ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು, ಎಂಎಸ್‌ಪಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಒಂದು ವರ್ಷಕ್ಕೂ ಹೆಚ್ಚು ಕಾಲ ದೆಹಲಿ ಗಡಿಯಲ್ಲಿ ಹೋರಾಟ ನಡೆಸಿದ ರೈತರು ಗೆಲುವು ಸಾಧಿಸಿದ ಸಂಭ್ರಮದೊಂದಿಗೆ ದೆಹಲಿಯ ಟಿಕ್ರಿ ಗಡಿಯಿಂದ ತಮ್ಮೂರಿನ ವಾಪಸ್ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಇಬ್ಬರು ರೈತರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಹಿಸಾರ್‌ನ ರಾಷ್ಟ್ರೀಯ ಹೆದ್ದಾರಿ-9ರಲ್ಲಿ ದುರ್ಘಟನೆ ನಡೆದಿದೆ. ಪ್ರತಿಭಟನಾ ಸ್ಥಳದಿಂದ ರೈತರು ದಂಡೂರು ಗ್ರಾಮದ ಬಳಿ ತೆರಳುತ್ತಿದ್ದ ವೇಳೆ ರೈತರ ಟ್ರಾಲಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಸುಖ್‌ದೇವ್ ಸಿಂಗ್ ಮತ್ತು ಅಜಯ್‌ಪ್ರೀತ್ ಸಿಂಗ್ ಎಂಬ ರೈತರು ಸಾವನ್ನಪ್ಪಿದ್ದಾರೆ.
ಈ ಇಬ್ಬರೂ, ಪಂಜಾಬ್‌ನ ಮುಕ್ತಸರ್ ಜಿಲ್ಲೆಯ ಗಿಡ್ಡರ್‌ಬಹಾದ ಅಸ್ಸಾ ಬಟ್ಟರ್ ಗ್ರಾಮಕ್ಕೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಸುಖ್ವಿಂದರ್ ಸ್ಥಳದಲ್ಲೇ ಮೃತಪಟ್ಟಿದ್ದು, ಅಜಯ್‌ಪ್ರೀತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ಒಟ್ಟು ಏಳು ರೈತರು ಗಾಯಗೊಂಡಿದ್ದಾರೆ.
ಗ್ರಾಮದ ಮತ್ತೊಬ್ಬ ಯುವಕ ರಘಬೀರ್ ಸಿಂಗ್ ಎಂದು ಗುರುತಿಸಲಾಗಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ರೈತರು ಪ್ರತಿಭಟನೆ ನಡೆಸಿದ ಬಳಿಕ ಕೇಂದ್ರ ಸರ್ಕಾರ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದು ಮಾಡಿತ್ತು. ಜೊತೆಗೆ ರೈತರ ಬೇಡಿಕೆಗಳನ್ನು ಈಡೇರಿಸುವ ಲಿಖಿತ ಭರವಸೆ ನೀಡಿತು. ರೈತರು ಸಂತೋಷದಿಂದ ತಮ್ಮ ಊರುಗಳಿಗೆ ತೆರಳಲಾರಂಭಿಸಿದ್ದರು. ಈ ವೇಳೆ ಅವಘಡ ಸಂಭವಿಸಿದೆ.
ಇದನ್ನೂ ಓದಿರಿ: ರೈತರ ವಿಜಯೀ ಮೆರವಣಿಗೆ ಆರಂಭ: ವಿಡಿಯೋ – ಚಿತ್ರಗಳಲ್ಲಿ ನೋಡಿ


