ಬಾಡಿ ಶೇಮಿಂಗ್ (ದೇಹಾಕೃತಿಯನ್ನು ಹಿಯಾಳಿಸುವ) ಮತ್ತು ಲೈಂಗಿಕ ಉದ್ದೇಶವನ್ನು ಹೊಂದಿರುವ ಪ್ರಶ್ನೆ ಕೇಳಿದ ಯೂಟ್ಯೂಬ್ ಪತ್ರಕರ್ತನನ್ನು ನಟಿ ಗೌರಿ ಕಿಶನ್ ತೀವ್ರ ತರಾಟೆ ತೆಗೆದುಕೊಂಡ ಘಟನೆ ನವೆಂಬರ್ 6ರಂದು ಚೆನ್ನೈನಲ್ಲಿ ನಡೆದಿದೆ.
ಗೌರಿ ಮತ್ತು ಪತ್ರಕರ್ತರ ನಡುವಿನ ವಾಗ್ವಾದ, ಗೌರಿ ಪುರುಷ ಪತ್ರಕರ್ತರನ್ನು ಏಕಾಂಗಿಯಾಗಿ ಮತ್ತು ಧೈರ್ಯವಾಗಿ ಎದುರಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಗೌರಿಯ ನಡೆಗೆ ವ್ಯಾಪಕ ಬೆಂಬಲ ಮತ್ತು ಪ್ರಶಂಸೆ ವ್ಯಕ್ತವಾಗಿದೆ.
ತಮಿಳಿನ ’96’, ‘ಸೂರರೈ ಪೊಟ್ರು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಗೌರಿ ಕಿಶನ್, ತಮ್ಮ ಮುಂಬರುವ ಚಿತ್ರ ‘ಅದರ್ಸ್’ನ ಪ್ರಚಾರ ಪತ್ರಿಕಾಗೋಷ್ಠಿಯಲ್ಲಿ ತನ್ನ ಸಹ ನಟ ಆದಿತ್ಯ ಮಾಧವನ್ ಜೊತೆ ಕುಳಿತಿದ್ದರು. ಮಾಧವನ್ ಪತ್ರಕರ್ತರ ಜೊತೆ ಮಾತನಾಡುವಾಗ, ಯೂಟ್ಯೂಬ್ ಪತ್ರಕರ್ತ ಆರ್.ಎಸ್ ಕಾರ್ತಿಕ್ ಎಂಬವರು ಗೌರಿಯ ತೂಕದ ಬಗ್ಗೆ ಮಾಧವನ್ ಅವರಿಗೆ ಪ್ರಶ್ನೆ ಹಾಕಿದ್ದಾರೆ.
“ಚಿತ್ರದಲ್ಲಿ ನೀವು ಗೌರಿಯನ್ನು ಎತ್ತುತ್ತೀರಾ.. ಆಕೆಯ ತೂಕ ಎಷ್ಟು?” ಎಂದು ಪತ್ರಕರ್ತ ಕಾರ್ತಿಕ್ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಕೋಪಗೊಂಡ ಗೌರಿ, ಮಾಧವನ್ ಅವರಿಂದ ಮೈಕ್ ತೆಗೆದುಕೊಂಡು ಪತ್ರಕರ್ತನಿಗೆ ತಿರುಗೇಟು ನೀಡಿದ್ದಾರೆ.
“ಇದು ಅಗೌರವ, ನನ್ನ ದೇಹವನ್ನು ನೀವು ಲೈಂಗಿಕೀಕರಿಸುತ್ತಿದ್ದೀರಿ. ಇದು ಪತ್ರಿಕೋದ್ಯಮವಲ್ಲ, ಅವಮಾನ” ಎಂದು ಗೌರಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪತ್ರಕರ್ತ “ನಾನು ತಮಾಷೆಯಾಗಿ ಕೇಳಿದ್ದು” ಎಂದಿದ್ದಾರೆ.
