Homeಕರ್ನಾಟಕದೊಡ್ಡಿಪಾಳ್ಯ ನರಸಿಂಹಮೂರ್ತಿಯ ಬಂಧನದ ಸುತ್ತ ಮುತ್ತ... ಸಾಮಾಜಿಕ ತಾಲತಾಣಗಳಲ್ಲಿ ಬಂದ ಬರಹಗಳು

ದೊಡ್ಡಿಪಾಳ್ಯ ನರಸಿಂಹಮೂರ್ತಿಯ ಬಂಧನದ ಸುತ್ತ ಮುತ್ತ… ಸಾಮಾಜಿಕ ತಾಲತಾಣಗಳಲ್ಲಿ ಬಂದ ಬರಹಗಳು

- Advertisement -
- Advertisement -

ಪತ್ರಕರ್ತ, ಸ್ವರಾಜ್ಯ ಇಂಡಿಯಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹ ಮೂರ್ತಿಯವರ ಬಂಧನವನ್ನು ಖಂಡಿಸಿ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಮತ್ತೊರ್ವ ಪತ್ರಕರ್ತರಾದ ಕುಮಾರ್‌ ಬುರಡಿಕಟ್ಟಿಯವರು ಫೇಸ್‌ಬುಕ್‌ನಲ್ಲಿ ಬರೆದಿದ್ದ ಬರಹ ಇಲ್ಲಿದೆ…

ಗೆಳೆಯ ದೊಡ್ಡಿಪಾಳ್ಯ ನರಸಿಂಹಮೂರ್ತಿ ದಿನಾಂಕ 23ರಂದು ಹೊಸಪೇಟೆಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ಫೋನ್ ಮಾಡಿದ್ದರು. ಮರುದಿನ, ಅಂದರೆ 24ನೇ ತಾರೀಖು ರಾಯಚೂರಿನಲ್ಲಿ ಇನ್ನೊಂದು ಸಭೆ ಏರ್ಪಾಡಾಗಿತ್ತು. ಆ ಸಭೆಗೆ ಯಾರನ್ನೆಲ್ಲಾ ಆಹ್ವಾನಿಸಬಹುದು ಎಂಬುದನ್ನು ಚರ್ಚಿಸುವುದಕ್ಕೆ ಕರೆ ಮಾಡಿದ್ದರು. ನಾನೂ ರಾಯಚೂರಿನಲ್ಲಿ ಮೂರು ವರ್ಷ ಪತ್ರಕರ್ತನಾಗಿ ಕೆಲಸ ಮಾಡಿದ್ದರಿಂದ ಅನೇಕ ಸಾಮಾಜಿಕ, ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ನಾಯಕರ, ಕಾರ್ಯಕರ್ತರ ಸಂಪರ್ಕ, ಒಡನಾಟ ನನಗಿತ್ತು. ಯಾರ್ಯಾರನ್ನೆಲ್ಲಾ ಸಭೆಗೆ ಆಹ್ವಾನಿಸಬಹುದು ಎಂಬುದನ್ನು ಯೋಚಿಸಿ ಹೇಳುತ್ತೇನೆ ಎಂದು ಪೋನ್ ಇಟ್ಟಿದ್ದೆ. ಕೂಡಲೇ ಆ ವಿಷಯವನ್ನು ಮರೆತೂ ಬಿಟ್ಟಿದ್ದೆ.

ಬೆಳ್ಳಂಬಳಗ್ಗೆ ನರಸಿಂಹಮೂರ್ತಿ ತನ್ನ ಸ್ನೇಹಿತರೊಡಗೂಡಿ ಹೊಸಪೇಟೆಯಿಂದ ರಾಯಚೂರಿನ ಕಡೆ ಹೊರಟಿದ್ದರು. ಕಾರ್ ಡ್ರೈವಿಂಗ್ ಜವಾಬ್ದಾರಿಯನ್ನು ಸ್ನೇಹಿತ ಸುನೀಲ್ ಸಿರ್ಸಂಗಿಗೆ ಕೊಟ್ಟು ಇವರು ಪಕ್ಕದ ಸೀಟಿನಲ್ಲಿ ಕುಳಿತು ಮತ್ತೆ ನನಗೆ ಕಾಲ್ ಮಾಡಿದರು. ಯಾರು ಯಾರನ್ನು ಸಭೆಗೆ ಆಹ್ವಾನಿಸಬಹುದು ಎಂಬುದನ್ನು ಉದ್ದಕ್ಕೂ ನನ್ನೊಂದಿಗೆ ಚರ್ಚಿಸುತ್ತಾ ಬಂದರು. ನಾನು ಕೆಲವು ಹೆಸರುಗಳನ್ನು ಸೂಚಿಸಿದೆ, ಅವರ ಮೊಬೈಲ್ ನಂಬರುಗಳನ್ನು ಕೊಟ್ಟೆ. ನಂತರ ನಾನೂ ಕೆಲವರಿಗೆ ಫೋನ್ ಮಾಡಿ ಹೇಳಿದೆ. ಬೆಳಗ್ಗೆ ಹನ್ನೊಂದು ಗಂಟೆಗೆ ಎನ್.ಜಿ.ಓ. ಹಾಲ್ ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದರಿಂದ ಇಷ್ಟು ತಡವಾಗಿ ಹೇಳಿದರೆ ದೂರದಲ್ಲಿರುವವರಿಗೆ ಬರುವುದಕ್ಕೆ ಕಷ್ಟವಾಗಬಹುದು ಎಂದು ಕಾರ್ಯಕ್ರಮ ಮುಗಿದ ಮೇಲಾದರೂ ಅಂಥವರನ್ನು ಖುದ್ದಾಗಿ ಭೇಟಿಯಾಗಿ ಎಂಬ ಸಲಹೆಯನ್ನೂ ಕೊಟ್ಟೆ. ಹೊಸಪೇಟೆಯಿಂದ ರಾಯಚೂರು ಮುಟ್ಟುವ ತನಕ ಅವರು ನಿರಂತರವಾಗಿ ಅನೇಕ ಮಂದಿಗೆ ಕಾಲ್ ಮಾಡಿ ಆಹ್ವಾನಿಸುತ್ತಾ ಬಂದರು. ಹನ್ನೊಂದು ಗಂಟೆಯ ಹೊತ್ತಿಗೆ ಕಾರ್ಯಕ್ರಮವೂ ಶುರುವಾಗಿ ಎರಡು ತಾಸಿನಲ್ಲಿ ಮುಕ್ತಾಯವೂ ಆಯಿತು. ಸುಮಾರು ಒಂದು ನೂರೈವತ್ತು, ಇನ್ನೂರು ಜನ ಸೇರಿದ್ದರು ಅನ್ನಿಸುತ್ತೆ.

