1975ರಲ್ಲಿ ವಿಶ್ವಕಪ್ ಟೂರ್ನಿ ಇಂಗ್ಲೆಂಡ್‍ನಲ್ಲಿ ಆರಂಭವಾದಾಗ ಭಾರತ ಕಳಪೆ ಪ್ರದರ್ಶನ ನೀಡಿತ್ತು. 1979ರಲ್ಲಿಯೂ ಅದೇ ಪುನರಾವರ್ತನೆಯಾಯಿತು. ನಂತರ 1983ರಲ್ಲಿ ಭಾರತ ಮೂರನೇ ಬಾರಿಗೆ ವಿಶ್ವಕಪ್ ಕ್ರಿಕೆಟ್ ಆಡಲು ಇಂಗ್ಲೆಂಡ್‍ಗೆ ತೆರಳಿದಾಗ ಇವರು ಪಿಕ್‍ನಿಕ್ ಗೆ ಹೋಗುತ್ತಿದ್ದಾರೆಂಬ ಮೂದಲಿಕೆ ಅಭಿಮಾನಿಗಳಿಂದ ಕೇಳಿಬಂದಿತ್ತು. ತಂಡಕ್ಕೆ ಸಮರ್ಥ ಕೋಚ್ ಇರಲಿಲ್ಲ. ಅನುಭವಿ ನಾಯಕನೂ ಇರಲಿಲ್ಲ. 24 ವರ್ಷದ ಯಂಗ್ ಕ್ಯಾಪ್ಟನ್ ಕಪಿಲ್ ದೇವ್ ತಂಡವನ್ನು ಮುನ್ನಡೆಸಿದ್ದರು.
ಆದರೆ ಅಚ್ಚರಿಯ ರೀತಿಯಲ್ಲಿ ಮೊದಲ ಪಂದ್ಯದಲ್ಲಿ ಎರಡು ಬಾರಿ ವಿಶ್ವಕಪ್ ಗೆದ್ದಿದ್ದ ವೆಸ್ಟ್ ಇಂಡೀಸ್ ತಂಡವನ್ನು ಭಾರತ ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತ್ತು. ಅದೇ ವಿಶ್ವಾಸಯುತ ಆಟವಾಡಿ ಫೈನಲ್ ತಲುಪಿದ ಭಾರತಕ್ಕೆ ಮತ್ತದೆ ವೆಸ್ಟ್ ಇಂಡೀಸ್ ಎದುರಾಳಿ. 60 ಓವರ್‍ಗಳ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಗಳಿಸಿದ್ದು ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ 183 ರನ್. ಗೆಲುವು ಸಾಧ್ಯವಿಲ್ಲ ಎನ್ನುವ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಂತಹ ಒತ್ತಡದಲ್ಲಿಯೂ ಮೊಹಿಂದರ್ ಅಮರನಾಥ್‍ರವರ ಆಲ್‍ರೌಂಡರ್ ಆಟ, ವಿ.ವಿ ರಿಚಡ್ರ್ಸ್ ರವರ ಅಮೋಘ ಕ್ಯಾಚ್ ಪಡೆದ ಕಪಿಲ್ ದೇವ್ ಇನ್ನಿತರ ಕುತೂಹಲಕರ ಅಂಶಗಳಿಂದ ಭಾರತ ಆ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು 140 ರನ್‍ಗಳಿಗೆ ಆಲೌಟ್ ಮಾಡುವ ಮೂಲಕ 43 ರನ್ ಗಳಿಂದ ಜಯಿಸಿ ಮೊದಲ ಬಾರಿಗೆ ವಿಶ್ವಕಪ್ ಎತ್ತಿಹಿಡಿಯಿತು. ವೆಸ್ಟ್ ಇಂಡೀಸ್‍ನ ಹ್ಯಾಟ್ರಿಕ್ ಕನಸನ್ನು ನುಚ್ಚುನೂರು ಮಾಡಿತು ಮತ್ತು ವಿಶ್ವಕಪ್ ಗೆದ್ದ ಎರಡನೇ ದೇಶ ಎಂಬ ಖ್ಯಾತಿ ಪಡೆಯಿತು.

