Homeಅಂಕಣಗಳುರೈತನ ಬೆತ್ತಲೆ ಸುಲಿದು ಪುಟಗೋಸಿ ಎಸೆವ ಪ್ರಧಾನಿ

ರೈತನ ಬೆತ್ತಲೆ ಸುಲಿದು ಪುಟಗೋಸಿ ಎಸೆವ ಪ್ರಧಾನಿ

- Advertisement -

ವಿಶ್ವದ ಗಮನ ಸೆಳೆದ ರೈತ ಆಂದೋಲನಕ್ಕೆ ವರ್ಷ ತುಂಬುವ ಹೊತ್ತಿನಲ್ಲಿ ಮೂರು ಕೃಷಿ ಕಾಯಿದೆಗಳನ್ನು ರದ್ದು ಮಾಡುವ ವಚನ ನೀಡಿದ್ದಾರೆ ಪ್ರಧಾನಿ.

’ಛಪ್ಪನ್ನೈವತ್ತಾರು’ ಇಂಚಿನ ಎದೆಗಾರಿಕೆಯ ಪ್ರಧಾನಿ ತಾವು ಆಡಿರುವ ಈ ನುಡಿಯನ್ನು ನಿರ್ವಂಚನೆಯಿಂದ ನಡೆಸಿಕೊಡಲಿ. ಮುಂಬರುವ ದಿನಗಳಲ್ಲಿ ಇವೇ ಕಾಯಿದೆಯ ಅನಿಷ್ಟಗಳು ಛದ್ಮ ವೇಷ ಹೊದ್ದು ಪ್ರತ್ಯಕ್ಷವಾಗದಿರಲಿ.

ಒಂದು ಸಂದೇಹವನ್ನು ಮೋದಿಯವರು ಮತ್ತು ಅವರ ಪಕ್ಷ ನಿವಾರಿಸಬೇಕಿದೆ. ತಮ್ಮ ಮಾತುಗಳ ಕನ್ನಡಿಯಲ್ಲಿ ತಮ್ಮದೇ ಮುಖ ನೋಡಿಕೊಳ್ಳಬೇಕಿದೆ.

ದೇಶದ ಹಿತವೇ ಪರಮೋಚ್ಚ ಎಂಬುದು ಮೋದಿ ಮತ್ತು ಅವರ ಬೆಂಬಲಿಗರು ಹಗಲಿರುಳು ಜಪಿಸುವ ಮಂತ್ರ. ಅವರು ಬಣ್ಣಿಸಿರುವಂತೆ ಕೃಷಿ ಕಾಯಿದೆಗಳು ರಾಷ್ಟ್ರೀಯ ಹಿತವನ್ನು ಕಾಪಾಡುತ್ತವೆ. ಅವುಗಳ ಜಾರಿಯಲ್ಲಿ ದೇಶದ ಒಳಿತೇ ಅಡಗಿದೆ. ಈ ಮಾತು ನಿಜವೇ ಆಗಿದ್ದರೆ, ಈ ಕಾಯಿದೆಗಳನ್ನು ರದ್ದು ಮಾಡುವ ಮೂಲಕ ರಾಷ್ಟ್ರೀಯ ಹಿತವನ್ನು ಪ್ರಧಾನಿಯವರು ಉತ್ತರಪ್ರದೇಶ-ಪಂಜಾಬಿನ ಚುನಾವಣೆ ಗೆಲುವಿಗಾಗಿ ಬಲಿಕೊಟ್ಟಂತೆ ಆಗಲಿಲ್ಲವೇ?

