ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಕೇರಳ ಹಾಗೂ ಜಮ್ಮುಕಾಶ್ಮೀರದಲ್ಲಿ ಇಂದು ವಿಶ್ವಾಸಿಗಳು ಈದ್-ಉಲ್-ಫಿತ್ರ್ (ರಂಝಾನ್) ಹಬ್ಬವನ್ನು ಸರಳವಾಗಿ ಆಚರಿಸಿದರು. ಕೊರೊನಾ ಲಾಕ್ ಡೌನ್ ಇರುವುದರಿಂದ ಹಬ್ಬದ ಪ್ರಾರ್ಥನೆಗಳನ್ನು ಮನೆಯಲ್ಲೇ ಮಾಡಲಾಯಿತು.
ಮಸೀದಿಗಳು ಕೊರೊನಾ ಲಾಕ್ ಡೌನ್ ಪ್ರಯುಕ್ತ ಇಂದು ಕೂಡಾ ಮುಚ್ಚಲ್ಪಟ್ಟಿದ್ದವು. ಸರ್ಕಾರದ ನಿರ್ದೇಶನದಂತೆ ಧರ್ಮಗುರುಗಳು ಹಬ್ಬವನ್ನು ಸರಳವಾಗಿ, ಮನೆಯಲ್ಲಿದ್ದೇ ಆಚರಿಸುವಂತೆ ಕರೆ ನೀಡಿದ್ದರು. ಕರ್ನಾಟಕದ ಮಂಗಳೂರು, ಉಡುಪಿ, ಕೇರಳ ಹಾಗೂ ಜಮ್ಮು ಕಾಶ್ಮೀರದಲ್ಲಿ ಇಂದು ಹಬ್ಬ ಆಚರಿಸಲಾಗುತ್ತಿದ್ದು. ದೇಶದ ಇತರೆಡೆ ನಾಳೆ ಹಬ್ಬವನ್ನು ಆಚರಿಸಲಾಗುತ್ತದೆ.


ಇಸ್ಲಾಮಿಕ್ ತಿಂಗಳ ರಂಝಾನ್ ಮುಸ್ಲಿಮರಿಗೆ ಬಹುಮುಖ್ಯ ತಿಂಗಳಾಗಿದ್ದು, ಈ ತಿಂಗಳಲ್ಲಿ ಮೂವತ್ತು ದಿನ ಉಪವಾಸವಿದ್ದು ಆಧ್ಯಾತ್ಮಿಕತೆಯಲ್ಲಿ ತೊಡಗಿರುತ್ತಾರೆ. ಮೂವತ್ತು ದಿನದ ನಂತರ ಶವ್ವಾಲ್ ತಿಂಗಳ ಒಂದನೇ ಚಂದ್ರ ಕಂಡ ದಿನ ಈದ್-ಉಲ್-ಫಿತ್ರ್ ಆಚರಿಸುತ್ತಾರೆ.

ಈ ದಿನದಂದು ತನ್ನ ಖರ್ಚು ವೆಚ್ಚಗಳನ್ನು ಕಳೆದು ನಂತರವೂ ಸಂಪತ್ತು ಉಳಿದಿದ್ದರೆ ಖಡ್ಡಾಯವಾಗಿ ಬಡವರಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಆಹಾರವನ್ನು ನೀಡಬೇಕಾಗುತ್ತದೆ. ಈ ಮೂಲಕ ಈ ಹಬ್ಬದ ಆಚರಣೆ ಪ್ರಾರಂಭಿಸಿ, ಮಸೀದಿ ಅಥವಾ ಈದ್ಗಾಗಳಿಗೆ ತೆರಳಿ ‘ಈದ್ ನಮಾಝ್’ ಮಾಡಲಾಗುತ್ತದೆ. ನಂತರ ಪರಸ್ಪರ ಆಲಿಂಗಿಸಿ, ಕ್ಷೇಮ ವಿಚಾರ ವಿನಿಮಯ ಮಾಡುತ್ತಾರೆ.

ಮನಸ್ತಾಪ ಇದ್ದವರೊಂದಿಗೆ ಕ್ಷಮೆ ಕೇಳಿ ಅವರೊಂದಿಗಿನ ಮನಸ್ತಾಪವನ್ನು ಕೊನೆಗಾಣಿಸುತ್ತಾರೆ. ತಮ್ಮ ಅಗಲಿದ ಹಿರಿಯರ ಖಬರಸ್ಥಾನ ಸಂದರ್ಶಿಸುವುದು, ಸೂಫೀ ಸಂತರ ಸಮಾಧಿಗಳಿಗೆ ಭೇಟಿ ನೀಡಿ ಅಲ್ಲಿ ಪ್ರಾರ್ಥಿಸುವುದು ಸೇರಿದಂತೆ ನೆರೆಮನೆ, ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುತ್ತಾ ಹಬ್ಬವನ್ನು ಆಚರಿಸಲಾಗುತ್ತದೆ.
ಓದಿ: ಬಾಲಕಿ ಜ್ಯೋತಿ 1200 ಕಿ.ಮಿ. ಕ್ರಮಿಸಿದ್ದು ಭಾರತೀಯರ ಸುಂದರವಾದ ಸಾಧನೆಯೆಂದ ಇವಾಂಕ ಟ್ರಂಪ್: ಹಲವರ ಆಕ್ರೋಶ