ನಂತರ 1987ರಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಯಿತು. ಅಲ್ಲಿಂದ 2003ರವರೆಗೆ ಭಾರತ ಹೇಳಿಕೊಳ್ಳುವ ಸಾಧನೆ ಮಾಡಲಿಲ್ಲ. 2003ರಲ್ಲಿ ಸೌರವ್ ಗಂಗೂಲಿಯವರ ನೇತೃತ್ವದಲ್ಲಿ ಭಾರತ ಮತ್ತೆ ವಿಜೃಂಭಿಸಿತು. ಸಚಿನ್ ತೆಂಡೂಲ್ಕರ್ ರವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ಫೈನಲ್ ತಲುಪಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಭಾರತ 125 ರನ್ ಗಳ ಅಂತರದಿಂದ ಮಂಡಿಯೂರಿ ರನ್ನರ್ ಅಪ್‍ಗೆ ತೃಪ್ತಿ ಪಟ್ಟುಕೊಂಡಿತ್ತು.
ನಂತರ 2007ರಲ್ಲಿ ರಾಹುಲ್ ದ್ರಾವಿಡ್ ತಂಡವನ್ನು ಮುನ್ನಡೆಸಿದ್ದರು. ಆದರೆ ಭಾರತ ಲೀಗ್ ಪಂದ್ಯದಲ್ಲಿಯೇ ಬಾಂಗ್ಲಾದೇಶದ ವಿರುದ್ಧ ಅಘಾತಕಾರಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತ್ತು. ಭಾರತ ತಂಡದ ವಿರುದ್ಧ ಟೀಕೆಯ ಮಳೆಯೇ ಹರಿದಿತ್ತು.
ನಂತರ 2011ರಲ್ಲಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ದೋನಿಯ ಅದೃಷ್ಟ ಚೆನ್ನಾಗಿತ್ತು. ಭಾರತ ಮತ್ತು ನೆರೆಹೊರೆ ದೇಶಗಳು ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸಿದ್ದವು. ಭಾರತ ತಂಡ ಪರಿಣಾಮಕಾರಿ ಪ್ರದರ್ಶನ ತೋರಿತ್ತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್‍ನಲ್ಲಿ ಶ್ರೀಲಂಕಾ ಎದುರು ಭಾರತ ಭರ್ಜರಿ ಜಯಗಳಿಸಿ 29 ವರ್ಷಗಳ ನಂತರ ಎರಡನೇ ಬಾರಿ ವಿಶ್ವಕಪ್‍ಗೆ ಮುತ್ತಿಟ್ಟಿತು. ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಕಪಿಲ್ ದೇವ್ ನಂತರ ವಿಶ್ವಕಪ್ ಗೆದ್ದುಕೊಟ್ಟ ಆಟಗಾರ ಎಂಬ ದಾಖಲೆ ಧೋನಿ ಪಾಲಾಯಿತು.


2015ರ ವಿಶ್ವಕಪ್ ಅನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿಯಾಗಿ ಆಯೋಜಿಸಿದ್ದವು. ಭಾರತವು ತನ್ನ ಸಾಮಥ್ರ್ಯವನ್ನು ಪಣಕ್ಕೆ ಒಡ್ಡಿತ್ತು. ಆದರೆ 2003ರ ಇತಿಹಾಸ ಮರುಕಳಿಸಿತು. ಆದರೆ ಈ ಬಾರಿ ಸೆಮಿಫೈನಲ್‍ನಲ್ಲಿಯೇ ಬಲಿಷ್ಠ ಆಸ್ಟ್ರೇಲಿಯಾ ಎದುರು ಭಾರತ ಸೋಲುಂಡು ನಿರ್ಗಮಿಸಿತು.