ಮೂರು ಕೃಷಿ ಕಾಯಿದೆಗಳನ್ನು ಪ್ರಧಾನಿಯವರು ಈಗಲೂ ಸಮರ್ಥಿಸಿಕೊಳ್ಳುತ್ತಿರುವುದು ಆತಂಕದ ಸಂಗತಿ. ಸಾವಿರಾರು ವರ್ಷಗಳಿಂದ ವಿಕಾಸಗೊಳ್ಳುತ್ತ ಬಂದಿರುವ ಒಕ್ಕಲುತನಕ್ಕೆ ಯಾವುದು ತಾರಕ ಮತ್ತು ಯಾವುದು ಮಾರಕ ಎಂಬುದು ಒಕ್ಕಲು ಮಕ್ಕಳಿಗಲ್ಲದೆ ಮತ್ಯಾರಿಗೆ ತಿಳಿದಿದ್ದೀತು! ಆದರೆ ಆಳುವವರು
ಅಹಮಿಕೆಗೆ ಪಾರವೇ ಇಲ್ಲ. ಈ ಅಂಶ ಒಕ್ಕಲು ಮಕ್ಕಳಿಗಿಂತ ತಮಗೇ ಗೊತ್ತು ಎಂದು ಎದೆಯುಬ್ಬಿಸುತ್ತಾರೆ. ಕಾಯಿದೆ ಕಾನೂನುಗಳ ಮಾಡಿ ಹೇರುತ್ತಾರೆ. ಅವುಗಳನ್ನು ರೈತರಿಗೆ ತಾವು ನೀಡಿದ ಉಡುಗೊರೆ ಎನ್ನುತ್ತಾರೆ. ನಮಗೆ ಬೇಡದ ಉಡುಗೊರೆಯನ್ನು ಯಾಕೆ ಹೇರಿ ಉಸಿರು ಕಟ್ಟಿಸುತ್ತೀರಿ ಎಂಬ ರೈತರ ಅಳಲನ್ನು ಅವರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅಥವಾ ಅರ್ಥವೇ ಆಗದಂತೆ ನಟಿಸುತ್ತಾರೆ.

ಈ ಕಾರಣಕ್ಕಾಗಿಯೇ ರೈತ ಸಮುದಾಯ ಮೋದಿಯವರ ಮಾತುಗಳನ್ನು ಈಗಲೂ ಸಂಪೂರ್ಣ ನಂಬಿಲ್ಲ. ಐದು ರಾಜ್ಯಗಳ ಚುನಾವಣೆಗಳು ಕಳೆದ ನಂತರ ಮೂರು ಕಾಯಿದೆಗಳ ಇರಾದೆಗಳು ಮತ್ತೊಂದು ರೂಪದಲ್ಲಿ ಪ್ರಕಟಗೊಳ್ಳಬಹುದು ಎಂಬ ಗುಮಾನಿ ಅವರದು.

ರೈತರೂ ಸೇರಿದಂತೆ ಮೂರು ಕೃಷಿ ಕಾಯಿದೆಗಳನ್ನು ವಿರೋಧಿಸುವ ಎಲ್ಲರಿಗೆ ಸುಧಾರಣಾ ವಿರೋಧಿಗಳು ಎಂಬ ಹಣೆಪಟ್ಟಿ ಹಚ್ಚಲಾಗಿದೆ. ತೋಳನ ಬಾಯಿಗೆ ಬೀಳಲು ಒಲ್ಲದ ಅಸಹಾಯಕ ಕುರಿಮಂದೆಗೆ ತೋಳವಿರೋಧಿಗಳು ಎಂಬ ಪಟ್ಟ ಕಟ್ಟಿದಷ್ಟೇ ವಿಡಂಬನೆಯ ಸಂಗತಿಯಿದು.

ದೇಶದ ಕೃಷಿವಲಯದಲ್ಲಿ ಸುಧಾರಣೆಗಳಿಗಾಗಿ ಹಸಿದು ಬಾಯಾರಿರುವುದು ಹೌದು. ಆದರೆ ಈಗಾಗಲೆ ಕಂಗೆಟ್ಟಿರುವ ರೈತನನ್ನು ವಧಾ ವೇದಿಕೆಯ ಹತ್ತಿಸುವ ಸುಧಾರಣೆಗಳನ್ನು ಆತನ ಮೇಲೆ ಹೇರುವ ಕ್ರೌರ್ಯ ಸಲ್ಲದು.

ಬಹುಮುಖ್ಯ ಹಿಂದೀ ಹೃದಯಸೀಮೆ ಎನಿಸಿದ ನಾಲ್ಕು ರಾಜ್ಯಗಳಾಗುವಷ್ಟು ಭೂಭಾಗವನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ಉತ್ತರಪ್ರದೇಶದ ಮೇಲೆ ರಾಜಕೀಯ ನಿಯಂತ್ರಣ ಕೈತಪ್ಪೀತು ಎಂಬ ಆತಂಕವೇ ಈ ತಾತ್ಪೂರ್ತಿಕ ಚತುರ ಪಲಾಯನದ ಹಿಂದಿನ ಮರ್ಮ. 2024ರ ಲೋಕಸಭಾ ಚುನಾವಣೆಯ ಫೈನಲ್ಸ್‌ಗೆ ಉತ್ತರಪ್ರದೇಶದ ಹಾಲಿ ವಿಧಾನಸಭಾ ಚುನಾವಣೆಯೇ ಸೆಮಿಫೈನಲ್ಸ್. ಲೋಕಸಭೆಯ ಎಂಭತ್ತು ಸ್ಥಾನಗಳಿಗೆ ಪ್ರತಿನಿಧಿಗಳನ್ನು ಕಳಿಸುವ ದೈತ್ಯ ರಾಜ್ಯವಿದು.

ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಹಾಗೂ ಮಣಿಪುರದ ವಿಧಾನಸಭಾ ಚುನಾವಣೆಗಳು ಸಮೀಪಿಸಿವೆ. ಇವುಗಳಲ್ಲಿನ ಒಟ್ಟು ಲೋಕಸಭಾ ಸೀಟುಗಳ ಸಂಖ್ಯೆ 104. ಗೋವಾ ಮಣಿಪುರವನ್ನು ಹೊರತುಪಡಿಸಿದರೆ ಈ ಸಂಖ್ಯೆ 98.

ಉತ್ತರಪ್ರದೇಶ ಉತ್ತರಾಖಂಡ ಪಂಜಾಬಿನ ಫಲಿತಾಂಶಗಳು 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯ ಹಣೆಬರೆಹಕ್ಕೆ ನಿರ್ಣಾಯಕ ಎನಿಸಲಿವೆ. 2024ರಲ್ಲಿ ಮೋದಿಯವರು ಪುನಃ ಪ್ರಧಾನಿ ಆಗಬೇಕಿದ್ದರೆ ಇದೀಗ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳನ್ನು ಯೋಗಿ ಆದಿತ್ಯನಾಥರು ಮತ್ತೊಮ್ಮೆ ಗೆಲ್ಲಲೇಬೇಕಿದೆ.

ರೈತ ಆಂದೋಲನ ಪಶ್ಚಿಮ ಮತ್ತು ಪೂರ್ವ ಉತ್ತರಪ್ರದೇಶದಲ್ಲಿ 2013ರ ಕೋಮು ಧ್ರುವೀಕರಣವನ್ನು ಕರಗಿಸಿರುವ ಸೂಚನೆಗಳಿವೆ. ದೆಹಲಿ ಗಡಿಗಳಲ್ಲಿ ಅದುಮಲಾಗುತ್ತಿರುವ ರೈತರ ಆಂದೋಲನ ಒಳನಾಡುಗಳಿಗೆ ಪಸರಿಸಿ ಪುಟಿದೇಳತೊಡಗಿದೆ. ಒಂದರ ನಂತರ ಮತ್ತೊಂದರಂತೆ ನಡೆಯತೊಡಗಿರುವ ಕಿಸಾನ್ ಮಹಾ ಪಂಚಾಯತ್‌ಗಳಿಗೆ ಭಾರೀ ಸಂಖ್ಯೆಯ ರೈತರು ಹರಿದು ಸೇರುತ್ತಿದ್ದಾರೆ. ಭಗತ್ ಸಿಂಗ್ ಕಿ ಪಗಡೀ ಸಂಬಾಲ್ ಜತ್ಥಾ ಹಾಡು ಮೊಳಗತೊಡಗಿದೆ… ವೇದಿಕೆಗಳ ಮೇಲೆ ಮತ್ತು ಸಭೆಗಳಲ್ಲಿ ಜಾಟ್-ಮುಸ್ಲಿಮ್ ಏಕತೆ ಮತ್ತೆ ಕಾಣತೊಡಗಿದೆ. ಮುಸಲ್ಮಾನ ರೈತರು ರೈತ ಸಮಾವೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಮೋದಿಯವರತ್ತ ತಿರುಗಿದ್ದ ಯುವಜನರಲ್ಲಿ ಭ್ರಮನಿರಸನ ಮತ್ತು ಸಿಟ್ಟು ಹುಟ್ಟಿದೆ. 2013ರಲ್ಲಿ ಆಗಿದ್ದು ತಪ್ಪೆಂಬ ಪಶ್ಚಾತ್ತಾಪ ಪ್ರಕಟವಾಗತೊಡಗಿದೆ.

ಈ ಬೆಳವಣಿಗೆಗಳು ಆಳುವ ಪಕ್ಷವನ್ನು ಚುನಾವಣೆಯ ಅನಿಶ್ಚಿತತೆಯ ಆತಂಕಕ್ಕೆ ನೂಕಿವೆ. ಹೀಗಾಗಿ ಸದ್ಯಕ್ಕೆ ಹಿಂದೆ ಸರಿಯುವುದು ಸರಿ ಎಂಬ ತೀರ್ಮಾನಕ್ಕೆ ಬಂದಿದೆ ಮೋ-ಶಾ ಜೋಡಿ.

