Homeನ್ಯಾಯ ಪಥಬಹುಜನ ಭಾರತ: ಎನ್.ಡಿ.ಟಿ.ವಿ ಅದಾನಿ ಕೈವಶ; ಮತ್ತೊಂದು ಚಾನೆಲ್ ಮೋದಿ ಪದತಲಕ್ಕೆ

ಬಹುಜನ ಭಾರತ: ಎನ್.ಡಿ.ಟಿ.ವಿ ಅದಾನಿ ಕೈವಶ; ಮತ್ತೊಂದು ಚಾನೆಲ್ ಮೋದಿ ಪದತಲಕ್ಕೆ

- Advertisement -
- Advertisement -

ಮೂರೂ ಬಿಟ್ಟ ಸಮೂಹ ಮಾಧ್ಯಮಗಳ ನಡುವೆ ಅಷ್ಟಿಷ್ಟು ಮಾನ ಉಳಿಸಿಕೊಂಡಿರುವ ಎನ್.ಡಿ.ಟಿ.ವಿಗೆ ಆಪತ್ತು ಎದುರಾಗಿದೆ. ಏಷ್ಯಾ ಖಂಡದ ಅತಿದೊಡ್ಡ ಶ್ರೀಮಂತ ಮತ್ತು ಜಗತ್ತಿನ ನಾಲ್ಕನೆಯ ಅತಿ ದೊಡ್ಡ ಐಶ್ವರ್ಯವಂತ ಗೌತಮ್ ಅದಾನಿ ಈ ಚಾನೆಲ್ ಕೈವಶಕ್ಕೆ ಮುಂದಾಗಿದ್ದಾರೆ.

ನರೇಂದ್ರ ಮೋದಿ ಆಡಳಿತವನ್ನು ನಿಷ್ಠುರ ವಿಮರ್ಶೆಗೆ ಒಳಪಡಿಸುತ್ತಿದ್ದ ಕಟ್ಟಕಡೆಯ ಕೊರಳನ್ನು ಅದುಮಲೆಂದೇ ಜರುಗಿರುವ ಲೆಕ್ಕಾಚಾರದ ಹುನ್ನಾರವಿದು ಎಂದು ಸ್ವತಂತ್ರ ಮಾಧ್ಯಮ ತಜ್ಞರು ಈ ವಿದ್ಯಮಾನ ಕುರಿತು ಕಳವಳ ಪ್ರಕಟಿಸಿದ್ದಾರೆ.

ಕೋಮುವಾದ, ಕಟ್ಟರ್ ಹಿಂದುತ್ವ, ಅಲ್ಪಸಂಖ್ಯಾತರ ವಿರುದ್ಧ ದ್ವೇಷ, ಸುಳ್ಳು ಸುದ್ದಿಯ ಪಿಡುಗಿಗೆ ನೀರೆರೆದು ಪೋಷಿಸುತ್ತಿರುವ ಬಾಲಬಡುಕ ಮಾಧ್ಯಮಗಳ ನಡುವೆ ಎನ್.ಡಿ.ಟಿ.ವಿಯದು ಒಂಟಿದನಿಯಾಗಿತ್ತು. ಆಳುವವರ ಕೆಂಗಣ್ಣಿಗೆ ಗುರಿಯಾಗಿತ್ತು. ಎನ್.ಡಿ.ಟಿ.ವಿ ಇಂಡಿಯಾ ಹೆಸರಿನಲ್ಲಿ ಬಿತ್ತರವಾಗುತ್ತಿದ್ದ ಹಿಂದೀ ಚಾನೆಲ್ಲಿನ ಅತ್ಯಂತ ನಿರ್ಭೀತ ನಿಷ್ಠುರವಾದಿ ದನಿ ರವೀಶ್ ಕುಮಾರ್ ಅವರಂತೂ ಆಳುವ ಪಕ್ಷ-ಪರಿವಾರಕ್ಕೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದ್ದರು.

ಪ್ರಧಾನಮಂತ್ರಿಯವರು ಮತ್ತು ಆಳುವ ಪಕ್ಷದ ಪರಮಾಪ್ತರು ಅದಾನಿ. ಎನ್.ಡಿ.ಟಿ.ವಿಯನ್ನು ವಶಪಡಿಸಿಕೊಳ್ಳುವ ಅವರ ನಡೆ ಅನಿರೀಕ್ಷಿತ ಮತ್ತು ಆಘಾತಕಾರಿ.