ಈ ವೇಳೆ “ತಮಾಷೆ ಎಂದು ಮಹಿಳೆಯ ದೇಹದ ಬಗ್ಗೆ ಮಾತಾಡುವುದು ಸರಿಯಲ್ಲ. ಇದು ನಿಮ್ಮ ವೃತ್ತಿಗೆ ಕಳಂಕ” ಎಂದು ಗೌರಿ ತಿರುಗೇಟು ಕೊಟ್ಟಿದ್ದಾರೆ. ಆಗ ಇತರ ಪತ್ರಕರ್ತರು ಜೋರಾಗಿ ಕೂಗಿ ಗೌರಿಯ ಧ್ವನಿ ಅಡಗಿಸಲು ನೋಡಿದ್ದಾರೆ. ಆದರೆ, ಗೌರಿ ಧೈರ್ಯದಿಂದ ಅವರನ್ನು ಎದುರಿಸಿದ್ದಾರೆ.
ಅಲ್ಲದೆ, “ನೀವು (ಕಾರ್ತಿಕ್) ಈ ಹಿಂದಿನ ಸಂದರ್ಶನದಲ್ಲೂ ನನ್ನ ದೇಹದ ಕುರಿತು ಇದೇ ರೀತಿಯ ಪ್ರಶ್ನೆ ಕೇಳಿದ್ದೀರಿ. ಇದು ಬಾಡಿ ಶೇಮಿಂಗ್ ಪ್ರಶ್ನೆ” ಎಂದು ಗೌರಿ ಹೇಳಿದ್ದಾರೆ.
ವರದಿಗಳ ಪ್ರಕಾರ, ‘ವೇರೆ ಲೆವೆಲ್ ಸಿನಿಮಾ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಕಾರ್ತಿಕ್, ಚೆನ್ನೈ ಪತ್ರಿಕಾಗೋಷ್ಠಿಗಿಂತ ಎರಡ್ಮೂರು ದಿನ ಮೊದಲು, ಗೌರಿಯ ದೇಹಾಕೃತಿಯ ಅಥವಾ ತೂಕದ ಬಗ್ಗೆ ಆದಿತ್ಯ ಮಾಧವನ್ ಅವರಿಗೆ ಪ್ರಶ್ನಿಸಿದ್ದರು. “ಆಕೆಯ ತೂಕ ಎಷ್ಟು? ಎತ್ತುವುದು ಕಷ್ಟವಾಗಿತ್ತೇ? ತುಸು ಭಾರದವಳು ಎಂದು ಅನಿಸಿತೇ?” ಎಂದು ಕೇಳಿದ್ದರು.
ಗೌರಿಯ ಪ್ರತಿಕ್ರಿಯೆಗೆ ಕೋಪಗೊಂಡ ಕಾರ್ತಿಕ್, “ನನ್ನ ಪ್ರಶ್ನೆಯಲ್ಲಿ ಏನು ತಪ್ಪಿತ್ತು? ಇವು ನಿಯಮಿತವಾಗಿ ಕೇಳಲಾಗುವ ಪ್ರಶ್ನೆಗಳು” ಎಂದಿದ್ದಾರೆ. ಗೌರಿಯನ್ನು ‘ಆ ಹುಡುಗಿ’ ಎಂದು ಅಗೌರವದಿಂದ ಉಲ್ಲೇಖಿಸುತ್ತಾ, ಕಾರ್ತಿಕ್ ಆಕೆಯ ಮುಂದೆ ನಿರ್ದೇಶಕರಿಗೆ ದೂರು ನೀಡಿದ್ದಾರೆ. “ನಾನು ಅವಳ ತೂಕ ಕೇಳಿದಾಗ, ಅವಳು ನನ್ನ ತೂಕ ಕೇಳುತ್ತಾಳೆ. ನಾನು ನಟನೇ?” ಎಂದು ಪ್ರಶ್ನಿಸಿದ್ದಾರೆ.
