ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕಿ ಆತಿಶಿ ಮರ್ಲೇನಾ ಅವರು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಪ್ರಮಾಣವಚನ ಭೋದಿಸಿದರು. ಇದೇ ವೇಳೆ ಸೌರಭ್ ಭಾರದ್ವಾಜ್, ಗೋಪಾಲ್ ರಾಯ್, ಇಮ್ರಾನ್ ಹುಸೇನ್, ಖೈಲಾಶ್ ಗೆಹ್ಲೋಟ್ ಮತ್ತು ಮುಖೇಶ್ ಅಹ್ಲಾವತ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
माननीय आतिशी जी ने ली मुख्यमंत्री पद की शपथ🔥
अब @AtishiAAP जी दिल्ली में केजरीवाल जी की काम की राजनीति को बढ़ाएंगी आगे💯 pic.twitter.com/IfN57i0nos
— AAP (@AamAadmiParty) September 21, 2024
ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆ ನೀಡಿರುವ ಹಿನ್ನೆಲೆ, ಆತಿಶಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ.
ದೆಹಲಿಯ ಆಪಾದಿತ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕೇಜ್ರಿವಾಲ್ ಅವರು ಇತ್ತೀಚೆಗೆ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದರು. ಬಳಿಕ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆತಿಶಿ ಅವರನ್ನು ನೂತನ ಸಿಎಂ ಆಗಿ ಆಯ್ಕೆ ಮಾಡಿದ್ದರು.
ಬಿಜೆಪಿಯ ಸುಷ್ಮಾ ಸ್ವರಾಜ್ ಮತ್ತು ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ನಂತರ ಆತಿಶಿ ಅವರು ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಕಲ್ಕಾಜಿ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿರುವ ಅವರು, ಹಿಂದಿನ ಅರವಿಂದ್ ಕೇಜ್ರಿವಾಲ್ ಸರ್ಕಾರದಲ್ಲಿ ಅನೇಕ ಖಾತೆಗಳನ್ನು ಹೊಂದಿದ್ದರು.
ಆತಿಶಿ ದೆಹಲಿಯ ಮುಖ್ಯಮಂತ್ರಿಯಾದ ಅತ್ಯಂತ ಕಿರಿಯ ನಾಯಕಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಸೆಪ್ಟೆಂಬರ್ 26-27ರಂದು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ 70 ಸದಸ್ಯರ ವಿಧಾನಸಭೆಯಲ್ಲಿ ಆತಿಶಿ ಅವರು ತಮ್ಮ ಸರ್ಕಾರದ ಬಹುಮತವನ್ನು ಸಾಬೀತುಪಡಿಸಬೇಕಾಗಿದೆ.
ಇದನ್ನೂ ಓದಿ : ಒಕ್ಕೂಟ ಸರ್ಕಾರದ ಫ್ಯಾಕ್ಟ್ ಚೆಕ್ ಘಟಕಕ್ಕೆ ಬಾಂಬೆ ಹೈಕೋರ್ಟ್ ತಡೆ; ತೀರ್ಪು ಸ್ವಾಗತಿಸಿದ ಕಾಂಗ್ರೆಸ್