ಪ್ರಣಯ್ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ಪ್ರಸಿದ್ಧ ಪತ್ರಕರ್ತ ದಂಪತಿ. ಎನ್.ಡಿ.ಟಿ.ವಿ ಸುದ್ದಿ ಸಂಸ್ಥೆಯ ಸ್ಥಾಪಕರು. ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (ವಿಸಿಪಿಎಲ್) ಎಂಬುದು 2008ರಲ್ಲಿ ಹುಟ್ಟಿಕೊಂಡ ಕಂಪನಿ. ಹತ್ತು ವರ್ಷಗಳ ಹಿಂದೆ ಈ ಸಂಸ್ಥೆಯಿಂದ 403.85 ಕೋಟಿ ರುಪಾಯಿಗಳ ಸಾಲವನ್ನು ಪಡೆಯಿತು ಎನ್.ಡಿ.ಟಿ.ವಿ. ಈ ಸಾಲ ನೀಡಿಕೆಗೆ ಬೇಕಾದ ಹಣವನ್ನು ಮುಖೇಶ್ ಅಂಬಾನಿಯವರ ರಿಲಯನ್ಸ್‌ನಿಂದ ಪಡೆದಿತ್ತು ವಿಸಿಪಿಎಲ್.

ಸಾಲಕ್ಕೆ ಬದಲಾಗಿ ಎನ್.ಡಿ.ಟಿ.ವಿಯ ಶೇ.29.18ರಷ್ಟು ಪಾಲುದಾರಿಕೆ ಪಡೆಯಬಹುದಾದ ವಾರಂಟ್‌ಗಳನ್ನು ವಿ.ಸಿ.ಪಿ.ಎಲ್‌ಗೆ ನೀಡಲಾಯಿತು. ಈ ವಾರಂಟುಗಳನ್ನು ವಿ.ಸಿ.ಪಿ.ಎಲ್ ತನಗೆ ಬೇಕಾದಾಗ ಪರಿವರ್ತಿಸಿಕೊಳ್ಳಬಹುದಿತ್ತು. ಈ ನಡುವೆ ಅದಾನಿ ಉದ್ಯಮ ಸಮೂಹ ವಿ.ಸಿ.ಪಿ.ಎಲ್‌ನ್ನು ಖರೀದಿಸಿತು. ಹಕ್ಕುಗಳನ್ನು ಚಲಾಯಿಸಿ ವಿ.ಸಿ.ಪಿ.ಎಲ್‌ಗೆ ನೀಡಲಾಗಿದ್ದ ವಾರಂಟುಗಳನ್ನು ಶೇ.29.18ರ ಪಾಲುದಾರಿಕೆಯಾಗಿ ಪರಿವರ್ತಿಸಿಕೊಂಡಿತು. ಎನ್.ಡಿ.ಟಿ.ವಿಯ ಶೇ.50ಕ್ಕಿಂತ ಹೆಚ್ಚು ಷೇರುಗಳನ್ನು ಖರೀದಿಸಿ ಸಂಸ್ಥೆಯ ಪೂರ್ಣ ನಿಯಂತ್ರಣ ಪಡೆಯುವುದು ಅದಾನಿ ಸಮೂಹದ ಮುಂದಿನ ನಡೆ.