ಮುಂದುವರಿದು, ಗೌರಿಯನ್ನು ಮತ್ತಷ್ಟು ಕೀಳಾಗಿ ಟೀಕಿಸಿದ ಕಾರ್ತಿಕ್, “ಅವಳಿಗೆ ತಮಿಳು ಅರ್ಥವಾಗುವುದಿಲ್ಲ. ನನ್ನ ಪ್ರಶ್ನೆ ತುಂಬಾ ಆಸಕ್ತಿದಾಯಕವಾಗಿತ್ತು. ನಾನು 25 ವರ್ಷದಿಂದ ವರದಿಗಾರಿಕೆ ಮಾಡುತ್ತಿದ್ದೇನೆ. ಸಿನಿಮಾ ನೋಡುವ ಪ್ರೇಕ್ಷಕರ ದೃಷ್ಠಿಕೋನದಲ್ಲಿ ನಾನು ಪ್ರಶ್ನೆ ಕೇಳಿದೆ” ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿದ್ದ ಮತ್ತೊಬ್ಬ ವ್ಯಕ್ತಿ ಕಾರ್ತಿಕ್‌ನನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಗೌರಿ ನಿನ್ನ ತೂಕದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಏಕೆ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಕಾರ್ತಿಕ್‌ಗೆ ಕೇಳಿದ್ದಾರೆ. ಒಂದು ಕ್ಷಣ ಪತ್ರಿಕಾಗೋಷ್ಠಿಯಲ್ಲಿದ್ದ ಹಲವು ಪುರುಷರು ಗೌರಿಯ ವಿರುದ್ದ ಕೂಗಾಡಿ, ಆಕೆಯನ್ನು ಬೆದರಿಸಲು ನೋಡಿದ್ದಾರೆ. ಈ ವೇಳೆ ಪತ್ರಿಕಾಗೋಷ್ಠಿಯಲ್ಲಿದ್ದ ನಿರ್ದೇಶಕ ಅಬಿನ್ ಹರಿಹರನ್ ಗೌರಿಯ ಪರ ನಿಲ್ಲದೆ ಕಾರ್ತಿಕ್‌ನನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ.
“ಪುರುಷರಿಂದ ತುಂಬಿದ್ದ ಕೋಣೆಯಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಏಕಾಂಗಿಯಾಗಿ ಬಿಟ್ಟ ಗೌರಿ, “ಮೊದಲನೆಯದಾಗಿ, ನೀವು ಕೇಳಿದ್ದು ಬಾಡಿ ಶೇಮಿಂಗ್ ಪ್ರಶ್ನೆ. ಇಲ್ಲಿ ನನ್ನ ಹೊರತು ಬೇರೆ ಯಾವುದೇ ಮಹಿಳೆ ಇಲ್ಲ. ನಾನು ಮಹಿಳೆ ಎಂಬ ಕಾರಣಕ್ಕಾಗಿ ನನ್ನನ್ನು ಗುರಿಯಾಗಿಸಲಾಗುತ್ತಿದೆ. ಪ್ರತಿಯೊಬ್ಬ ಮಹಿಳೆಗೂ ವಿಭಿನ್ನ ದೇಹಕಾರವಿದೆ. ನನಗೆ ಯಾವ ಸಮಸ್ಯೆಗಳಿವೆ ಎಂದು ನಿಮಗೆ ತಿಳಿದಿದೆಯೇ? ನನಗೆ ಹಾರ್ಮೋನುಗಳ ಸಮಸ್ಯೆಗಳಿವೆಯೇ ಎಂದು ನಿಮಗೆ ಗೊತ್ತಿದೆಯೇ? ನಾನು ಹಿರೋಯಿನ್ ಆಗಿದ್ದರೆ ನನ್ನ ಸೈಝ್ ಝೀರೋ ಆಗಿರಬೇಕೇ? ನನ್ನ ತೂಕವನ್ನು ತಿಳಿದುಕೊಂಡು ನೀವು ಏನು ಮಾಡುತ್ತೀರಿ? ಅದು ಚಿತ್ರಕ್ಕೆ ಅಪ್ರಸ್ತುತ” ಎಂದು ತನ್ನ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಇಷ್ಟಾದರು ಸುಮ್ಮನಾಗದ ಕಾರ್ತಿಕ್, “ನೀನು ನಿನ್ನ ತೂಕ ಮತ್ತು ಎತ್ತರ ಎರಡೂ ಸರಿಯಾಗಿ ಹೊಂದಾಣಿಕೆಯಾಗುತ್ತಿದೆ ಎಂದು ಹೇಳುತ್ತಿದ್ದೀಯಾ?” ಎಂದು ಪ್ರಶ್ನಿಸಿ ಮತ್ತಷ್ಟು ಅವಮಾನಿಸಿದ್ದಾರೆ. ಇದಕ್ಕೆ ತೀವ್ರ ಕೋಪಗೊಂಡ ಗೌರಿ, “ಹೀರೋಯಿನ್ ಆಯ್ಕೆ ನಿರ್ದೇಶಕರಿಗೆ ಬಿಟ್ಟಿದ್ದು, ಅದನ್ನು ಪ್ರಶ್ನಿಸಲು ನೀವು ಯಾರು?” ಎಂದು ಕೇಳಿದ್ದಾರೆ.