ಕಾರ್ಯಕ್ರಮ ಮುಗಿದ ತಕ್ಷಣ ಮತ್ತೆ ನರಸಿಂಹಮೂರ್ತಿಯಿಂದ ನನಗೊಂದು ಕರೆ ಬಂತು, ಮಧ್ಯಾಹ್ನ 2.20ಕ್ಕೆ. ನಾನು ಗಾಡಿ ಓಡಿಸುತ್ತಿದ್ದೆ, ಫೋನ್ ಎತ್ತಲಿಲ್ಲ. ಮತ್ತೆ ಕರೆ ಬಂತು. ಗಾಡಿ ಸೈಡಿಗೆ ನಿಲ್ಲಿಸಿ ಫೋನ್ ರಿಸೀವ್ ಮಾಡಿದೆ.

“ನಿಮ್ಮನ್ನು ಡಿಎಸ್ಪಿ ಸಾಹೇಬ್ರು ಕರೀತಿದ್ದಾರೆ, ಬನ್ನಿ ಹೋಗೋಣ ಅಂತ ಪೊಲೀಸರು ನನ್ನನ್ನು ಕರೀತಿದ್ದಾರೆ. ಅಲ್ಲೊಂದು ಪೊಲೀಸ್ ವೆಹಿಕಲ್ ಕೂಡ ನಿಂತಿದೆ” ಎಂದರು.

“ನಿಮಗೇನು ಪೊಲೀಸರು, ಪೊಲೀಸ್ ಸ್ಟೇಷನ್ನು ಹೊಸತಾ. ಹೋಗಿ, ಗೌರಿ ಲಂಕೇಶ್ ಪತ್ರಿಕೆಯ ವಾರಸುದಾರಿಕೆಯನ್ನು ಮುಂದುವರಿಸುತ್ತಿರುವ ‘ನ್ಯಾಯಪಥ’ ಪತ್ರಿಕೆಯ ಬಗ್ಗೆ ಒಂದಿಷ್ಟು ಮಾಹಿತಿ ಕೇಳಬಹುದು. ಎಲ್ಲಾ ಮಾತಾಡಿಕೊಂಡು ಬಾ. ಅವರ ಕೆಲಸ ಅವರು ಮಾಡ್ತಾರೆ, ನಿಮ್ಮ ಕೆಲಸ ನೀವು ಮಾಡಿ,” ಎಂದೆ.

ಹೀಗೆ ಪೊಲೀಸ್ ಸ್ಟೇಷನ್ನಿಗೆ ಹೋದ ಮನುಷ್ಯ ಮತ್ತೆ ವಾಪಾಸು ಬರಲಿಲ್ಲ. ಮಧ್ಯಾಹ್ನ 3.15ಕ್ಕೆ ಮತ್ತೆ ಕಾಲ್ ಮಾಡಿದರು.

“ಇಪ್ಪತ್ತೈದು ವರ್ಷದ ಹಿಂದೆ ರಾಯಚೂರಿನ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ನಾಲ್ಕು ಕೇಸುಗಳಲ್ಲಿ ವಿನೋದ್ ಎಂಬ ವ್ಯಕ್ತಿ ಪೊಲೀಸರಿಗೆ ವಾಂಟೆಡ್ ಅಂತೆ. ಆತ ತಲೆಮರೆಸಿಕೊಂಡಿದ್ದಾನಂತೆ. ಅವನೇ ನಾನು ಅಂತ ಹಿಡ್ಕಂಡು ಕುಂತಾರಲ್ಲಪ್ಪ ಇವ್ರು” ಅಂದ.

ನಾನೂ ಅದನ್ನು ಲಘುವಾಗಿ ತೆಗೆದುಕೊಂಡೆ. ಸ್ವಲ್ಪ ಆಳಕ್ಕಿಳಿದು ತನಿಖೆ ಮಾಡಿದ್ರೂ ಇವರು ಅವರಲ್ಲ ಅಂತ ಪೊಲೀಸರಿಗೆ ಗೊತ್ತಾಗುತ್ತೆ. ಸಾರಿ ಕೇಳಿ ಬಿಟ್ಟುಕಳಿಸ್ತಾರೆ ಎಂಬುದು ನನ್ನ ಎಣಿಕೆಯಾಗಿತ್ತು. ತಾನು ಪೊಲೀಸರಿಗೆ ಬೇಕಾದ ವಿನೋದ್ ಅಲ್ಲ ಎಂಬ ಖಾತ್ರಿ ನರಸಿಂಹಮೂರ್ತಿಗೆ ನನಗಿಂತ ಖಚಿತವಾಗಿ ಗೊತ್ತಿತ್ತಾದ್ದರಿಂದ ಆತನೂ ನಿರಾಳವಾಗಿದ್ದ. ಒಂದೆರಡು ತಾಸಿನಲ್ಲಿ ತನ್ನ ಹಿನ್ನೆಲೆಯನ್ನು ಚೆಕ್ ಮಾಡಿಕೊಂಡು, ತಾನು ವಿನೋದ್ ಅಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ಬಿಟ್ಟುಕಳಿಸುತ್ತಾರೆ ಎಂಬ ಎಣಿಕೆಯಲ್ಲೇ ಅವರೂ ಇದ್ದರು.