ಎನ್.ಡಿ.ಟಿ.ವಿಯ ಸ್ವತಂತ್ರ ಷೇರುದಾರರ ಸಂಖ್ಯೆ 29,691. ತಲಾ ಎರಡು ಲಕ್ಷ ಅಥವಾ ಅದಕ್ಕಿಂತ ಕಡಿಮೆ ಬಂಡವಾಳವನ್ನು ಇವರು ಎನ್.ಡಿ.ಟಿ.ವಿಯಲ್ಲಿ ಹೂಡಿದ್ದಾರೆ. ಕಂಪನಿಯ ಶೇ.23.85ರಷ್ಟು ಪಾಲುದಾರಿಕೆ ಇವರ ಕೈಯಲ್ಲಿದೆ. ಎನ್.ಡಿ.ಟಿ.ವಿಯ ಶೇ.32ರಷ್ಟು ಷೇರುಗಳು ಈಗಲೂ ರಾಯ್ ದಂಪತಿ ಬಳಿ ಇವೆ. ಅಂದರೆ ಅದಾನಿ ಕಂಪನಿಯು ವಿಸಿಪಿಎಲ್ ಸಂಸ್ಥೆಯ ಮೂಲಕ ಕೈವಶ ಮಾಡಿಕೊಂಡಿರುವ ಷೇರುಗಳ ಪ್ರಮಾಣಕ್ಕಿಂತ ಹೆಚ್ಚು. ಆದರೆ ಸ್ವತಂತ್ರ ಷೇರುದಾರರಿಂದ ಶೇ.26ರಷ್ಟು ಹೆಚ್ಚುವರಿ ಷೇರುಗಳನ್ನು ಖರೀದಿಸಿದರೆ, ಎನ್.ಡಿ.ಟಿ.ವಿಯ ನಿಯಂತ್ರಣ ಅದಾನಿ ಉದ್ಯಮ ಸಮೂಹದ ವಶವಾಗುವಲ್ಲಿ ಅನುಮಾನವೇ ಉಳಿಯದು. ಅದು ಇನ್ನೂ ಶೇ.26ರಷ್ಟು ಈಕ್ವಿಟಿ ಖರೀದಿಸುವುದಾಗಿ ಈಗಾಗಲೆ ಘೋಷಿಸಿದೆ ಕೂಡ.

ಅದಾನಿ ಉದ್ಯಮ ಸಮೂಹದ ಈ ಅನಿರೀಕ್ಷಿತ ನಡೆಗಳಿಗೆ ತನ್ನ ಒಪ್ಪಿಗೆ ಇಲ್ಲವೆಂದು ಎನ್.ಡಿ.ಟಿ.ವಿಯ ಸ್ಥಾಪಕರು ಪ್ರತಿಭಟಿಸಿದ್ದಾರೆ. ಕಾನೂನುತಜ್ಞರ ಪ್ರಕಾರ ಅದಾನಿ ನಡೆಗೆ ಯಾವುದೇ ಅಡ್ಡಿಯಿಲ್ಲ. ಎನ್.ಡಿ.ಟಿ.ವಿ ಅಸಹಾಯಕ. ತನ್ನದೇ ಷೇರುಗಳನ್ನು ಹೆಚ್ಚು ದರ ತೆತ್ತು ಮಾರುಕಟ್ಟೆಯಿಂದ ಖರೀದಿಸುವ ಆಯ್ಕೆಯೇನೋ ಇದೆ. ಆದರೆ ಎನ್.ಡಿ.ಟಿ.ವಿ ಕೊಡುವುದಕ್ಕಿಂತ ಹೆಚ್ಚು ದರ ಪಾವತಿ ಮಾಡುವ ಪೈಪೋಟಿಗೆ ಅದಾನಿ ಇಳಿಯುವುದಿಲ್ಲ ಎಂಬ ಖಾತರಿ ಏನು? ಅಂತಹ ಸನ್ನಿವೇಶದಲ್ಲಿ ಅದಾನಿ ಜೊತೆ ಸ್ಪರ್ಧೆಗೆ ಇಳಿಯುವಷ್ಟು ಹಣಬಲ ಎನ್.ಡಿ.ಟಿ.ವಿಗೆ ಉಂಟೇ? ತಾನು ಪಡೆದಿದ್ದ 403.85 ಕೋಟಿ ರುಪಾಯಿಗಳ ಸಾಲವನ್ನು ವಾಪಸು ಕೊಟ್ಟು ಅದಾನಿ ಆಪತ್ತನ್ನು ದೂರ ಮಾಡಿಕೊಳ್ಳಬಹುದೇ? ಸಾಲವನ್ನು ವಾಪಸು ಕೊಡುವ ಅವಕಾಶವೇನೋ ಉಂಟು. ಆದರೆ ಸಾಲದ ಹಣವನ್ನು ವಾಪಸು ಪಡೆದು ಹಿಂದೆ ಸರಿಯಬೇಕೇ ಅಥವಾ ಈಕ್ವಿಟಿಯನ್ನು ಉಳಿಸಿಕೊಳ್ಳಬೇಕೇ ಎಂಬುದು ಅದಾನಿಯವರ ವಿವೇಚನೆಗೆ ಬಿಟ್ಟ ವಿಷಯ. ಎನ್.ಡಿ.ಟಿ.ವಿಯ ಉಸಿರು ಕಟ್ಟಿಸುವುದೇ ಅದಾನಿಯವರ ಉದ್ದೇಶ ಎಂಬುದು ಮೇಲ್ನೋಟಕ್ಕೆ ನಿಚ್ಚಳ. ಹೀಗಿದ್ದಾಗ ಸಾಲದ ಹಣ ಪಡೆದು ಎನ್.ಡಿ.ಟಿ.ವಿಯನ್ನು ಅದರ ಪಾಡಿಗೆ ಬಿಟ್ಟುಬಿಡಲು ಅದಾನಿ ಒಪ್ಪುವುದು ಅಸಾಧ್ಯ. ಅವರಿಗೆ ಕಂಪನಿ ಬೇಕೇ ವಿನಃ ಹಣವಲ್ಲ.