ಆಗ ಕಾರ್ತಿಕ್, “ತೂಕ ಕಡಿಮೆ ಮಾಡಿಕೊಳ್ಳುತ್ತೇನೆ ಎಂದು ಹೇಳು. ನೀನು ಮಾಡುತ್ತಿರುವುದು ತಪ್ಪು” ಎಂದಿದ್ದಾರೆ.
ಈ ವೇಳೆ ಮಧ್ಯ ಪ್ರವೇಶಿಸಿದ ವ್ಯಕ್ತಿಯೊಬ್ಬ. ಓಕೆ, ಓಕೆ.. ಸಿನಿಮಾ ಬಗ್ಗೆ ಮಾತನಾಡೋಣ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗೌರಿ, ಏನು ಓಕೆ..? ಅವನು (ಕಾರ್ತಿಕ್) ನನ್ನ ಮೇಲೆ ಕೂಗಾಡುತ್ತಿದ್ದಾನೆ. ನನಗೆ ಅಡ್ಡಿಪಡಿಸುತ್ತಲೇ ಇದ್ದಾನೆ. ನನಗೂ ಒಂದು ದೃಷ್ಟಿಕೋನವಿದೆ. ಇಲ್ಲಿ ಪತ್ರಿಕೆಗಳಿಗೆ ಗೌರವ ಸಲ್ಲಿಸುತ್ತಾ, ನಾನು ಸಾಮಾನ್ಯೀಕರಿಸುತ್ತಿಲ್ಲ. ಆದರೆ, ಬಾಡಿ ಶೇಮಿಂಗ್ ಅನ್ನು ಏಕೆ ಸಾಮಾನ್ಯೀಕರಿಸಲಾಗುತ್ತಿದೆ? ಹೀರೋಯಿನ್‌ಗೇ ಏಕೆ ಈ ಪ್ರಶ್ನೆಯನ್ನು ಕೇಳುತ್ತಾರೆ? ನೀವು ಹೀರೋಗೆ ಇದೇ ಪ್ರಶ್ನೆಯನ್ನು ಕೇಳುತ್ತೀರಾ?” ಎಂದಿದ್ದಾರೆ.
