುರಿದ ಭಾರೀ ಮಳೆಯ ನಂತರ ಸೆಂಟ್ರಲ್ ಡಾರ್ಫರ್‌ನ ಮರ್ರಾ ಪರ್ವತಗಳಲ್ಲಿರುವ ತಾರಾಸಿನ್ ಗ್ರಾಮದಲ್ಲಿ ಭಾನುವಾರ ಈ ದುರಂತ ಸಂಭವಿಸಿದೆ ಎಂದು ಸುಡಾನ್ ಲಿಬರೇಶನ್ ಮೂವ್‌ಮೆಂಟ್-ಆರ್ಮಿ ಹೇಳಿಕೆಯಲ್ಲಿ ತಿಳಿಸಿದೆ.
ಆರಂಭಿಕ ಮಾಹಿತಿಯ ಪ್ರಕಾರ, ಎಲ್ಲಾ ಹಳ್ಳಿ ನಿವಾಸಿಗಳು ಸಾವನ್ನಪ್ಪಿದ್ದಾರೆ, ಅಂದಾಜು ಒಂದು ಸಾವಿರಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ” ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
ಗ್ರಾಮವು ‘ಸಂಪೂರ್ಣವಾಗಿ ನೆಲಸಮವಾಗಿದೆ’ ಎಂದು ಗುಂಪು ಹೇಳಿದೆ, ಅವಶೇಗಳ ಅಡಿಯಿಂದ ಶವಗಳನ್ನು ಮೇಲೆತ್ತಲು ಸಹಾಯ ಮಾಡುವಂತೆ ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ನೆರವು ಗುಂಪುಗಳಿಗೆ ಮನವಿ ಮಾಡಿದೆ.
ಮರ್ರಾ ಪರ್ವತಗಳ ಸುದ್ದಿವಾಹಿನಿ ಹಂಚಿಕೊಂಡ ದೃಶ್ಯಗಳಲ್ಲಿ ಪರ್ವತ ಶ್ರೇಣಿಗಳ ನಡುವಿನ ಸಮತಟ್ಟಾದ ಪ್ರದೇಶವೊಂದು ಕಂಡುಬಂದಿದ್ದು, ಆ ಪ್ರದೇಶದಲ್ಲಿ ಜನರ ಗುಂಪೊಂದು ಹುಡುಕಾಟ ನಡೆಸುತ್ತಿರುವುದನ್ನು ನೋಡಬಹುದು.
ಏಪ್ರಿಲ್ 2023ರಲ್ಲಿ ರಾಜಧಾನಿ ಖಾರ್ಟೌಮ್ ಮತ್ತು ದೇಶದ ಇತರೆಡೆಗಳಲ್ಲಿ ದೇಶದ ಮಿಲಿಟರಿ ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ನಡುವಿನ ಉದ್ವಿಗ್ನತೆ ಬಹಿರಂಗ ಹೋರಾಟವಾಗಿ ಬದಲಾಗಿದೆ. ಇದರಿಂದ ಸುಡಾನ್ ಅನ್ನು ವಿನಾಶಕಾರಿ ಅಂತರ್ಯುದ್ಧ ಆವರಿಸಿದೆ. ಈ ನಡುವೆಯೇ ಈ ದುರಂತ ಸಂಭವಿಸಿದೆ.
ಸುಡಾನ್ ಸೇನೆ ಮತ್ತು ಆರ್‌ಎಸ್‌ಎಫ್ ನಡುವಿನ ಹೋರಾಟ ಮತ್ತು ಕಠಿಣ ನಿರ್ಬಂಧಗಳಿಂದಾಗಿ, ಮರ್ರಾ ಪರ್ವತಗಳು ಸೇರಿದಂತೆ ಡಾರ್ಫರ್ ಪ್ರದೇಶದ ಹೆಚ್ಚಿನ ಭಾಗಳಿಗೆ ವಿಶ್ವಸಂಸ್ಥೆ ಮತ್ತು ನೆರವು ಗುಂಪುಗಳಿಗೆ ಪ್ರವೇಶಿಸಲು ಅಸಾಧ್ಯವಾಗಿದೆ.
ಮರ್ರಾ ಪರ್ವತ ಪ್ರದೇಶದಲ್ಲಿ ಕೇಂದ್ರೀಕೃತವಾಗಿರುವ ಸುಡಾನ್ ಲಿಬರೇಶನ್ ಮೂವ್‌ಮೆಂಟ್-ಆರ್ಮಿ, ಡಾರ್ಫರ್ ಮತ್ತು ಕೊರ್ಡೊಫಾನ್ ಪ್ರದೇಶಗಳಲ್ಲಿ ಸಕ್ರಿಯವಾಗಿರುವ ಬಹು ಬಂಡಾಯ ಗುಂಪುಗಳಲ್ಲಿ ಒಂದಾಗಿದೆ.