ರೈತರ ವಿಶ್ವಾಸವನ್ನು ಪ್ರಧಾನಿಯವರು ಇಡಿಯಾಗಿ ಕಳೆದುಕೊಂಡಿದ್ದಾರೆ. ಅದನ್ನು ಪುನಃ ಗಳಿಸಿಕೊಳ್ಳಲು ಪ್ರಯತ್ನಿಸಲಿ. ತಮ್ಮ ಒಳಿತು ಕೆಡುಕುಗಳು ಯಾವುವು ಎಂಬುದನ್ನು ಸಂಸತ್ತಿನ ಸ್ಥಾಯೀ ಸಮಿತಿಗಳ ಮುಂದೆ ಹೇಳಿಕೊಳ್ಳುವ ಅವಕಾಶವನ್ನಾದರೂ ರೈತರಿಗೆ ಅವರು ಕಲ್ಪಿಸಲಿ. ಇಂತಹ ಬಹುಮುಖ್ಯ ಶಾಸನಗಳನ್ನು ಸಂಸತ್ತಿನ ಚರ್ಚೆಯ ಜನತಾಂತ್ರಿಕ ನಿಕಷಕ್ಕೆ ಇನ್ನಾದರೂ ಗುರಿಪಡಿಸಲಿ. 2022ರ ಆಗಸ್ಟ್ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ವಚನವನ್ನು ಅದರ ನಿಜಾರ್ಥದಲ್ಲಿ ಈಡೇರಿಸಲಿ.

ಮೂರು ಕೃಷಿ ಕಾಯಿದೆಗಳನ್ನು ಕೈಬಿಟ್ಟರೆ ಸಾಲದು, ಕನಿಷ್ಠ ಬೆಂಬಲ ಬೆಲೆಯ ವ್ಯವಸ್ಥೆಯನ್ನು ಎಲ್ಲ ಬೆಳೆಗಳಿಗೂ ವಿಸ್ತರಿಸಬೇಕು ಹಾಗೂ ಅದಕ್ಕೆ ಕಾನೂನಿನ ಬಲ ನೀಡಬೇಕು ಎಂಬುದು ರೈತರ ಆಗ್ರಹ. ಈ ಬೇಡಿಕೆಯನ್ನು ಸರ್ಕಾರ ಸುಲಭಕ್ಕೆ ಈಡೇರಿಸುವ ಸೂಚನೆಗಳಿಲ್ಲ. ಹೀಗಾಗಿ ಚಳವಳಿಯೂ ಸದ್ಯಕ್ಕೆ ನಿಲ್ಲದು. ಅತಿ ಹೆಚ್ಚಿನ ನಿರುದ್ಯೋಗ, ಕುಸಿಯುತ್ತಲೇ ಸಾಗಿರುವ ಜಿ.ಡಿ.ಪಿ ಮತ್ತು ಜನಜೀವನ ಮಟ್ಟದ ಹಿನ್ನೆಲೆಯಲ್ಲಿ ಕೃಷಿವಲಯದ ಸಂಕಟವನ್ನು ಇರಿಸಿ ನೋಡಿದರೆ ಪರಿಸ್ಥಿತಿಯ ಭೀಕರತೆ ಅರ್ಥವಾದೀತು.

ಭಾರತದ ಕೃಷಿ ಸಂಕಟವು ಹಾಲಿ ಮೂರು ಕಾಯಿದೆಗಳ ಜಾರಿ ಅಥವಾ ರದ್ದಿಗಿಂತ ಬಹು ಆಳದ್ದು ಮತ್ತು ಅಗಲದ್ದು. ರೈತನನ್ನು ಬೆತ್ತಲೆಗೊಳಿಸಿ ಕೌಪೀನವನ್ನು ಎಸೆದಾಕ್ಷಣ ಆತನ ಕಷ್ಟ ಕಣ್ಣೀರುಗಳು ಕೊನೆಯಾಗುವುದಿಲ್ಲ. ಸಮಸ್ಯೆ ಮೂಲವನ್ನು ಗುರುತಿಸುವ ಪ್ರಾಮಾಣಿಕತೆ ಪ್ರಕಟವಾಗಬೇಕಿದೆ.

