ರಾಷ್ಟ್ರಪ್ರಶಸ್ತಿ ವಿಜೇತ ಸ್ಯಾಂಡಲ್‌ವುಡ್ ನಟ ಸಂಚಾರಿ ವಿಜಯ್ ಅವರು ಚಲಿಸುತ್ತಿದ್ದ ಬೈಕ್ ಅಪಘಾತಕ್ಕೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಕಾಲು ಮುರಿದಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿದೆ ಎಂದು ತಿಳಿದುಬಂದಿದೆ.
ಸಂಚಾರಿ ವಿಜಯ್ ಅವರನ್ನು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೆದುಳಿನ ಬಲಭಾಗದಲ್ಲಿ ರಕ್ತಸ್ರಾವವಾಗಿದ್ದರಿಂದ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಅಲ್ಲದೇ ಅವರ ತೊಡೆಯ ಭಾಗದಲ್ಲಿ ಮೂಳೆ ಮುರಿದಿದ್ದು, ಆಪರೇಶನ್ ಮಾಡಲಾಗಿದೆ ಎಂದು ಆಸ್ಪತ್ರೆ ವೈದ್ಯ ಡಾ. ಅನಿಲ್ ಕುಮಾರ್ ತಿಳಿಸಿದ್ದಾರೆ.
ಸ್ನೇಹಿತನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದು, ನಿನ್ನೆ ರಾತ್ರಿಯೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದಾಗಲೇ ಅವರ ಸ್ಥಿತಿ ಗಂಭೀರವಾಗಿತ್ತು.
ಸ್ಕ್ಯಾನಿಂಗ್ ಮಾಡಿದಾಗ ಮೆದುಳಿನಲ್ಲಿ ರಕ್ತಸ್ರಾವವಾಗಿರುವುದು ತಿಳಿದುಬಂದಿದ್ದು, ತಕ್ಷಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಐಸಿಯುನಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೊಡಗು: ಪೊಲೀಸರ ದೌರ್ಜನ್ಯಕ್ಕೆ ಮಾನಸಿಕ ಅಸ್ವಸ್ಥ ಬಲಿ: ಎಂಟು ಪೊಲೀಸರ ಅಮಾನತು