ಆದರೆ, ಆದದ್ದೇ ಬೇರೆ. ಮಧ್ಯಾಹ್ನ ಎರಡೂವರೆಯಿಂದ ಶುರುವಾದ ವಿಚಾರಣೆ ಮುಗಿಯುವ ಲಕ್ಷಣಗಳೇ ಕಾಣಲಿಲ್ಲ. ನಾನು ಸಂಜೆ ಐದೂವರೆ ಹೊತ್ತಿಗೆ ರಾಯಚೂರು ಎಸ್ಪಿ ಸಿ.ಬಿ. ವೇದಮೂರ್ತಿಯವರಿಗೆ ಫೋನ್ ಮಾಡಿದೆ.

“ಹೌದಾ, ಯಾರನ್ನೂ ವಿಚಾರಣೆಗೆ ಕರೆದಿರುವ ಮಾಹಿತಿ ನನಗಿಲ್ಲ. ಸ್ವಲ್ಪ ವಿಚಾರಿಸಿ ನಿಮಗೆ ಹೇಳ್ತೇನೆ” ಅಂದ್ರು ಎಸ್ಪಿ ಸಾಹೇಬರು. ವಿಷಯ ಏನಪ್ಪಾ ಅಂದ್ರೆ, ಎಸ್ಪಿಯವರು ನನಗೆ ಈ ಮಾತನ್ನು ಹೇಳುವ ಸಮಯದಲ್ಲಿ ಅವರು ನರಸಿಂಹಮೂರ್ತಿಯ ಎದುರೇ ಕುಳಿತುಕೊಂಡು ಖುದ್ದಾಗಿ ಅವರೇ ವಿಚಾರಣೆ ಮಾಡುತ್ತಿದ್ದರು. ಇಷ್ಟು ವರ್ಷ ಪತ್ರಿಕೋದ್ಯಮದಲ್ಲಿ ಪಳಗಿದ್ದೀವಿ, ಅಷ್ಟು ಗೊತ್ತಾಗಲ್ವಾ ನಮಗೆ?

ಎಸ್ಪಿ ಹೇಳುತ್ತಿರುವುದು ಸುಳ್ಳು ಎಂದು ಖಚಿತವಾಗುತ್ತಿದ್ದಂತೆಯೇ ಪೊಲೀಸರು ಏನೋ ಷಡ್ಯಂತ್ರ ರಚಿಸುತ್ತಿದ್ದಾರೆ ಎಂಬು ನನಗೂ ಖಾತ್ರಿ ಆಯಿತು. ಕೂಡಲೇ ನಾನು ರಾಯಚೂರಿನ ಕೆಲವು ಪತ್ರಕರ್ತರಿಗೆ ಫೋನಾಯಿಸಿ ವಿಷಯ ತಿಳಿಸಿದೆ. ಎಸ್ಪಿಗೆ ಒಂದಾದ ಮೇಲೆ ಒಂದರಂತೆ ಫೋನು ಬರಲಾರಂಭಿಸಿದವು. ದೃಶ್ಯ ಮಾಧ್ಯಮದವರು ನರಸಿಂಹಮೂರ್ತಿಯ ವಿಚಾರಣೆ ನಡೆಯುತ್ತಿದ್ದ ಟ್ರಾಫಿಕ್ ಪೊಲೀಸ್ ಸ್ಟೇಷನ್ನಿನ ಮುಂದೆ ಜಮಾಯಿಸಿದರು. ಆಗ ಅನಿವಾರ್ಯವಾಗಿ ಎಸ್ಪಿಯವರು ಒಪ್ಪಿಕೊಂಡರು.