ಮರ್ರಾ ಪರ್ವತಗಳು ಎಲ್-ಫಶರ್‌ನ ನೈಋತ್ಯಕ್ಕೆ 160 ಕಿಲೋಮೀಟರ್ (100 ಮೈಲುಗಳು) ವಿಸ್ತರಿಸಿರುವ ಒರಟಾದ ಜ್ವಾಲಾಮುಖಿ ಸರಪಳಿಯಾಗಿದ್ದು, ಇದು ಮಿಲಿಟರಿ ಮತ್ತು ಆರ್‌ಎಸ್‌ಎಫ್ ನಡುವಿನ ಹೋರಾಟದ ಕೇಂದ್ರಬಿಂದುವಾಗಿದೆ. ಈ ಪ್ರದೇಶವು ಎಲ್-ಫಶರ್ ಮತ್ತು ಸುತ್ತಮುತ್ತಲಿನ ಹೋರಾಟದಿಂದ ಪಲಾಯನ ಮಾಡುವ ಸ್ಥಳಾಂತರಗೊಂಡ ಕುಟುಂಬಗಳಿಗೆ ಕೇಂದ್ರವಾಗಿ ಮಾರ್ಪಟ್ಟಿದೆ.
ಮಿಲಿಟರಿ ಮತ್ತು ಆರ್‌ಎಸ್‌ಎಫ್ ನಡುವಿನ ಸಂಘರ್ಷವು 40,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ, 14 ಮಿಲಿಯನ್‌ಗಿಂತಲೂ ಹೆಚ್ಚು ಜನರು ತಮ್ಮ ಮನೆಗಳನ್ನು ಬಿಟ್ಟು ಪಲಾಯನ ಮಾಡಿದ್ದಾರೆ. ದೇಶದ ಕೆಲವು ಭಾಗಗಳಲ್ಲಿ ಬರಗಾಲ ಆವರಿಸಿ ಜನರು ಜೀವ ಉಳಿಸಿಕೊಳ್ಳಲು ಹುಲ್ಲು ತಿನ್ನುವ ಪರಿಸ್ಥಿತಿ ನಿರ್ಮಿಸಿದೆ.
ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳ ಗುಂಪುಗಳ ಪ್ರಕಾರ, ಜನಾಂಗೀಯ ಪ್ರೇರಿತ ಹತ್ಯೆ ಮತ್ತು ಅತ್ಯಾಚಾರ ಸೇರಿದಂತೆ ಘೋರ ದೌರ್ಜನ್ಯಗಳಿಂದ ಈ ಸಂಘರ್ಷ ಗುರುತಿಸಲ್ಪಟ್ಟಿದೆ. ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯವು ಆಪಾದಿತ ಯುದ್ಧ ಅಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳ ತನಿಖೆ ನಡೆಸುತ್ತಿದೆ.
ತಾರಾಸಿನ್ ಗ್ರಾಮವು ಮಧ್ಯ ಮರ್ರಾ ಪರ್ವತಗಳಲ್ಲಿದೆ. ಇದು ಜ್ವಾಲಾಮುಖಿ ಪ್ರದೇಶವಾಗಿದ್ದು, ಅದರ ಶಿಖರ 3,000 ಮೀಟರ್‌ಗಳಿಗಿಂತ ಹೆಚ್ಚು ಎತ್ತರವಿದೆ. ವಿಶ್ವ ಪರಂಪರೆಯ ತಾಣವಾಗಿರುವ ಈ ಪರ್ವತ ಸರಪಳಿಯು ಸುತ್ತಮುತ್ತಲಿನ ಪ್ರದೇಶಗಳಿಗಿಂತ ಕಡಿಮೆ ತಾಪಮಾನ ಮತ್ತು ಹೆಚ್ಚಿನ ಮಳೆಗೆ ಹೆಸರುವಾಸಿಯಾಗಿದೆ. ಇದು ರಾಜಧಾನಿ ಖಾರ್ಟೌಮ್‌ನಿಂದ ಪಶ್ಚಿಮಕ್ಕೆ 900 ಕಿಲೋಮೀಟರ್‌ಗಳಿಗಿಂತ (560 ಮೈಲುಗಳು) ಹೆಚ್ಚು ದೂರದಲ್ಲಿದೆ.
ಭಾನುವಾರದ ಭೂಕುಸಿತವು ಸುಡಾನ್‌ನ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಮಾರಕ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿದೆ. ಜುಲೈನಿಂದ ಅಕ್ಟೋಬರ್‌ವರೆಗೆ ಮಳೆಯಾಗುವುದರಿಂದ ಪ್ರತಿ ವರ್ಷ ನೂರಾರು ಜನರು ಇಲ್ಲಿ ಸಾಯುತ್ತಾರೆ.
ಪೂರ್ವ ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: 800 ಮಂದಿ ಸಾವು, 2500 ಜನರಿಗೆ ಗಾಯ


