ಹತ್ರಾಸ್‌ನ ದಲಿತ ಯುವತಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ತಮ್ಮ ರಾಜ್ಯದ ಪೊಲೀಸರ ಮೇಲೆಯೆ ನಂಬಿಕೆ ಇರಲಿಲ್ಲ ಎಂದು ರಾಜ್ಯದ ಕಾರ್ಮಿಕ ಸಚಿವ ಹಿರಿಯ ಬಿಜೆಪಿ ನಾಯಕರಾಗಿರುವ ಸುನಿಲ್ ಭರಾಲ ತಿಳಿಸಿದ್ದಾರೆ.
ಹತ್ರಾಸ್ ಪ್ರಕರಣವನ್ನು ನಿಭಾಯಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ವಿಫಲಗೊಂಡಿದ್ದಾರೆ ಎಂದು ಅವರು ಸೂಚಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಪ್ರಕರಣದ ಬಗ್ಗೆ ಮಾತನಾಡಿದ ಅವರು, “ಈ ಪ್ರಕರಣವನ್ನು ಸಿಬಿಐ ವಹಿಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಆದಿತ್ಯನಾಥ್ ನಿರ್ಧರಿಸಿದ್ದರು. ಎಲ್ಲಾ ಪೊಲೀಸರು ಒಳ್ಳೆಯವರಲ್ಲ ಎಂದು ಅವರು ಹೇಳಿದ್ದರು. ಮೊದಲ ದಿನದಿಂದಲೂ ಆದಿತ್ಯನಾಥ್ ಸಂತ್ರಸ್ಥ ಕುಟುಂಬದ ಜೊತೆ ನಿಂತಿದ್ದರು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹತ್ರಾಸ್: ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆಗೈದಿದ್ದಾರೆ ಎಂದು ಸಿಬಿಐ ಚಾರ್ಜ್‌ಶೀಟ್
ಸೆಪ್ಟೆಂಬರ್ 14 ರಂದು ಹತ್ರಾಸ್‌ನಲ್ಲಿ 20 ವರ್ಷದ ದಲಿತ ಯುವತಿಯನ್ನು ಮೇಲ್ಜಾತಿ ಸಮುದಾಯದ ನಾಲ್ಕು ಜನರು ಅತ್ಯಾಚಾರಕ್ಕೆ ಒಳಪಡಿಸಿದ್ದರು. ಘಟನೆಯಲ್ಲಿ ಯುವತಿಯು ತೀವ್ರವಾಗಿ ಗಾಯಗೊಂಡಿದ್ದರಿಂದ ದೆಹಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಅಲ್ಲದೆ ಸೆಪ್ಟೆಂಬರ್ 30 ರಂದು ಮೃತ ಸಂತ್ರಸ್ತೆಯ ಶರೀರವನ್ನು ಪೊಲೀಸರು ಆತುರದಿಂದ ಅಂತ್ಯಕ್ರಿಯೆ ಮಾಡಿದ್ದರು. ಈ ಘಟನೆಯು ರಾಷ್ಟ್ರದಾದ್ಯಂತ ಆಕ್ರೋಶವನ್ನು ಉಂಟುಮಾಡಿತು.
ಅಲ್ಲದೆ ಪ್ರಕರಣದ ಬಗ್ಗೆ ಸಿಬಿಐ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ, ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೆ ಒಳಪಡಿಸಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದೆ. ಸಿಬಿಐ (ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ನಡೆಸಿದ ತನಿಖೆಯನ್ನು ಅಲಹಾಬಾದ್ ಹೈಕೋರ್ಟ್ ಮೇಲ್ವಿಚಾರಣೆ ಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ಅಕ್ಟೋಬರ್‌ನಲ್ಲಿ ಹೇಳಿತ್ತು.
ಇದನ್ನೂ ಓದಿ: ಹತ್ರಾಸ್ ಪ್ರಕರಣ: ವಿಧಿವಿಜ್ಞಾನ ವರದಿ ಪ್ರಶ್ನಿಸಿದ್ದ ವೈದ್ಯರ ಅಮಾನತು!