“ವಿಚಾರಣೆ ಮಾಡ್ತಾ ಇದ್ದೀವಿ. ನಮಗೆ ಇನ್ನೂ ಏನೂ confirm ಆಗಿಲ್ಲ. ಆದ ತಕ್ಷಣ ನಾವೇ ಪತ್ರಿಕಾಗೋಷ್ಠಿ ಕರೆದು ಹೇಳ್ತೀವಿ,” ಎಂದು ಪೊಲೀಸರು ಮಾಧ್ಯಮದವರಿಗೆ ತಿಳಿಸಿದರು. ಮಾಧ್ಯಮದವರು ಮಾತ್ರ ಅಲ್ಲಿಂದ ಕದಲಲಿಲ್ಲ. ವಿಚಾರಣೆ ಮುಂದುವರೆಯಿತು. ತಡ ರಾತ್ರಿಯ ತನಕ. ಆದರೂ ಇವರೇ ವಿನೋದ್ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದಕ್ಕೆ ಪೊಲೀಸರಿಗೆ ಆಗಲಿಲ್ಲ. ಕೊನೆಗೆ ರಾತ್ರಿ ಅವರನ್ನು ಟ್ರಾಫಿಕ್ ಪೊಲೀಸ್ ಠಾಣೆಯಿಂದ ಎಸ್ಪಿ ಆಫೀಸ್ ಕಾಂಪೌಂಡಿನಲ್ಲಿರುವ ರಾಯಚೂರು ಗ್ರಾಮೀಣ ಪೊಲೀಸ್ ಸ್ಟೇಷನ್ನಿಗೆ ಸ್ಥಳಾಂತರಿಸಿ ಅಲ್ಲಿ ಮತ್ತೆ ವಿಚಾರಣೆ ಮುಂದುವರೆಸಲಾಯಿತು. ರಾತ್ರಿಯೆಲ್ಲಾ ವಿಚಾರಣೆ ಮಾಡಿದರೂ ನರಸಿಂಹಮೂರ್ತಿಯೇ ವಿನೋದ್ ಎಂದು ಸಾಬೀತು ಮಾಡುವಂತಹ ಏನೂ ಆಧಾರಗಳು ಪೊಲೀಸರಿಗೆ ಸಿಗಲಿಲ್ಲ. ಅವರ ಬಳಿಯಿದ್ದ ಏಕೈಕ ಆಧಾರ ಎಂದರೆ ಅಂದು ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡಿದ್ದ ಪೊಲೀಸ್ ಪೇದೆಯೊಬ್ಬ ಇವರೇ ವಿನೋದ್ ಎಂದು ಗುರುತಿಸಿದ್ದಾರೆ ಎಂಬುದಷ್ಟೆ. ಅದು ಪೊಲಿಸ್ ಸಾಕ್ಷಿಯೇ ಹೊರತು ಸ್ವತಂತ್ರ ಸಾಕ್ಷಿಯಲ್ಲ. ಈ ಸಾಕ್ಷಿಯ ಸೃಷ್ಟಿಯೂ ಕೂಡ ನರಸಿಂಹಮೂರ್ತಿಯವರನ್ನು ಸುಳ್ಳು ಕೇಸುಗಳಲ್ಲಿ ಸಿಕ್ಕಿಸುವ ಕುತಂತ್ರದ ಭಾಗವಾಗಿತ್ತು.

ಮರುದಿನ ಬೆಳಿಗ್ಗೆ, ಅಂದರೆ ದಿನಾಂಕ 25ರಂದು, ಪೊಲೀಸರು ತಮ್ಮದೇ ಪೊಲೀಸ್ ಸಾಕ್ಷಿಯ ಆಧಾರದಲ್ಲಿ ನರಸಿಂಹಮೂರ್ತಿಯೇ ವಿನೋದ್ ಎಂಬ ತೀರ್ಮಾನಕ್ಕೆ ಬಂದು ಹಳೆಯ ಕೆಸುಗಳಲ್ಲಿ ಅವರನ್ನು ಫಿಟ್ ಮಾಡುವ ಕೆಲಸಕ್ಕೆ ಅಧಿಕೃತ ಚಾಲನೆ ಕೊಟ್ಟಿದ್ದರು. ಮಧ್ಯಾಹ್ನ ಎಸ್ಪಿ ವೇದಮೂರ್ತಿಯವರು ಪತ್ರಿಕಾಗೋಷ್ಠಿ ಕರೆದು ಈ ವಿಷಯವನ್ನು ಬಹಿರಂಗಪಡಿಸಿದರು. ಒಂದು ಪತ್ರಿಕಾ ಹೇಳಿಕೆಯನ್ನೂ ಅಲ್ಲೇ ಬಿಡುಗಡೆ ಮಾಡಿದರು (ಅದರ ಫೋಟೋಕಾಪಿ ಲಗತ್ತಿಸಿದ್ದೇನೆ).

ಪತ್ರಿಕಾಗೋಷ್ಠಿಯಲ್ಲಿ ವೇದಮೂರ್ತಿಯವರು ಆಡಿದ ಮಾತುಗಳು ಮತ್ತು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ ಸಾರಾಂಶ ಏನೆಂದರೆ: 1994ರಲ್ಲಿ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮತ್ತು ರಾಯಚೂರು ನಗರದ ನೇತಾಜಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಾಗೂ 2001ರಲ್ಲಿ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ಅಂದರೆ ಒಟ್ಟು ನಾಲ್ಕು ಪ್ರಕರಣಗಳಲ್ಲಿ ವಿನೋದ್ ಎಂಬ ವ್ಯಕ್ತಿ ಆರೋಪಿಯಾಗಿದ್ದಾನೆ. ಇವು ಕೊಲೆಯತ್ನ, ಅಕ್ರಮ ಶಸ್ತ್ರಾಸ್ತ್ರ (fire arms) ಬಳಕೆ, ಅಕ್ರಮ ಸ್ಫೋಟಕ (explosives) ಬಳಕೆಯಂತಹ ಗಂಭೀರ ಸ್ವರೂಪದ ಆರೋಪಗಳಿಗಾಗಿ ದಾಖಲಾದ ಕೇಸುಗಳು. ಆದರೆ, ಈ ಪ್ರಕರಣಗಳಲ್ಲಿ ಆರೋಪಿಯಾಗಿರುವ ವಿನೋದ್ ಆವತ್ತಿನಿಂದಲೂ ಪೊಲೀಸರ ಕೈಗೆ ಸಿಕ್ಕಿಲ್ಲ. 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈಗ 25 ವರ್ಷಗಳ ನಂತರ ಆತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಹೆಸರಿನಲ್ಲಿ ಪೊಲೀಸರಿಗೆ ಸಿಕ್ಕಿದ್ದಾನೆ.

ನರಸಿಂಹಮೂರ್ತಿಯವರನ್ನು ಕಳೆದ 25 ವರ್ಷಗಳಿಂದ ನೋಡಿದ ಯಾರಿಗೇ ಆದರೂ ಎಸ್ಪಿಯವರ ಈ ಮಾತುಗಳು, ಪತ್ರಿಕಾ ಹೇಳಿಕೆಯ ಸಾಲುಗಳು ಪೊಲೀಸ್ ಇಲಾಖೆಯನ್ನೇ ಅಪಹಾಸ್ಯಕ್ಕೀಡುಮಾಡುತ್ತಿವೆ ಎನ್ನಿಸದಿರದು.