“ನಾನು ಚಿತ್ರದಲ್ಲಿ ಮಾಡಿರುವ ಪಾತ್ರಗಳ ಬಗ್ಗೆ ಯಾವುದೇ ಪ್ರಶ್ನೆ ಕೇಳುತ್ತಿಲ್ಲ. ಅವರು (ಕಾರ್ತಿಕ್ ) ನನ್ನ ತೂಕದ ಬಗ್ಗೆ ಮಾತ್ರ ಪ್ರಶ್ನೆ ಮಾಡುತ್ತಿದ್ದಾರೆ. ಇದು ಹೇಗೆ ಸರಿಯಾಗುತ್ತದೆ? ನೀವು ನನ್ನ ತೂಕದ ಬಗ್ಗೆ ಪರೋಕ್ಷವಾಗಿ ನಾಯಕ ನಟನಿಗೆ ಪ್ರಶ್ನೆ ಕೇಳಿದ್ದೀರಿ. ಇದು ತಪ್ಪು ಮತ್ತು ಮೂರ್ಖತನದ ಪ್ರಶ್ನೆ. ನೀವು ಮಹಿಳಾ ಪಾತ್ರವನ್ನು ಲೈಂಗಿಕವಾಗಿ ಬಳಸುತ್ತಿದ್ದೀರಿ. ಇದು ಪತ್ರಿಕೋದ್ಯಮವಲ್ಲ, ನೀವು ಮಾಡುತ್ತಿರುವುದು ನಿಮ್ಮ ವೃತ್ತಿಗೆ ಅವಮಾನ” ಎಂದು ಖಾರವಾಗಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿದ್ದ ಪುರುಷರೆಲ್ಲರೂ ಗೌರಿಯನ್ನು ಅವಮಾನಿಸಿ ಏರು ಧ್ವನಿಯಲ್ಲಿ ಮಾತನಾಡಿದ್ದರೂ, ಆಕೆಯ ಚಿತ್ರದ ಸಹನಟ ಮತ್ತು ನಿರ್ದೇಶಕ ಆಕೆಯ ಪರ ನಿಂತಿಲ್ಲ. ಆದರೆ, ಇತರ ಕಲಾವಿದರು ಮತ್ತು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಗೌರಿಗೆ ಬೆಂಬಲ ಮತ್ತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಜನಪ್ರಿಯ ಹಿನ್ನೆಲೆ ಗಾಯಕಿ ಚಿನ್ಮಯಿ ಪತ್ರಿಕಾಗೋಷ್ಠಿಯಲ್ಲಿ ನಡೆದ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಗೌರಿ ‘ಅದ್ಭುತ ಕೆಲಸ’ ಮಾಡಿದ್ದಾರೆ ಎಂದು ಹೇಳಿದ್ದಾರೆ.
“ನೀವು ಅಗೌರವಯುತ ಮತ್ತು ಅನಗತ್ಯ ಪ್ರಶ್ನೆಯನ್ನು ಖಂಡಿಸಿದ ಕ್ಷಣ, ಒಂದು ಗುಂಪು ಗಟ್ಟಿಯಾಗಿ ಕೂಗಿ ತಡೆಯುತ್ತದೆ. ಆದರೆ, ಇಷ್ಟು ಚಿಕ್ಕವಯಸ್ಸಿನಲ್ಲಿ ನೀವು ಧೈರ್ಯದಿಂದ ನಿಂತು ಅವರನ್ನು ಎದುರಿಸಿದ್ದು ನನಗೆ ತುಂಬಾ ಹೆಮ್ಮೆ ತಂದಿದೆ. ಯಾವುದೇ ಪುರುಷ ನಟನಿಗೆ ಅವನ ತೂಕ ಎಷ್ಟು ಎಂದು ಕೇಳುವುದಿಲ್ಲ. ಮಹಿಳಾ ನಟಿಗೆ ಮಾತ್ರ ಇಂತಹ ಪ್ರಶ್ನೆಗಳು ಏಕೆ ಕೇಳಲಾಗುತ್ತದೆ ಎಂದು ಗೊತ್ತಾಗುತ್ತಿಲ್ಲ” ಎಂದು ಚಿನ್ಮಯಿ ಹೇಳಿದ್ದಾರೆ.
Gowri did an amazing job. The moment you call out a disrespectful and an unnecessary question – a whole lot of shouting down happens.
So proud that someone so young stood her ground and pushed back.No male actor gets asked what his weight is. No idea why they asked a female… pic.twitter.com/BtKO6U7lpQ
— Chinmayi Sripaada (@Chinmayi) November 6, 2025
ಪತ್ರಿಕಾಗೋಷ್ಠಿಯಲ್ಲಿ ಗೌರಿಯ ಪರ ನಿಲ್ಲದೆ ಮೌನವಾಗಿದ್ದ ನಟ ಆದಿತ್ಯ ಮಾಧವನ್, ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ಕೊಟ್ಟು ಗೌರಿಯ ಪರವಾಗಿ ನಿಲ್ಲದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ.