ಮುಖ್ಯಧಾರೆಯ ಮಾಧ್ಯಮ ಕ್ಷೇತ್ರವನ್ನು ಪ್ರವೇಶಿಸಲು ಬಯಸಿದ್ದಾರೆ ಗೌತಮ್ ಅದಾನಿ. ಅದಾನಿ ಮೀಡಿಯಾ ವೆಂಚರ್ಸ್ ಎಂಬ ಕಂಪನಿಯನ್ನು ವರ್ಷದ ಹಿಂದೆಯೇ ಹುಟ್ಟಿಹಾಕಿದ್ದರು. ರಾಘವ ಬೆಹಲ್ ಅವರ ಕ್ವಿಂಟಿಲಿಯನ್ ಬಿಸಿನೆಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಶೇ.49ರಷ್ಟು ಪಾಲುದಾರಿಕೆಯನ್ನು ಹೋದ ವರ್ಷವೇ ಖರೀದಿಸಿದ್ದರು. ಖರೀದಿಗೆ ಪ್ರತಿಯಾಗಿ ಪಾವತಿಸಿದ ಹಣವೆಷ್ಟು ಎಂಬುದನ್ನು ಗೋಪ್ಯವಾಗಿ ಇರಿಸಿದೆ.

ಕ್ವಿಂಟ್ ಡಿಜಿಟಲ್ ಮೀಡಿಯಾ ಕಂಪನಿಯ ಅಧ್ಯಕ್ಷರಾಗಿದ್ದ ಸಂಜಯ ಪುಗಲಿಯಾ ಎಂಬ ಪತ್ರಕರ್ತರೊಬ್ಬರನ್ನು ಅದಾನಿ ನೇಮಕ ಮಾಡಿಕೊಂಡಿದ್ದರು. ಎನ್.ಡಿ.ಟಿ.ವಿಯ ಈಕ್ವಿಟಿಗಳ ಖರೀದಿಯ ನಂತರ ಪುಗಲಿಯಾ ನೀಡಿರುವ ಈ ಹೇಳಿಕೆಯನ್ನು ಗಮನಿಸಿ- ’ಭಾರತೀಯ ನಾಗರಿಕರು, ಗ್ರಾಹಕರು ಹಾಗೂ ಭಾರತದಲ್ಲಿ ಆಸಕ್ತಿ ಹೊಂದಿರುವವರನ್ನು ಜ್ಞಾನ-ಮಾಹಿತಿ ನೀಡಿ ಸಬಲಗೊಳಿಸುವ ಉದ್ದೇಶ ಅದಾನಿ ಮೀಡಿಯಾ ಕಂಪನಿಯದು. ನಮ್ಮ ಈ ಮುನ್ನೋಟವನ್ನು ಜಾರಿಗೆ ತರಲು ಎನ್.ಡಿ.ಟಿ.ವಿ ಅತ್ಯಂತ ಸೂಕ್ತ ಮಾಧ್ಯಮ ವೇದಿಕೆ. ಸುದ್ದಿ ಬಟವಾಡೆಯಲ್ಲಿ ಎನ್.ಡಿ.ಟಿ.ವಿಯ ನಾಯಕತ್ವವನ್ನು ಮತ್ತಷ್ಟು ಬಲಿಷ್ಠಗೊಳಿಸುವುದು ನಮ್ಮ ಉದ್ದೇಶ’.