ಏಕೆಂದರೆ, ಪೊಲೀಸರು ಆರೋಪಿಸುತ್ತಿರುವಂತೆ 1994ರಿಂದ 2019ರ ನಡುವಿನ ಕಾಲು ಶತಮಾನದ ಅವಧಿಯಲ್ಲಿ ನರಸಿಂಹಮೂರ್ತಿ ಎಲ್ಲೂ ತಲೆಮರೆಸಿಕೊಂಡಿರಲಿಲ್ಲ. ಬೆಂಗಳೂರಿನಲ್ಲಿ ತನ್ನ ಹೆಂಡತಿ ಮಕ್ಕಳೊಂದಿಗೆ ಬಹಿರಂಗವಾಗಿ ನೆಲಸಿದ್ದರು. 1992ಕ್ಕೂ ಮುಂಚೆ ಅವರು ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯಲ್ಲಿ ಬರುವ ದೊಡ್ಡಿಪಾಳ್ಯ ಎಂಬ ತಮ್ಮ ಸ್ವಂತ ಊರಿನಲ್ಲಿ ರೇಷ್ಮೆಹುಳು ಸಂಸ್ಕರಣದ ಅದ್ಯಾವುದೋ ಫ್ಯಾಕ್ಟರಿ ಹಾಕಿದ್ದರು. ಒಂದಿಷ್ಟು ಮಂದಿಗೆ ಕೆಲಸ ಕೊಟ್ಟು ಉದ್ಯೋಗದಾತರೂ ಆಗಿದ್ದರು. ಆಮೇಲೆ ಕೈಸುಟ್ಟುಕೊಂಡು ಫ್ಯಾಕ್ಟರಿಗೆ ಮತ್ತು ಫ್ಯಾಕ್ಟರಿ ಮಾಡುವ ಕನಸಿಗೆ ಪರ್ಮನೆಂಟಾಗಿ ಶಟರ್ ಎಳೆದು ಬೆಂಗಳೂರಿಗೆ ಬಂದರು.

ತಮ್ಮ ಮಕ್ಕಳೊಂದಿಗೆ ದೊಡ್ಡಿಪಾಳ್ಯ ನರಸಿಂಹಮೂರ್ತಿ

ನರಸಿಂಹಮೂರ್ತಿ ಮತ್ತು ಅವರ ಅಣ್ಣ ದೊಡ್ಡಿಪಾಳ್ಯದಲ್ಲಿದ್ದ ತಮ್ಮ ಕುಟುಂಬದ ಆಸ್ತಿಯನ್ನು ಮಾರಿ ಬೆಂಗಳೂರಿನ ಕೆಂಗೇರಿಯಲ್ಲಿ ವಾಣಿಜ್ಯ ಕಟ್ಟಡಗಳನ್ನು ಮಾಡಿಕೊಂಡರು. ಆ ಕಟ್ಟಗಳಲ್ಲೇ ಅವರು ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿಗಳನ್ನು ಇಟ್ಟು ವ್ಯಾಪಾರ ಮಾಡಲಾರಂಭಿಸಿದರು. ಅದಕ್ಕಾಗಿ ಬ್ಯಾಂಕಿನಿಂದ ಸಾಲಗಳನ್ನು ಪಡೆದರು. ಈ ಎಲ್ಲಾ ವ್ಯವಹಾರಗಳು ಬಹಿರಂಗವಾಗಿ ನಡೆದಿದ್ದು ಎಲ್ಲದಕ್ಕೂ ದಾಖಲೆಗಳಿವೆ. ಕೆಂಗೇರಿಯಲ್ಲೇ ಒಂದೊಂದು ಬಾಡಿಗೆ ಮನೆ ಹಿಡಿದು ಅಣ್ಣ, ತಮ್ಮ ಪ್ರತ್ಯೇಕವಾಗಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಾ ಬಂದಿದ್ದಾರೆ. ಹೀಗಿದ್ದರೂ ರಾಯಚೂರು ಪೊಲೀಸರು ಮಾತ್ರ ನರಸಿಂಹಮೂರ್ತಿ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದರು ಎನ್ನುತ್ತಾರೆ.