“ನನ್ನ ಮೌನವು ಯಾರ ಬಾಡಿ ಶೇಮಿಂಗ್ ಅನ್ನು ಬೆಂಬಲಿಸುತ್ತದೆ ಎಂದರ್ಥವಲ್ಲ. ಅದು ನನ್ನ ಮೊದಲ ಚಿತ್ರವಾದ್ದರಿಂದ, ಆ ಪ್ರಶ್ನೆ ಆಕಸ್ಮಿಕವಾಗಿ ಬಂದು ನನ್ನನ್ನು ಸ್ತಂಭನಗೊಳಿಸಿತು. ನಾನು ಆದಷ್ಟು ಬೇಗ ಮಧ್ಯಪ್ರವೇಶಿಸಬೇಕಿತ್ತು ಎಂದು ಬಯಸುತ್ತೇನೆ. ಗೌರಿ ಬಾಡಿ ಶೇಮಿಂಗ್‌ಗೆ ಒಳಗಾಗಬೇಕಾದವರಲ್ಲ, ಯಾರೂ ಒಳಗಾಗಬೇಕಾದವರಲ್ಲ. ನಾವು ಯಾರೇ ಆಗಿರಲಿ, ಎಲ್ಲರಿಗೂ ಗೌರವ ಸಲ್ಲಬೇಕು. ಮತ್ತೊಮ್ಮೆ ಕ್ಷಮೆಯಾಚಿಸುತ್ತೇನೆ” ಎಂದು ಕಾರ್ತಿಕ್ ಬರೆದುಕೊಂಡಿದ್ದಾರೆ.
Hi to all, My Silence didn’t mean i approve body shaming of anyone. I froze because it caught me off guard as it is my debut. I wish I’d stepped in sooner. She didn’t deserve that. No one does. Everyone deserves respect, regardless of who we are. I apologise once again. https://t.co/St1bTk4pbH
— Aditya Madhavan (@adityamadhav01) November 6, 2025
“ಪತ್ರಿಕೋದ್ಯಮ ತನ್ನ ನೆಲೆಯನ್ನು ಕಳೆದುಕೊಂಡಿದೆ. ಪತ್ರಕರ್ತರು ಎಂದು ಕರೆಯಲ್ಪಡುವವರು ಪತ್ರಿಕೋದ್ಯಮವನ್ನು ಗಟಾರಕ್ಕೆ ಕೊಂಡೊಯ್ಯುತ್ತಿದ್ದಾರೆ. ಮಹಿಳೆ ಎಷ್ಟು ತೂಕವಿದ್ದಾಳೆ ಎಂದು ಆಳೆಯುವುದು ಅವರ ಕೆಲಸವಲ್ಲ. ಅದರಲ್ಲೂ ಆ ಬಗ್ಗೆ ನಾಯಕ ನಟನಲ್ಲಿ ಕೇಳುವುದು?? ಎಂತಹ ನಾಚಿಕೆಗೇಡಿನ ಸಂಗತಿ!” ಎಂದು ನಟಿ ಖುಷ್ಬೂ ಸುಂದರ್ ಹೇಳಿದ್ದಾರೆ.
ಗೌರಿ ತನ್ನ ನಿಲುವಿನಲ್ಲಿ ಗಟ್ಟಿಯಾಗಿ ನಿಂತಿದ್ದಕ್ಕಾಗಿ ಅಭಿನಂದಿಸಿದ ಖುಷ್ಬೂ, “ನಾವು ಮಹಿಳೆಯರು, ನಟರು, ತಮ್ಮ ಕುಟುಂಬದ ಮಹಿಳೆಯರ ಬಗ್ಗೆ ಅದೇ ಪ್ರಶ್ನೆಯನ್ನು ಕೇಳಿದರೆ, ಅದೂ ಪುರುಷರು ಕೇಳಿದರೆ ಸರಿಯೇ? ಗೌರವ ಎಂದಿಗೂ ಏಕಮುಖವಲ್ಲ. ನೀವು ಗೌರವಿಸಲ್ಪಡಬೇಕೆಂದು ನಿರೀಕ್ಷಿಸಿದರೆ ಗೌರವ ನೀಡಲು ಕಲಿಯಿರಿ” ಎಂದು ಬರೆದುಕೊಂಡಿದ್ದಾರೆ.
