ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಕುರಿತು ಮಾಡಿದ ಟ್ವೀಟ್‌ಗೆ ಸಂಬಂಧಿಸಿದಂತೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೇತನ್ ಅವರಿಗೆ ಜಾಮೀನು ದೊರೆತಿದೆ. ಆದರೂ ಕೆಲವು ತಾಂತ್ರಿಕೆ ಕಾರಣಗಳಿಗೆ ಅವರ ಬಿಡುಗಡೆಯಾಗಿಲ್ಲ.
ಹಿಜಾಬ್ ವಿಚಾರದ ಕುರಿತಂತೆ ನಟ ಚೇತನ್ ತಮ್ಮ ಟ್ವೀಟ್‌ನಲ್ಲಿ, “ಕರ್ನಾಟಕ ಹೈಕೋರ್ಟ್ ತೀರ್ಪಿನ ಬಗ್ಗೆ ನಾನು ಸುಮಾರು ಎರಡು ವರ್ಷಗಳ ಹಿಂದೆ ಬರೆದ ಟ್ವೀಟ್ ಇದು. ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಅತ್ಯಾಚಾರ ಪ್ರಕರಣದಲ್ಲಿ ಗೊಂದಲದ ಹೇಳಿಕೆಯನ್ನು ನೀಡಿದ್ದರು. ಈಗ ಅದೇ ನ್ಯಾಯಾಧೀಶರು ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ಸ್ವೀಕಾರಾರ್ಹವೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತಿದ್ದಾರೆ. ಇವರಿಗೆ ಅಗತ್ಯವಿರುವ ಸ್ಪಷ್ಟತೆ ಇದೆಯೇ?” ಎಂದು ಪ್ರಶ್ನಿಸಿ, ಹಳೆಯ ಟ್ವೀಟ್ ಅನ್ನು ಲಗತ್ತಿಸಿದ್ದರು.
ಇದನ್ನೂ ಓದಿ: ನಟ, ಸಾಮಾಜಿಕ ಹೋರಾಟಗಾರ ಚೇತನ್‌ಗೆ ಜಾಮೀನು
ಚೇತನ್ ಅವರ ಈ ಟ್ವೀಟಿನ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಎಸ್.ರವಿ ಅವರ ದೂರಿನ ಅನ್ವಯ ಚೇತನ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿತ್ತು.
“ನನ್ನ ಸರಹದ್ದಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಆಗಿದ್ದಾಗೇ ಸಾಮಾಜಿಕ ಜಾಲತಾಣಗಳ ಪರಿಶೀಲನೆ ನಡೆಸುತ್ತಿದ್ದ ಸಮಯದಲ್ಲಿ ಹೀಗೆ ಐದಾರು ದಿನಗಳ ಮುಂಚೆ ಟಿಟ್ವರ್‌ನಲ್ಲಿ ನಮ್ಮ ಠಾಣಾ ಸರಹದ್ದಿನಲ್ಲಿ ವಾಸವಿರುವ ಚೇತನ್‌ಕುಮಾರ್ ಅಹಿಂಸಾ ರವರು ಮಾಡಿರುವ ಟ್ವೀಟ್ ಅವಲೋಕಿಸಲಾಗಿದೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಚೇತನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 23ರ ಬುಧವಾರದಂದು ನಡೆಸಿ, ಆದೇಶವನ್ನು ಫೆಬ್ರವರಿ 25ರ ಶುಕ್ರವಾರದಂದು ಕಾಯ್ದಿರಿಸಲಾಗಿತ್ತು. ಈ ಬಗ್ಗೆ ಚೇತನ್ ಪತ್ನಿ ಮೇಘ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದು, “ಜಾಮೀನು ಆದೇಶ ಶುಕ್ರವಾರ 05:40 ಕ್ಕೆ ಸ್ವೀಕರಿಸಿದ್ದೇವೆ. ಆದರೆ ತಾಂತ್ರಿಕ ಕಾರಣಕ್ಕೆ ಬಿಡುಗಡೆ ಆದೇಶ ಇನ್ನೂ ಜಾರಿಯಾಗಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಟ ಚೇತನ್ ಟ್ವೀಟ್‌ನಲ್ಲಿ ತಪ್ಪೇನಿದೆ? ದನಿಯೆತ್ತಿದ ನಟಿ ರಮ್ಯಾ ದಿವ್ಯಸ್ಪಂದನ
ಶುಕ್ರವಾರ ಸಂಜೆ ಜಾಮೀನು ಆದೇಶ ಸಿಕ್ಕಿರುವುದರಿಂದ, ಶನಿವಾರ ಮತ್ತು ರವಿವಾರ ನ್ಯಾಯಾಲಯಕ್ಕೆ ರಜೆ ಇರುತ್ತದೆ. ಹೀಗಾಗಿ ಮುಂದಿನ ಪ್ರಕ್ರಿಯೆಯು ಸೋಮವಾರಕ್ಕೆ ಮುಂದುವರೆಸಲಾಗುತ್ತದೆ. ಆದ್ದರಿಂದ ಚೇತನ್ ಸೋಮವಾರದವರೆಗೆ ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ ಎಂದು ಮೇಘ ಹೇಳಿದ್ದಾರೆ.