ತಮ್ಮ ಉದ್ಯಮದ ಜೊತೆ ಜೊತೆಗೇ ಇವರು ಸಾಮಾಜಿಕ ಚಳವಳಿಗಳಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ಅದರ ಭಾಗವಾಗಿಯೇ ಹಲವು ಭಾರಿ ಶಿವಮೊಗ್ಗಕ್ಕೂ ಬಂದಿದ್ದರು. ನಾನು ಶಿವಮೊಗ್ಗದಲ್ಲಿ ಪಿಯೂಸಿ ಓದುತ್ತಿದ್ದಾಗಿನಿಂದಲೂ, ಅಂದರೆ 1996ರಿಂದಲೂ ನಾವನನ್ನು ಬಹಳ ಚೆನ್ನಾಗಿ ಬಲ್ಲೆ. ನಾವಿಬ್ಬರೂ ಜೊತೆಗೂಡಿ ಅನೇಕ ಸಭೆಸಮಾರಂಭಗಳಲ್ಲಿ ಬಹಿರಂಗವಾಗಿ ಮಾತಾಡಿದ್ದೇವೆ; ಅನೇಕ ಹೋರಾಟಗಳಲ್ಲಿ ಜೊತೆಗೂಡಿ ಭಾಗವಹಿಸಿದ್ದೇವೆ. ಅದರಲ್ಲೂ ವಿಶೇಷವಾಗಿ, ಭದ್ರಾವತಿಯ ವಿಸ್ವೇಸ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಖಾಸಗಿಕರಣ, ಕಾಗದ ಕಾರ್ಖಾನೆಯ ಖಾಸಗಿಕರಣದ ವಿರುದ್ಧದ ಹೋರಾಟಗಳಲ್ಲಿ ನಾವಿಬ್ಬರೂ ಜೊತೆಗೂಡಿ ವರ್ಷಗಟ್ಟಲೆ ಕೆಲಸ ಮಾಡಿದ್ದೇವೆ. 1997-98ರ ಅವಧಿಯಲ್ಲಿ ಕರ್ನಾಟಕ ಸರ್ಕಾರ ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಬ ರೈತವಿರೋಧಿ, ಜನವಿರೋಧಿ, ರಿಯಲ್ ಎಸ್ಟೇಟ್ ದಂಧೆಯ ಯೋಜನೆಗೆ ಹಸಿರು ನಿಶಾನೆ ತೋರಿಸಲು ಹವಣಿಸುತ್ತಿದ್ದಾಗ ನಾವೆಲ್ಲಾ ಒಟ್ಟುಗೂಡಿ ದೊಡ್ಡ ಮಟ್ಟದ ಚಳವಳಿ ರೂಪಿಸಿದ್ದೆವು. ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮದ್ದೂರು ಕೇಂದ್ರಿತವಾಗಿ ವಿವಿಧ ತಂಡಗಳನ್ನು ರಚಿಸಿಕೊಂಡು ನಾವು ಹಳ್ಳಿಹಳ್ಳಿಗೆ ಹೋಗಿ ಸಭೆ ನಡೆಸಿ ಜನಜಾಗೃತಿ ಮಾಡುತ್ತಿದ್ದರೆ ದೊಡ್ಡಿಪಾಳ್ಯ ನರಸಿಂಹಮೂರ್ತಿ ಬೆಂಗಳೂರಿನಿಂದ – ಮೈಸೂರಿನ ತನಕ ಬೈಕಿನಲ್ಲಿ ಸುತ್ತಾಡುತ್ತಾ ಈ ಅಷ್ಟೂ ತಂಡಗಳನ್ನು coordinate ಮಾಡುತ್ತಿದ್ದರು. ನಾನು ಚನ್ನಪಟ್ಟಣ ತಂಡವನ್ನು ಮುನ್ನೆಡಿಸುತ್ತಿದ್ದೆ. ನಮ್ಮ ತಂಡದ ಜೊತೆಗೂ ಹಲವು ಬಾರಿ ಬಂದು ನಾವು ನಡೆಸುತ್ತಿದ್ದ ಸಭೆಗಳಲ್ಲಿ ಅವರು ಭಾಗವಹಿಸಿದ್ದರು. ಇವೆಲ್ಲವೂ ಬಹಿರಂಗ ಚಟುವಟಿಕೆಗಳಾಗಿದ್ದು ಇವುಗಳಲ್ಲಿ ನರಸಿಂಹಮೂರ್ತಿ ಬಹಿರಂಗವಾಗಿಯೇ ಭಾಗವಹಿಸಿದ್ದರು. ಆದರೂ, ಅವರು ಕಳೆದ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದರು ಎನ್ನುತ್ತಾರೆ ರಾಯಚೂರು ಪೊಲಿಸರು.