Journalism has lost its ground. The so called journos take journalism to the gutters. How much a woman weighs is none of their business. And asking the hero about it?? What a shame! Kudos to the young #GowriShankar who stood her ground and gave it back. Are the same men ok if…
— KhushbuSundar (@khushsundar) November 7, 2025
ನಿರ್ದೇಶಕ ಪಾ ರಂಜಿತ್ ಕೂಡ ಗೌರಿಗೆ ಬೆಂಬಲ ವ್ಯಕ್ತಪಡಿಸಿದ್ದು, ‘ಮೋರ್ ಪವರ್ ಟೂ ಯು’. ವರದಿಗಾರನ ಕೃತ್ಯಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವು ಸ್ವೀಕಾರಾರ್ಹವಲ್ಲ ಮತ್ತು ನಾಚಿಕೆಗೇಡಿನ ಸಂಗತಿ. ಮಹಿಳಾ ನಟಿಯರು ಇನ್ನೂ ಈ ಅಸಭ್ಯ ಪ್ರಶ್ನೆಗಳನ್ನು ಎದುರಿಸಬೇಕಾಗಿರುವುದು ತಮಿಳು ಸಿನಿಮಾ ಇನ್ನೂ ಕ್ರಮಿಸಬೇಕಾದ ದೂರವನ್ನು ತೋರಿಸುತ್ತದೆ” ಎಂದಿದ್ದಾರೆ.
@Gourayy more power to you. I strongly condemn the reporter's actions; they are unacceptable and shameful. That female actors have to still face these indecent questions goes to show the distance Thamizh cinema has yet to go.
pic.twitter.com/tYUo9LH8Zx— pa.ranjith (@beemji) November 7, 2025
ನಟ ಕವಿನ್ ಕೂಡ ಗೌರಿಗೆ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದು, “ಒಳಗೆ ಮತ್ತು ಹೊರಗೆ, ನೀವು ಸುಂದರ ಮತ್ತು ಸ್ಪೂರ್ತಿದಾಯಕ ಗೌರಿ, ಯಾವಾಗಲೂ ಒಂದೇ ಆಗಿರಿ” ಎಂದು ಬರೆದುಕೊಂಡಿದ್ದಾರೆ.
ಫ್ರಂಟ್‌ಲೈನ್‌ನ ಹಿರಿಯ ಸಹಾಯಕ ಸಂಪಾದಕ ಆರ್.ಕೆ ರಾಧಾಕೃಷ್ಣನ್ ಕೂಡ ವರದಿಗಾರನ ಪತ್ರಕರ್ತನ ಕೃತ್ಯವನ್ನು ಖಂಡಿಸಿದ್ದಾರೆ.
“ಸಿನಿಮಾದ ಹೀರೋ ಬಳಿ ಗೌರಿ ಅವರ ತೂಕ ಕೇಳುವ ಯಾವುದೇ ಅಧಿಕಾರ ಪತ್ರಕರ್ತನಿಗೆ ಇಲ್ಲ. ಅಸಂಬಂದ್ಧ ಪ್ರಶ್ನೆ ಕೇಳಿದವನ ಜೊತೆಗೂಡಿ ಹೆಚ್ಚಿನ ಪತ್ರಕರ್ತರೂ ಗೌರಿ ಧ್ವನಿ ಅಡಗಿಸಲು ಪ್ರಯತ್ನಿಸಿದರು. ಆದರೂ, ಗೌರಿ ಧೈರ್ಯದಿಂದ ಅವರನ್ನು ಎದುರಿಸಿದರು. ತಮಿಳು ಸಿನಿಮಾದಲ್ಲಿ ನಾನು ನೋಡಿದ ಅತ್ಯುತ್ತಮ ಧೈರ್ಯದ ಎದುರಾಟಗಳಲ್ಲಿ ಇದು ಒಂದೂ” ಎಂದಿದ್ದಾರೆ.
I stand with Gowri Kishan. The reporter had no business asking about her weight to the movie hero. He and almost all the disgraceful journalists on scene tried to shout Gowri down. She stood her ground. This is one of the best pushbacks I’ve seen in Tamil cinema!
— RadhakrishnanRK, PhD. (@RKRadhakrishn) November 6, 2025