ನೀರಾವರಿ ಸೌಲಭ್ಯ, ಸಕಾಲಕ್ಕೆ ಸುಲಭ ಸಾಲ ಸೌಲಭ್ಯ, ಸಕಾಲಕ್ಕೆ ಗುಣಮಟ್ಟದ ವಿದ್ಯುಚ್ಛಕ್ತಿ ಪೂರೈಕೆ, ಹೇರಳ ಉಗ್ರಾಣ- ಶೀತಾಗಾರಗಳ ಸೌಲಭ್ಯ, ಕಟಾವಿನ ನಂತರದ ಕೃಷಿ ವಿಸ್ತರಣಾ ಸೇವೆಗಳು ಉಚಿತವಾಗಿ ಇಲ್ಲವೇ ನ್ಯಾಯಯುತ ದರಗಳಲ್ಲಿ ಕೊಡಮಾಡಬೇಕಿದೆ. ಇಳೆಯ ಅಸ್ತಿತ್ವವನ್ನೇ ಅಲುಗಿಸುತ್ತಿರುವ ಹವಾಮಾನ ವೈಪರೀತ್ಯದ ಸವಾಲನ್ನು ಎದುರಿಸಲು ಸಮರ್ಥ ಬದಲಾವಣೆಗಳನ್ನು ಭಾರತೀಯ ಕೃಷಿ ಪದ್ಧತಿ ಅಳವಡಿಸಿಕೊಳ್ಳಲೇಬೇಕಿದೆ. ಕೃಷಿಯನ್ನು ಹೆಚ್ಚು ಪರಿಸರಸ್ನೇಹಿ ಆಗಿಸಬೇಕಿದೆ.

ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದರಷ್ಟೇ ಸಾಲದು. ದರಗಳು ಕುಸಿದಾಗ ಮಾರುಕಟ್ಟೆಯನ್ನು ಪ್ರವೇಶಿಸಿ ಕನಿಷ್ಠ ಬೆಂಬಲ ಬೆಲೆ ತೆತ್ತು ಕೃಷಿ ಉತ್ಪನ್ನಗಳ ಖರೀದಿಸಬೇಕು. ಪಂಜಾಬ್ ಮತ್ತು ತಕ್ಕಮಟ್ಟಿಗೆ ಹರಿಯಾಣ ವಿನಾ ಕನಿಷ್ಠ ಬೆಂಬಲ ಬೆಲೆ ನೀಡಿಕೆ ಇತರೆ ರಾಜ್ಯಗಳಲ್ಲಿ ಜಾರಿಯಾಗುತ್ತಿಲ್ಲ. ಖರೀದಿ ಕೇಂದ್ರಗಳನ್ನು ತಡವಾಗಿ ತೆರೆದು-ತ್ವರಿತವಾಗಿ ಮುಚ್ಚಿಬಿಡುವ, ಸಾಕಷ್ಟು ಖರೀದಿ ಕೇಂದ್ರಗಳನ್ನು ತೆರೆಯದೆ ಇರುವ ಮೋಸ ನಡೆಯುತ್ತಲೇ ಬಂದಿದೆ. ಸರ್ಕಾರಗಳೇ ನಡೆಸುವ ಈ ವಂಚನೆ ಇನ್ನಾದರೂ ನಿಲ್ಲಬೇಕು. ತುಂಬಿತುಳುಕುತ್ತಿರುವ ಸರ್ಕಾರಿ ಉಗ್ರಾಣಗಳಲ್ಲಿ ಕೊಳೆಯುವ ದವಸ ಧಾನ್ಯಗಳನ್ನು ನಡುವೆಯೇ ಸೋರಿಹೋಗದಂತೆ ಬಡಜನರಿಗೆ ಮುಟ್ಟಿಸಬೇಕು.

ಕೈಗಾರಿಕೆ ಉತ್ಪನ್ನಗಳು ಮತ್ತು ಇತರೆ ಗ್ರಾಹಕ ಸರಕುಗಳಿಗೆ ತೋರುವ ಒಂದು ಅಂಶದಷ್ಟು ನೀತಿ ನ್ಯಾಯ ನಿಯತ್ತನ್ನೂ ಕೃಷಿ ಉತ್ಪನ್ನಗಳಿಗೆ ತೋರದಷ್ಟು ಕ್ರೂರವಾಗಿ ಹೋಗಿದೆ ಮಾರುಕಟ್ಟೆ. ಕೃಷಿಯನ್ನು ಕಾಡುತ್ತಿರುವ ಹಲವು ವ್ಯಾಧಿಗಳ ಪೈಕಿ ಮಾರುಕಟ್ಟೆ ವ್ಯಾಧಿಯೇ ಹೆಚ್ಚು ಮಾರಕ.