ಆ ನಂತರದಲ್ಲೂ ಆತ ಹತ್ತು ಹಲವು ಹೋರಾಟಗಳಲ್ಲಿ ನರಸಿಂಹಮೂರ್ತಿ ಸಕ್ರಿಯವಾಗಿ ಮುಂಚೂಣಿಯಲ್ಲಿ ನಿಂತಿದ್ದಾರೆ. ಉದ್ಯಮ ನಡೆಸುವಲ್ಲಿ ವಿಶೇಷ ಆಸಕ್ತಿ ಇರುವ ಇವರು ಬಟ್ಟೆ, ಚಪ್ಪಲಿ ಅಂಗಡಿಗಳ ಜೊತೆಗೆ ಕುಂಬಗೋಡು ಕೇಂದ್ರಿತವಾಗಿ ಒಂದು ಡಿಸ್ಟ್ರಿಬ್ಯೂಟರಿ ಏಜೆನ್ಸಿಯನ್ನೂ ತೆರೆದಿದ್ದರು. ಅದು ಅಷ್ಟಾಗಿ ಯಶಸ್ಸು ಕಾಣಲಿಲ್ಲ. ನಂತರ 2010ರಲ್ಲಿ ನಾನು ದಿ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಅಸೋಸಿಯೇಟ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಂಟ್ರಿಬ್ಯೂಟಿಂಗ್ ಜರ್ನಲಿಸ್ಟ್ ಆಗಿ ಸೇರಿಕೊಂಡು ಅತ್ಯುತ್ತಮವಾದ ಅನೇಕ ವಿಶೇಷ ವರದಿಗಳನ್ನು ಬರೆದರು. ಚಂಪಾರನ್ನೂ ಒಳಗೊಂಡಂತೆ ನಾಡಿನ ಸಾಂಸ್ಕೃತಿಕ ಲೋಕದ ಅನೇಕ ದಿಗ್ಗಜರ ಸಂದರ್ಶನ ಮಾಡಿದರು. ಅದೇ ವೇಳೆಯಲ್ಲಿ ಗೌರಿ ಲಂಕೇಶ್ ಪತ್ರಿಕೆಯಲ್ಲೂ ಕೆಲಸ ಮಾಡುತ್ತಿದ್ದರು. ಕ್ರಮೇಣ ಸಂಡೇ ಇಂಡಿಯನ್ ಪತ್ರಿಕೆಗಿಂತ ಹೆಚ್ಚು ಗೌರಿ ಲಂಕೇಶ್ ಪತ್ರಿಕೆಯಲ್ಲಿ ತೊಡಗಿಕೊಂಡರು. ಅಲ್ಲೂ ಕೂಡ ಪತ್ರಿಕೆಯ ಇಡೀ ಗುಣಮಟ್ಟ ಹೆಚ್ಚಿಸುವ ಹಾಗೆ ಅನೇಕ ವಿದ್ವತ್ಫೂರ್ಣವಾದ ಲೇಖನಗಳನ್ನು, ತನಿಖಾ ವರದಿಗಳನ್ನು ನಿರಂತರವಾಗಿ ಬರೆಯುತ್ತಲೇ ಬಂದರು. ಸ್ವಲ್ಪವೇ ದಿಗಳಲ್ಲಿ ಲಂಕೇಶ್ ಸಂಸ್ಥೆಗೆ ಒಂದು ದೊಡ್ಡ ಆಸ್ತಿಯಾಗಿ ಪರಿವರ್ತನೆಯಾದ ಅವರು ಸಂಸ್ಥೆಯ ಪುನರ್ರಚನೆ ನಡೆದು ಲಂಕೇಶ್ ಮೀಡಿಯ ಸಂಸ್ಥೆ ರೂಪುಗೊಂಡಾಗ ಅದರಲ್ಲಿ ಪಾರ್ಟನರ್ ಆಗಿ ಹೊಸ ಜವಾಬ್ದಾರಿ ಹೊತ್ತುಕೊಂಡರು. ಈ ನಡುವೆ ಕುರುಕ್ಷೇತ್ರ ಎಂಬ ನಾಟಕದಲ್ಲಿ ಕರ್ಣನಾಗಿ, ಅರ್ಜುನನಾಗಿ ಅಭಿನಯವನ್ನೂ ಮಾಡಿ ಊರಿನ ಜನರಿಂದ ಸೈ ಎನಿಸಿಕೊಂಡಿದ್ದರು. ನಾನು ಮತ್ತು ಗೌರಿ ಇವರ ಒಂದು ನಾಟಕ ನೋಡಲು ದೊಡ್ಡಿಪಾಳ್ಯಕ್ಕೆ ಹೋಗಿದ್ದೆವು…. ಹೀಗೆ ಇವರು ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಭಾಗವಹಿಸಿದ್ದು, ಇಷ್ಟೆಲ್ಲಾ ಬರೆದದ್ದು, ಲಂಕೇಶ್ ಸಂಸ್ಥೆಯ ಪಾರ್ಟನರ್ ಆಗಿ ಕೆಲಸ ಮಾಡಿದ್ದು ಭೂಗತವಾಗಿ ಅಲ್ಲ, ಬಹಿರಂಗವಾಗಿ, ಕಾನೂನುಬದ್ಧವಾಗಿ. ಆದರೂ, ಇವರು ಕಳೆದ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದರು ಎನ್ನುತ್ತಾರೆ ರಾಯಚೂರಿನ ಪೊಲೀಸರು.

ಪೌರಾಣಿಕ ನಾಟಕದಲ್ಲಿ

ಗೌರಿ ಲಂಕೇಶ್ ಹತ್ಯೆಯ ನಂತರ ನಡೆದ ಪ್ರತಿಭಟನೆಗಳಲ್ಲಿ, ಗೌರಿಯ ಚಟುವಟಿಕೆಗಳನ್ನು ಮುಂದುವರೆಸುವುದಕ್ಕಾಗಿ ಹುಟ್ಟಿಕೊಂಡ ಗೌರಿ ಮೆಮೋರಿಯಲ್ ಟ್ರಸ್ಟಿನಲ್ಲಿ, ಗೌರಿಯ ಪತ್ರಿಕೋದ್ಯಮವನ್ನು ಮುಂದುವರೆಸುವುದಕ್ಕಾಗಿ ಹುಟ್ಟಿಕೊಂಡಿರುವ ಗೌರಿ ಮೀಡಿಯಾ ಟ್ರಸ್ಟಿನಲ್ಲಿ ನರಸಿಂಹಮೂರ್ತಿ ಬಹಳ ಕ್ರಿಯಾಶೀಲವಾಗಿ ತೊಡಗಿಕೊಂಡಿದ್ದರು. ಅದರಲ್ಲೂ ವಿಶೇಷವಾಗಿ ಗೌರಿ ಮೀಡಿಯಾ ಟ್ರಸ್ಟ್ ಹೊರತರುತ್ತಿರುವ “ನ್ಯಾಯಪಥ” ಪತ್ರಿಕೆಯನ್ನು ರೂಪಿಸುವಲ್ಲಿ ಅವರು ವಿಶೇಷ ಕಾಳಜಿ ವಹಿಸಿ ಕೆಲಸ ಮಾಡಿದ್ದಾರೆ. ಗೌರಿ ಮೇಮೋರಿಯಲ್ ಟ್ರಸ್ಟಿಗೆ ಸ್ವಾತಂತ್ರ್ಯ ಸೇನಾನಿ ಶತಾಯುಷಿ ಎಚ್. ಎಸ್. ದೊರೆಸ್ವಾಮಿಯವರು ಅಧ್ಯಕ್ಷರಾದರೆ, ದೊಡ್ಡಪಾಳ್ಯ ನರಸಿಂಹಮೂರ್ತಿ ಅದರ ಕಾರ್ಯದರ್ಶಿ. ಗೌರಿ ಹತ್ಯೆಯ ನಂತರ ನಡೆದ ಎಲ್ಲಾ ಕಾರ್ಯಕ್ರಮಗಳಲ್ಲಿ ದೊರೆಸ್ವಾಮಿ ಜೊತೆಗೆ ನರಸಿಂಹಮೂರ್ತಿ ಕೂಡ ಭಾಗವಹಿಸಿದ್ದಾರೆ. ಇದನ್ನೆಲ್ಲಾ ಅವರು ಭೂಗತವಾಗಿದ್ದುಕೊಂಡು ಮಾಡಿಲ್ಲ, ಬಹಿರಂಗವಾಗಿ, ಕಾನೂನುಬದ್ಧವಾಗಿ ಮಾಡಿದ್ದಾರೆ. ಈ ಕಾರ್ಯಕ್ರಮಗಳ ವರದಿಗಳು ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ, ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿವೆ. ಆದರೂ, ಅವರು 25 ವರ್ಷಗಳಿಂದ ತಲೆಮರೆಸಿಕೊಂಡಿದ್ದರು ಎಂದು ರಾಯಚೂರು ಪೊಲೀಸರು ಹೇಳುತ್ತಾರೆ.

ಕೆಂಗೇರಿ ಉಪನಗರದಲ್ಲಿರುವ ನರಸಿಂಹಮೂರ್ತಿಯ ಮನೆಯೂ ಬಹಿರಂಗ. ಸಾಮಾಜಿಕ ಚಳವಳಿಯಲ್ಲಿ ಭಾಗಿಯಾಗಿರುವ ನಾಯಕರಿಗೂ, ಕಾರ್ಯಕರ್ತರಿಗೆ ಅದೊಂದು ಅಡ್ಡೆ. ಅವರ ಹತ್ತು ಹಲವು ಬ್ಯುಸಿನೆಸ್ ವ್ಯವಹಾರಗಳಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ತೊಡಗಿರುವವರಿಗೂ ಅವರ ಮನೆ ಕಾಮನ್ ಮೀಟಿಂಗ್ ಪಾಯಿಂಟ್. ಕೊನೆಮೊದಲಿಲ್ಲದಂತೆ ಬಂದು ಹೋಗುವ ಜನರಿಗೆ ಟೀ, ಕಾಫಿ, ಊಟ ಮಾಡಿ ಅವರ ಹೆಂಡತಿ ಯಾವಾಗಲೂ ಸುಸ್ತು. ಈತ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದುದರಿಂದ ಪೊಲೀಸರಿಗೂ ಅವರ ಮನೆಯ ಚಿರಪರಿಚಿತ, ಅದರ ಅಡ್ರೆಸ್ ಪೊಲೀಸ್ ಪೇದೆಗಳಿಗೆ ಕಂಠಪಾಠ. ನಾನು ಬೆಂಗಳೂರಿಗೆ ಹೋದಾಗಲೆಲ್ಲಾ ನನಗೂ ಅವರ ಮನೆಯೇ ನನಗೆ ಪರ್ಮನೆಂಟ್ ತಂಗುದಾಣ. ಆದರೂ, ರಾಯಚೂರು ಪೊಲೀಸರ ಪಾಲಿಗೆ ಅವರು 25 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದರು.

ಈ ಕಾಲು ಶತಮಾನದ ಸುದೀರ್ಘ ಅವಧಿಯಲ್ಲಿ ಅವರು ಎಷ್ಟೊಂದು ಜನಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಭಾಗವಹಿಸಿದ್ದಾರೆ; ಎಷ್ಟೊಂದು ಪತ್ರಿಕೆಗಳಿಗೆ ಲೇಖನ ವರದಿಗಳನ್ನು ಬರೆದಿದ್ದಾರೆ; ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೊಂದು ನಿರಂತರವಾಗಿ ಸಮಾನ ಮನಸ್ಕರೊಂದಿಗೆ ವಾಗ್ವಾದ ಮಾಡಿದ್ದಾರೆ, ಕ್ರಿಮಿಕೀಟಗಳೊಂದಿಗೆ ಗುದ್ದಾಡಿದ್ದಾರೆ; ಜನರ ಸಮಸ್ಯೆಗಳನ್ನು ತೆಗೆದುಕೊಂಡು ಎಷ್ಟೊಂದು ಪೊಲಿಸ್ ಸ್ಟೇಷನ್ ಮೆಟ್ಟಿಲು ಹತ್ತಿ ನ್ಯಾಯಕ್ಕಾಗಿ ಹೋರಾಡಿದ್ದಾರೆ; ವಿಧಾನಸೌಧವನ್ನೂ ಒಳಗೊಂಡಂತೆ ಎಷ್ಟೊಂದು ಸರ್ಕಾರಿ ಕಚೇರಿಗಳನ್ನು ಸುತ್ತಿದ್ದಾರೆ, ಎಷ್ಟೊಂದು ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ, ಎಷ್ಟೊಂದು ವ್ಯವಹಾರ ಮಾಡಿದ್ದಾರೆ…. ನಮಗೆಲ್ಲರಿಗೂ ಅದು ಕಂಡಿದೆ, ಆದರೆ ರಾಯಚೂರಿನ ಪೊಲೀಸರಿಗೆ ಅದ್ಯಾವುದೂ ಕಂಡಿಲ್ಲ. ಪ್ರಾಯಶಃ ಅವರೇ 25 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದರು ಅನ್ನಿಸುತ್ತೆ.…!!!

ಕೃಪೆ – ಕುಮಾರ್ ಬುರಡಿಕಟ್ಟಿ ಫೇಸ್‌ಬುಕ್ ವಾಲ್‌ನಿಂದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...