ಈಗ 2019ರ ವಿಶ್ವಕಪ್‍ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಭಾರತ, ವಿಶ್ವ ರ್ಯಾಂಕಿಂಗ್‍ನಲ್ಲಿಯೂ ಭಾರತ 2ನೇ ಸ್ಥಾನದಲ್ಲಿತ್ತು. ಉತ್ಸಾಹಿ ಆಟಗಾರ ವಿರಾಟ್ ಕೊಹ್ಲಿ ನಾಯಕತ್ವದ ಹೊಣೆ ಹೊತ್ತಿದ್ದರು. ಲೀಗ್ ಹಂತದಲ್ಲಿ ನಡೆದ 9 ಪಂದ್ಯಗಳಲ್ಲಿ ಬರೋಬ್ಬರಿ ಏಳು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದಲ್ಲದೇ ಪಾಯಿಂಟ್ ಪಟ್ಟಿಯಲ್ಲಿಯೂ ಅಗ್ರಸ್ಥಾನ ಪಡೆದಿತ್ತು. ಅತಿಹೆಚ್ಚು ಕ್ರಿಕೆಟ್ ಪ್ರೇಮಿಗಳಿರುವ ಭಾರತ ಮತ್ತು ಪಾಕಿಸ್ತಾನದ ಪಂದ್ಯ ರೋಚಕವಾಗಿ ನಡೆದು ಭಾರತ ಜಯಭೇರಿ ಮೊಳಗಿಸಿದೆ. ಮಳೆಯಿಂದ ಲೀಗ್ ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಬೇಕಿದ್ದ ಪಂದ್ಯ ರದ್ದಾದರೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಾತ್ರ ಭಾರತ ಸೋಲನಪ್ಪಿತ್ತು.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಫಾರ್ಮ್‍ನಲ್ಲಿದ್ದರೆ, ಜಸ್ಪ್ರಿತ್ ಬೂಮ್ರ, ಯಜುವೇಂದ್ರ ಚಹಾಲ್, ಮಹಮ್ಮದ್ ಶಮಿ ಬೌಲಿಂಗ್‍ನಲ್ಲಿ ಮಿಂಚುತ್ತಿದ್ದಾರು. ಮಹೇಂದ್ರ ಸಿಂಗ್ ಧೋನಿಗೆ ಇದು ಕೊನೆಯ ವಿಶ್ವಕಪ್ ಆಗಿತ್ತು. ರೋಹಿತ್ ಶರ್ಮಾ ಅತ್ಯಧಿಕ ರನ್ ಗಳಿಸಿದ ಆಟಗಾರ ಮಾತ್ರವಲ್ಲದೇ ಒಂದೇ ಟೂರ್ನಿಯಲ್ಲಿ ಐದು ಶತಕ ಸಿಡಿಸಿ ದಾಖಲೆ ಬರೆದಿದ್ದರು. ಇಂತಹ ಭಾರತ ನ್ಯೂಜಿಲೆಂಡ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸುವ ತವಕದಲ್ಲಿದ್ದರೆ ಮಂಗಳವಾರದ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ನ್ಯೂಜಿಲೆಂಡ್ 46.1 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 211 ರನ್ ಅಷ್ಟೇ ಗಳಿಸಿದೆ. ತೀವ್ರ ಮಳೆಯಿಂದಾಗಿ ಪಂದ್ಯವನ್ನು ಬುಧವಾರ ಎಲ್ಲಿಗೆ ನಿಂತಿದೆಯೋ ಅಲ್ಲಿಂದಲೇ ಆರಂಭಿಸಿದಾಗ ಗೆಲ್ಲಲ್ಲು 240 ರನ್ ಗಳ ಸಾಧಾರಣ ಗುರಿ ಪಡೆದ ಭಾರತ ಗೆಲ್ಲಲೇ ಇಲ್ಲ. 221 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ 18 ರನ್ ಗಳ ಅಂತರದಿಂದ ಸೋಲೊಪ್ಪಿಕೊಂಡಿತು.
ವಿಶ್ವಕಪ್ ಗೆ ಮೂರನೇ ಬಾರಿಗೆ ಮುತ್ತಿಡುವ ಅದ್ಭುತ ಅವಕಾಶದಿಂದ ಭಾರತ ವಂಚಿತವಾಗಿದೆ. ಕ್ರೀಡಾ ಪ್ರೇಮಿಗಳಿಗೆ ಸಾಕಷ್ಟು ನಿರಾಶೆಯಾಗಿದೆ. ಮುಂದಿನ ವರ್ಷ 20-20 ವಿಶ್ವಕಪ್ ಕ್ರಿಕೆಟ್ ನಡೆಯಲಿದೆ. ಅಲ್ಲಾದರೂ ಭಾರತ ಪ್ರಶಸ್ತಿ ಗೆಲ್ಲುವುದೇ ಎಂದು ಕಾದು ನೋಡಬೇಕಿದೆ.