ಇತ್ತೀಚೆಗೆ 5ಜಿ ಹರಾಜಿನಲ್ಲಿ ಭಾಗವಹಿಸುವ ಮೂಲಕ ದೂರಸಂಪರ್ಕ ಕ್ಷೇತ್ರಕ್ಕೆ ಕಾಲಿಟ್ಟು ಅಚ್ಚರಿ ಮೂಡಿಸಿದ ಅದಾನಿ ಸಮೂಹ, ವಿಮಾನ ನಿಲ್ದಾಣಗಳು, ಬಂದರುಗಳು, ಸಿಮೆಂಟ್ ಉತ್ಪಾದನೆ, ತಾಮ್ರ ಸಂಸ್ಕರಣೆ, ಡೇಟಾ ಕೇಂದ್ರಗಳು, ಹಸಿರು ಜಲಜನಕ, ಪೆಟ್ರೋಕೆಮಿಕಲ್ ಸಂಸ್ಕರಣೆ, ರಸ್ತೆಗಳ ನಿರ್ಮಾಣ, ಸೋಲಾರ್ ಸೆಲ್ ತಯಾರಿಕೆಯ ಕ್ಷೇತ್ರಗಳಲ್ಲಿ ಭಾರೀ ಬಂಡವಾಳ ಹೂಡಿದೆ. ಉದ್ಯಮ ಸದನಗಳ ಏಕೈಕ ಗುರಿ ಲಾಭ ಗಳಿಕೆ. ಅದಾನಿ ಉದ್ಯಮ ಸಮೂಹಕ್ಕೂ ಲಾಭ ಗಳಿಕೆಯ ಹಲವು ಹಿತಾಸಕ್ತಿಗಳಿವೆ. ಈ ಹಿತಾಸಕ್ತಿಗಳು ಸರ್ಕಾರದ ನೀತಿ ನಿರ್ಧಾರಗಳನ್ನೇ ಅವಲಂಬಿಸಿರುತ್ತವೆ. ಇಂತಹ ಉದ್ಯಮ ಸಂಸ್ಥೆಗಳು ಪತ್ರಿಕಾ ಕ್ಷೇತ್ರಕ್ಕೆ ಕಾಲಿರಿಸಿದರೆ ಸರ್ಕಾರವನ್ನು ಟೀಕಿಸುವುದು ಅಸಾಧ್ಯ. ಈ ಮಾತು ಅದಾನಿ ಉದ್ಯಮ ಸಮೂಹಕ್ಕೂ ಅನ್ವಯಿಸುತ್ತದೆ.

 

ಎನ್.ಡಿ.ಟಿ.ವಿಯನ್ನು ಕೈವಶ ಮಾಡಿಕೊಳ್ಳುವ ಮೂಲಕ ಅದಾನಿ ಸಮೂಹ ತನ್ನ ಪ್ರಬಲ ಎದುರಾಳಿ ರಿಲಯನ್ಸ್ ಕಂಪನಿಯೊಂದಿಗೆ ಮಾಧ್ಯಮ ಕ್ಷೇತ್ರದಲ್ಲೂ ಪೈಪೋಟಿ ನೀಡಲು ಹೊರಟಿದೆ. ಈ ನಡುವೆ 2021-22ರ ಆರ್ಥಿಕ ವರ್ಷದಲ್ಲಿ ಅದಾನಿ ಗುಂಪಿನ ಒಟ್ಟು ಸಾಲದ ಮೊತ್ತ 2.2 ಕೋಟಿ ಲಕ್ಷ ರುಪಾಯಿಗಳು. 2020-21ರ ಸಾಲಿನಲ್ಲಿ 1.57 ಲಕ್ಷ ಕೋಟಿ ರುಪಾಯಿಗಳಷ್ಟಿದ್ದ ಈ ಸಾಲ ಒಂದೇ ವರ್ಷದಲ್ಲಿ ಶೇ.೪೨ರಷ್ಟು ಹೆಚ್ಚಳ ಕಂಡಿದೆ.