“ಒಂದು ದಿನದ ಸ್ವಾತಂತ್ರ್ಯ ಕಸಿದುಕೊಂಡರು ಅದು ಹಲವು ದಿನಗಳಿಗೆ ಸಮ” ಎಂಬ ಸುಪ್ರೀಂ ಕೋರ್ಟ್ ಹೇಳಿಕೆಯನ್ನು ಉಲ್ಲೇಖಿಸಿರುವ ಮೇಘ ಅವರು, “ಚೇತನ್ ಬಿಡುಗಡೆ ಇನ್ನು ವಿಳಂಬವಾಗುವುದಿಲ್ಲ ಎಂಬ ಭರವಸೆ ನನಗಿದೆ, ನಿರಂತರವಾಗಿ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದ್ದಾರೆ.
ನಟ ಚೇತನ್ ಅವರು ತನ್ನ ಹಳೆಯ ಟ್ವೀಟ್‌ನಲ್ಲಿ, “ಈ ವಾರ ಕರ್ನಾಟಕದ ಹೈಕೋರ್ಟ್ ನ್ಯಾಯಮೂರ್ತಿ ದೀಕ್ಷಿತ್ ಅವರು ಅತ್ಯಾಚಾರದ ಆರೋಪಿ ರಾಕೇಶ್ ಬಿ. ಅವರಿಗೆ ಬಂಧನ ಪೂರ್ವ ಜಾಮೀನು ಮಂಜೂರು ಮಾಡಿ ‘ಅತ್ಯಾಚಾರದ ನಂತರ ಮಲಗುವುದು ಒಬ್ಬ ಭಾರತೀಯ ಮಹಿಳೆಗೆ ನಾಚಿಕೆಗೇಡಿನ ಸಂಗತಿ; ಅಂತಹ ಸಮಯದಲ್ಲಿ ಮಹಿಳೆಯರು ಪ್ರತಿಕ್ರಿಸುವ ರೀತಿ ಅದಲ್ಲ’ ಎಂದಿದ್ದಾರೆ. 21ನೇ ಶತಮಾನದಲ್ಲೂ ಕೂಡ ನ್ಯಾಯಮೂರ್ತಿ ದೀಕ್ಷಿತ್ ಅವರ ಈ ಸ್ತ್ರೀ ದ್ವೇಷ, ನಾಚಿಗೆಗೇಡಿನ ಸಂಗತಿ” ಎಂದು ಹೇಳಿದ್ದರು. ಈ ಟ್ವೀಟ್‌ನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) February 16, 2022
“ಚೇತನ್ ಅವರು ಸಾಮಾನ್ಯ ಜನರಲ್ಲಿ ಮತ್ತು ಒಂದು ಕೋಮಿನ (ಮುಸ್ಲಿಂ) ಜನಾಂಗದವರಿಗೆ ಕಾನೂನು- ಸುವ್ಯವಸ್ಥೆ, ನ್ಯಾಯಾಂಗ, ಸರ್ಕಾರ ಮತ್ತು ಸಾಂವಿಧಾನಿಕ ವ್ಯವಸ್ಥೆಯ ಮೇಲೆ ಅಪನಂಬಿಕೆ ಮತ್ತು ಆಕ್ರೋಶ ಬರುವ ಹಾಗೇ ಟ್ವೀಟ್ ಮಾಡಿ ಮುಸ್ಲಿಂ ಕೋಮಿನವರು ಮತ್ತು ಇತರೆ ಜನರು ಪ್ರತಿಭಟನೆ, ಗಲಭೆ, ಇತ್ಯಾದಿಗಳು ಮಾಡುವಂತೆ ಪ್ರಚೋದಿಸಿದ್ದಾರೆ” ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ: ನಟ ಚೇತನ್ ಎತ್ತಿರುವ ಮೌಲಿಕ ಪ್ರಶ್ನೆಗಳು ಮತ್ತು ಕನ್ನಡ ಚಿತ್ರರಂಗದ ಮೌನ