ತಲೆಮಾರಿನಿಂದ ತಲೆಮಾರಿಗೆ ಕೃಷಿ ಹಿಡುವಳಿಗಳ ಗಾತ್ರಕ್ಕೆ ಕತ್ತರಿ ಬಿದ್ದು ಅವು ಛಿದ್ರವಾಗುತ್ತಿವೆ. ಒಂದೆಡೆ ಹಿಡುವಳಿಗಳು ಛಿದ್ರಗೊಳ್ಳುತ್ತಿದ್ದು, ಇನ್ನೊಂದೆಡೆ ಉಂಡು ಉಟ್ಟು ಜೀವಿಸಲು ಇಂತಹ ಹಿಡುವಳಿಗಳನ್ನು ಅವಲಂಬಿಸುತ್ತಿರುವವರ ಸಂಖ್ಯೆ ಗಾಬರಿಯಾಗುವ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಈ ಬೆಳವಣಿಗೆ ಕೃಷಿ ಸಂಕಟದ ಬೆಂಕಿಗೆ ಇನ್ನಷ್ಟು ಎಣ್ಣೆ ಸುರಿವುದೇ ವಿನಾ ತಣ್ಣೀರು ಎರೆಯುವುದಿಲ್ಲ. ಈ ಸಂದಣಿ ಕಿಕ್ಕಿರಿತಗಳಿಂದ ಬಿಡುಗಡೆಯಾಗುವ ವ್ಯವಸಾಯ ಹೆಚ್ಚು ಸಹನೀಯ ಎನಿಸಬಹುದು. ಹೀಗಾಗಿ ಕೈಗಾರಿಕೆ ಮತ್ತು ಸೇವಾಕ್ಷೇತ್ರಗಳು ಸತ್ವಯುತವಾಗಿ ಎದ್ದುನಿಂತರೆ ಕೃಷಿವಲಯದ ಹೆಚ್ಚುವರಿ ಮಾನವಸಂಪನ್ಮೂಲವನ್ನು ಈ ಕ್ಷೇತ್ರಗಳು ಹೀರಿಕೊಳ್ಳಬಲ್ಲವು ಎಂಬುದು ಆರ್ಥಿಕ ತಜ್ಞರು ನೀಡುವ ಪರಿಹಾರ.

ಒಕ್ಕಲು ಮಕ್ಕಳ ಬದುಕುಗಳು ವ್ಯಥೆಯ ಕತ್ತಲಲ್ಲಿ ಮುಳುಗಿವೆ. ಈ ಕಾನೂನುಗಳು ರದ್ದಾದ ನಂತರವೂ ಕೊನೆಗೊಳ್ಳದಷ್ಟು ಅಗಾಧ ಕೃಷಿ ಬಿಕ್ಕಟ್ಟು ಇದೆ. ಕಳೆದ ಎರಡು ದಶಕಗಳಲ್ಲಿ ದೇಶದ ಹೊಲಗದ್ದೆಗಳು ತೋಟ ತುಡಿಕೆಗಳ ಮಣ್ಣಿನಲ್ಲಿ ಲಕ್ಷಾಂತರ ರೈತರ ಆತ್ಮಹತ್ಯೆಯ ರಕ್ತ ಬೆರೆತಿದೆ. ಈ ಮಣ್ಣಿಗೆ ಮತ್ತಷ್ಟು ಇನ್ನಷ್ಟು ರೈತರ ರಕ್ತವನ್ನು ಬೆರೆಯಬಾರದು.

ಕಲ್ಲು ಕರಗುತ್ತದೆ. ಐವತ್ತಾರೂ ಅಂಗುಲದ ಎದೆಯೂ ಕರಗುತ್ತದೆ ಕನಿಷ್ಠ ಪಕ್ಷ ಚುನಾವಣೆಯ ಭೀತಿಯಿಂದಲಾದರೂ.


ಇದನ್ನೂ ಓದಿ: ರೈತ ಹೋರಾಟ: ಪ್ರತಿಭಟನಾ ಗಡಿಗಳತ್ತ ರೈತರು, ಹೋರಾಟಗಾರರು

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಮಹಿಳೆಯರಿಗೆ ಕಾಂಗ್ರೆಸ್‌ ