ಬಹುಭಾಷಾ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮಲಯಾಳಂ ನಟ ದಿಲೀಪ್, ಪ್ರಕರಣದ ಕುರಿತು ವರದಿ ಪ್ರಕಟಿಸುವುದು ಹಾಗೂ ಸುದ್ದಿ ಪ್ರಸಾರ ಮಾಡುವುದಕ್ಕೆ ನಿರ್ಬಂಧ ವಿಧಿಸುವಂತೆ ಕೋರಿ ಸೋಮವಾರ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎರ್ನಾಕುಲಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಮಾಧ್ಯಮಗಳು ಉಲ್ಲಂಘಿಸಿವೆ. ಪ್ರಕರಣದ ವಿಚಾರಣೆ ವೇಳೆ ಇಂಡೋ ಏಷ್ಯನ್ ನ್ಯೂಸ್ ಚಾನೆಲ್ ಪ್ರೈವೇಟ್ ಲಿಮಿಟೆಡ್‌ನ ವರದಿಗಾರ ಕ್ಯಾಮೆರಾ ಬಳಸಿದ್ದಾರೆ ಎಂದು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಪ್ರಕರಣ ಕುರಿತಂತೆ ತನಿಖಾ ಹಂತದಿಂದಲೂ ತಮ್ಮ ವಿರುದ್ಧ ಸಾರ್ವಜನಿಕರನ್ನು ಪೂರ್ವಾಗ್ರಹಪೀಡಿತರನ್ನಾಗಿ ಮಾಡುವಂಥ ಸುಳ್ಳು ಮತ್ತು ಕಟ್ಟು ಕಥೆಗಳನ್ನು ತನಿಖಾ ಅಧಿಕಾರಿಗಳು ಮಾಧ್ಯಮಗಳಿಗೆ ಸೋರಿಕೆ ಮಾಡುತ್ತಿದ್ದಾರೆ. ತನ್ನ ವಿರುದ್ಧದ ತನಿಖೆಯ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೊದಲು ಅಧಿಕಾರಿಗಳು ವರದಿಯ ಆಯ್ದ ವಿಷಯಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆಂದು ದಿಲೀಪ್ ಆರೋಪಿಸಿದ್ದಾರೆ.
ಇದನ್ನೂ ಓದಿ: ‘ಧೀರ ಭಗತ್ ರಾಯ್’ ಮೂಲಕ ಮೀಸಲು ಕ್ಷೇತ್ರದ ರಾಜಕೀಯ ಕಥೆಯನ್ನು ಹೇಳಲು ಹೊರಟಿರುವ ನಿರ್ದೇಶಕ ಕರ್ಣನ್
’ಪ್ರಕರಣದ ವಿಚಾರಣೆ ಕುರಿತ ಮಾಹಿತಿ ಹಾಗೂ ದಾಖಲೆಗಳನ್ನು ಮಾಧ್ಯಮಗಳಿಗೆ ಸೋರಿಕೆಯಾಗದಂತೆ ಎಚ್ಚರಿಕೆವಹಿಸುವಂತೆ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದ್ದರೂ, ಮಾಹಿತಿ ಸೋರಿಕೆಯಾಗುವುದು ಮುಂದುವರೆದಿದೆ. ಹೀಗಾಗಿ, ತನಿಖಾಧಿಕಾರಿ ಹಾಗೂ ಟಿವಿ ವರದಿಗಾರರ ನೇತೃತ್ವದಲ್ಲಿ ನಾನು ಹಾಗೂ ಇತರ ಅರ್ಜಿದಾರರು ಮಾಧ್ಯಮಕ್ಕೆ ಸುದ್ದಿ ಸರಕಾಗುತ್ತಿದ್ದೇವೆ’ ಎಂದು ದೂರಿದ್ದಾರೆ.
ಹೀಗಾಗಿ, ಪ್ರಕರಣದ ವಿಚಾರಣೆ ನಡೆದು ತೀರ್ಪು ಬರುವವರೆಗೆ ಆರೋಪಿಗಳು ಹಾಗೂ ಸಾಕ್ಷಿಗಳ ಕುರಿತ ವರದಿ ಪ್ರಕಟಣೆ ಹಾಗೂ ಪ್ರಸಾರದ ಮೇಲೆ ನಿರ್ಬಂಧ ವಿಧಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.
ಫೆಬ್ರವರಿ 17, 2017 ರಂದು ತ್ರಿಶೂರ್‌ನಿಂದ ಚಲನಚಿತ್ರವೊಂದರ ಶೂಟಿಂಗ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ನಟಿ ಭಾವನಾ ಅವರನ್ನು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಅಪಹರಿಸಲಾಗಿತ್ತು. ಒಂದು ಗ್ಯಾಂಗ್ ಆಕೆಯನ್ನು ಬಲವಂತವಾಗಿ ಕಾರನ್ನು ಹತ್ತಿಸಿ ಎರಡು ಗಂಟೆಗಳ ಕಾಲ ವಾಹನದೊಳಗೆ ಕಿರುಕುಳ ನೀಡಿತ್ತು. ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಪ್ರಮುಖ ಆರೋಪಿ ಎಂದು ಆರೋಪಿಸಲಾಗಿತ್ತು. ನಟಿ ನೀಡಿದ್ದ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಪೊಲೀಸರು ದೀಲಿಪ್ ಸೇರಿದಂತೆ 6 ಜನರನ್ನು ಬಂಧಿಸಿದ್ದರು. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಇನ್ನು, ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ಬೆದರಿಕೆ ಹಾಕಿರುವ ಆರೋಪದಲ್ಲಿ ನಟ ದಿಲೀಪ್ ಮತ್ತು ಇತರ ಐವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಹೊಸ ಎಫ್‌ಐಆರ್‌ನಲ್ಲಿ ನಟ ದಿಲೀಪ್, ಸೋದರ ಮಾವ ಟಿಎನ್ ಸೂರಜ್, ದಿಲೀಪ್ ಅವರ ಸಹೋದರ ಅನೂಪ್, ಒಬ್ಬ ವಿಐಪಿ ಮತ್ತು ಇತರ ಇಬ್ಬರು ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ಹೊಸ ತನಿಖಾ ತಂಡವನ್ನು ರಚಿಸಿದೆ.