ಜನತಂತ್ರ ವ್ಯವಸ್ಥೆಯಲ್ಲಿ ಜನಸಮೂಹಗಳಿಗೆ ಆಗುವ ನಷ್ಟವಿದು. ಉದ್ಯಮ ಸಂಸ್ಥೆಗಳು ಮತ್ತು ಸರ್ಕಾರಕ್ಕೆ ಆಗುವ ಲಾಭ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿನ ಪತ್ರಿಕಾ ಸ್ವಾತಂತ್ರ್ಯ ತೀವ್ರ ಕುಸಿತ ಕಂಡಿದೆ. ಪತ್ರಿಕಾ ಸ್ವಾತಂತ್ರ್ಯದ ವಿಶ್ವ ಸೂಚ್ಯಂಕದಲ್ಲಿ ಭಾರತದ ಸ್ಥಾನ 2022ರ ಒಂದೇ ವರ್ಷದಲ್ಲಿ 142ರಿಂದ 150ಕ್ಕೆ ಇಳಿಯಿತು.

ಈ ’ದಾಳಿ’ಯಲ್ಲಿ ಕಳವಳಕಾರಿ ಸಂದೇಶವೊಂದು ಅಡಗಿದೆ. ಕೇವಲ ನ್ಯೂಸ್ ಟೆಲಿವಿಷನ್‌ಗೆ ಮಾತ್ರವಲ್ಲ, ಸ್ವತಂತ್ರ ಮಾಧ್ಯಮದ ಪರಿಕಲ್ಪನೆಗೆ ಬಿದ್ದಿರುವ ಹೊಡೆತವಿದು. ಕಷ್ಟನಷ್ಟಗಳೇನೇ ಇದ್ದರೂ ಎನ್.ಡಿ.ಟಿ.ವಿ ಸಂಪಾದಕೀಯ ಸ್ವಾತಂತ್ರ್ಯವನ್ನು ಬಲಿಕೊಟ್ಟಿಲ್ಲ. ಮಾಲೀಕರಾದ ರಾಯ್ ದಂಪತಿಗಳ ದಿಟ್ಟತನವನ್ನು ಮತ್ತು ಖಚಿತ-ನಿಚ್ಚಳ ನೋಟವನ್ನು ಮೆಚ್ಚಬೇಕು ಎನ್ನುತ್ತಾರೆ ’ದಿ ಹಿಂದೂ’ ಪತ್ರಿಕಾ ಸಮೂಹದ ನಿವೃತ್ತ ಪ್ರಧಾನ ಸಂಪಾದಕ ಎನ್.ರಾಮ್

ಶತಮಾನದ ಅಂತ್ಯದ ವೇಳೆಗೆ ಜಗತ್ತಿನ ಮೂರನೆಯ ಒಂದರಷ್ಟು ಹೊಲಗದ್ದೆಗಳು, ತೋಟತುಡಿಕೆಗಳು, ಗೋಮಾಳಗಳು ಸಾರಾಸಗಟು ಬಂಜರು ಬೀಳಲಿವೆ. ಅರ್ಥಾತ್ ಅವುಗಳಲ್ಲಿ ಆಹಾರ ಉತ್ಪಾದನೆ ಅಸಾಧ್ಯವೆನಿಸಲಿದೆ. ಮುಂದಿನ ಇಪ್ಪತ್ತೆಂಟು ವರ್ಷಗಳಲ್ಲಿ ಜಗತ್ತಿನ ಅನ್ನದ ಕಣಜಗಳು ಬೆಳೆ ವೈಫಲ್ಯ ಎದುರಿಸಲಿದ್ದು, ತೀವ್ರ ತಾಪಮಾನದಿಂದಾಗಿ ಜಾನುವಾರುಗಳು ಸಾಯಲಿವೆ. ಆಹಾರದ ಬೆಲೆಗಳು ಆಗಸಕ್ಕೆ ಜಿಗಿದು ಈಗಾಗಲೇ ಹಸಿವನ್ನೇ ಹೊದ್ದು ಮಲಗುತ್ತಿರುವ ಜನಕೋಟಿಯೊಂದಿಗೆ ಮುಂದಿನ ಎಂಟು ವರ್ಷಗಳಲ್ಲಿ 12 ಕೋಟಿ ತುತ್ತಿನ ಚೀಲಗಳು ಹೊಸದಾಗಿ ಸೇರಿಕೊಳ್ಳಲಿವೆ.

