ಹಲವು ಸ್ವತಂತ್ರ ಪತ್ರಕರ್ತರು ತಮ್ಮ ಯೂಟ್ಯೂಬ್ ಚಾನೆಲ್‌ಗಳಲ್ಲಿ ಸಾರ್ವತ್ರಿಕ ಚುನಾವಣಾ ಫಲಿತಾಂಶದ ಕುರಿತು ವಿಡಿಯೋ ಅಪ್ಲೋಡ್ ಮಾಡಿದ ಬಳಿಕ, ಅವರ ಹಲವಾರು ಹಳೆಯ ವಿಡಿಯೋಗಳು ಕಾಪಿರೈಟ್ ನೋಟಿಸ್ ಪಡೆದಿದ್ದು, ಆ ವಿಡಿಯೋಗಳು ಹಣ ಗಳಿಕೆಗೆ ಅನರ್ಹವಾಗಿವೆ ಎಂದು ತಿಳಿಸಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಸ್ವತಂತ್ರ ಪತ್ರಕರ್ತರಾದ ರವೀಶ್ ಕುಮಾರ್, ಅಜಿತ್ ಅಂಜುಮ್, ಅಭಿಸರ್ ಶರ್ಮಾ ಮತ್ತು ಸಾಕ್ಷಿ ಜೋಷಿ ಹಾಗೆಯೇ ಬೋಲ್ಟಾ ಹಿಂದೂಸ್ತಾನ್, ಪ್ರೋಬ್, ದಸ್ತಕ್ ಲೈವ್ ನ್ಯೂಸ್ ಮತ್ತು ಮಿಸ್ಟರ್ ರಿಯಾಕ್ಷನ್ ವಾಲಾ ಅವರಂತಹ ಕಂಟೆಂಟ್ ರಚನೆಕಾರರು ಕಾಪಿರೈಟ್ ನೋಟಿಸ್ ಸ್ವೀಕರಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಸಂಗೀತ ಸಂಗ್ರಾಹಕ, ವಿತರಕ ಮತ್ತು ನಿರ್ಮಾಣ ಸಂಸ್ಥೆಯಾದ ಝಿಕಿ ಮೀಡಿಯಾ ಎಂಟರ್‌ಟೈನ್‌ಮೆಂಟ್ ಎಂಬ ಒಂದೇ ಕಂಪನಿಯಿಂದ ಯೂಟ್ಯೂಬ್ ಮೂಲಕ ಎಲ್ಲರಿಗೂ ನೋಟಿಸ್ ಕಳುಹಿಸಲಾಗಿದೆ.
ಜೋಹಾನ್ಸ್‌ಬರ್ಗ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಈ ಕಂಪನಿ ಭಾರತದಲ್ಲಿ ವಾರ್ನರ್ ಮ್ಯೂಸಿಕ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ನೋಯ್ಡಾದಲ್ಲಿ ವಾರ್ನರ್ ಮ್ಯೂಸಿಕ್‌ನ ಕಚೇರಿಯಿದೆ. ಅರುಣ್ ನಗರ್, ಅಭಿನಂದನ್ ಭಾರದ್ವಾಜ್ ಮತ್ತು ನಿಶಾ ನಗರ್ ಎಂಬವರು ಅದರ ನಿರ್ದೇಶಕರಾಗಿದ್ದಾರೆ. ದಲೇರ್ ಮೆಹೆಂದಿ, ಜಾಸ್ಮಿನ್ ಸ್ಯಾಂಡ್ಲಾಸ್ ಮತ್ತು ಜೆ ಸ್ಟಾರ್‌ನಂತಹ ಕಲಾವಿದರು ಕಂಪನಿಯ ಭಾಗವಾಗಿದ್ದಾರೆ.
ಕೆಲವು ವರ್ಷಗಳ ಹಿಂದೆ ಪ್ರಕಟಿಸಿದ ಆಡಿಯೋ ಮತ್ತು ವಿಡಿಯೋಗಳಿಗೆ ಸಂಬಂಧಿಸಿ ಝಿಕಿ ಮೀಡಿಯಾ ಕಾಪಿರೈಟ್ ನೋಟಿಸ್ ನೀಡಿದೆ. ಆದರೆ, ಪತ್ರಕರ್ತರ ವಿಡಿಯೋಗಳಲ್ಲಿ ಹೆಚ್ಚಿನವು ಪತ್ರಿಕಾಗೋಷ್ಠಿಗಳಂತಹ ಸಾರ್ವಜನಿಕ ಡೊಮೇನ್‌ನಿಂದ ಪಡೆದ ಕ್ಲಿಪ್‌ಗಳಾಗಿವೆ ಎಂದು ದಿ ನ್ಯೂಸ್ ಮಿನಿಟ್ ತಿಳಿಸಿದೆ.

ನಾವು ಝಿಕಿ ಮೀಡಿಯಾದ ಯಾವುದೇ ಮ್ಯೂಸಿಕ್, ಆಡಿಯೋ, ವಿಡಿಯೋಗಳನ್ನು ಬಳಸಿಕೊಂಡಿಲ್ಲ. ಆದರೂ, ಕಾಪಿರೈಟ್ ನೋಟಿಸ್ ಸ್ವೀಕರಿಸಿರುವುದು ಆಫಾತ ತಂದಿದೆ ಎಂದು ಪತ್ರಕರ್ತರು ಹೇಳಿಕೊಂಡಿದ್ದಾರೆ.
“ನಿಮ್ಮ ವಿಡಿಯೋಗಳಲ್ಲಿ ಕಾಪಿರೈಟ್ ಹೊಂದಿರುವ ಅಂಶಗಳಿವೆ. ಅವುಗಳ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆ, ಇನ್ನು ಮುಂದೆ ತಮ್ಮ ಚಾನೆಲ್ ಹಣ ಗಳಿಸಲು ಸಾಧ್ಯವಿಲ್ಲ ಎಂದು ಯೂಟ್ಯೂಬ್‌ನಿಂದ ಈ-ಮೇಲ್ ಬಂದಿದೆ. ಕಾಪಿರೈಟ್ ಆರೋಪ ಮಾಡಿರುವುದು ಝಿಕಿ ಮೀಡಿಯಾ ಎಂಬುವುದಾಗಿ ಹೇಳಲಾಗಿದೆ” ಎಂದು ಪತ್ರಕರ್ತರು ತಿಳಿಸಿದ್ದಾರೆ. ಕೆಲ ಪತ್ರಕರ್ತರು ಈ ಸಮಸ್ಯೆಯನ್ನು ಪರಿಹರಿಸಿಕೊಂಡಿದ್ದಾರೆ ಎಂದು ನ್ಯೂಸ್ ಮಿನಿಟ್ ವರದಿ ಹೇಳಿದೆ.
ಇದನ್ನೂ ಓದಿ : ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಇಂಜಿನಿಯರ್ ರಶೀದ್, ಅಮೃತ್ ಪಾಲ್ ಸಿಂಗ್