ಜಾಗತಿಕ ತಾಪಮಾನ ಏರಿಕೆಯು ಜಗತ್ತನ್ನು ಹೆಚ್ಚು ಹೆಚ್ಚು ಬರಗಾಲ, ಜಲಕ್ಷಾಮ, ಕಾಳ್ಗಿಚ್ಚು, ಉಷ್ಣೋಗ್ರತೆಯ ಗಾಳಿಗುಮ್ಮಟಗಳು, ಬಿಸಿಮಾರುತಗಳು, ಯರ್ರಾಬಿರ್ರಿ ಮಳೆ-ಬೆಳೆಯ ಏರುಪೇರುಗಳು, ಹಸಿವೆ, ರೋಗರುಜಿನ, ದಾರಿದ್ರ್ಯ ಅಂಧಕಾರ ಅಪಾಯಗಳತ್ತ ಒಯ್ಯಲಿದೆ. ಪ್ರತಿಕೂಲ ಪರಿಸರದ ಕಾರಣ ಮನುಕುಲವು ಮಹಾವಲಸೆಗಳಿಗೆ ಸಾಕ್ಷಿಯಾಗಲಿದೆ. ವಲಸೆಯ ಶಕ್ತಿ ಸಂಪನ್ಮೂಲಗಳಿಲ್ಲದ ಸಮುದಾಯಗಳು ಇದ್ದಲ್ಲಿಯೇ ನವೆದು ಸಾಯಲಿವೆ.

ಈ ಸಂಕಟವು ಈಗಾಗಲೆ ಜಗತ್ತಿನ 330 ಕೋಟಿ ಜನರ ಮೇಲೆ ಎರಗಿದೆ. ಅವರ ದೈನಂದಿನ ಬದುಕು ದುರ್ಭರವಾಗಿದೆ. ಕೈಗಾರಿಕಾಯುಗ ಆರಂಭವಾಗುವ ಮುನ್ನ ನೆಲೆಸಿದ್ದ ತಾಪಮಾನ ಒಂದೂವರೆ ಡಿಗ್ರಿಯಷ್ಟು ಹೆಚ್ಚಿತೆಂದರೆ ಬಿಸಿಪ್ರಳಯದ ಘನಘೋರ ದುಃಸ್ವಪ್ನ ನಿಜರೂಪ ತಳೆದು ಇಳೆಯನ್ನು ಆವರಿಸಲಿದೆ. ಒಂದೂವರೆ ಡಿಗ್ರಿಯ ಪೈಕಿ 1.1ರಷ್ಟು ಡಿಗ್ರಿ ಈಗಾಗಲೆ ಹೆಚ್ಚಿಬಿಟ್ಟಿದೆ. ಕೇವಲ ಇನ್ನು ಇಪ್ಪತ್ತೇ ವರ್ಷಗಳಲ್ಲಿ 1.5 ಡಿಗ್ರಿಯನ್ನು ಮುಟ್ಟುವ ನಿರೀಕ್ಷೆ ಇದೆ. ತಾಪಮಾನ ಹೆಚ್ಚಳ ಎರಡು ಡಿಗ್ರಿ ಮುಟ್ಟಿದರೆ ಕಾಳ್ಗಿಚ್ಚಿಗೆ ಸಿಗುವ ಭೂಪ್ರದೇಶ ಮೂರನೆಯ ಒಂದರಷ್ಟು ಪ್ರಮಾಣವನ್ನು ಮುಟ್ಟಿ ಮುನ್ನಡೆಯಲಿದೆ.

ಇಂತಹ ಎಲ್ಲ ಜ್ವಲಂತ ಸಮಸ್ಯೆಗಳ ಮೇಲೆ ಪರದೆ ಸರಿಸಿ ಆಳುವವರ ಭಜನೆಯಲ್ಲಿ ಮುಳುಗುವ ಸಮೂಹ ಮಾಧ್ಯಮಗಳ ಸಾಲಿಗೆ ಎನ್.ಡಿಟಿ.ವಿ ಕೂಡ ಸೇರಿಬಿಡಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...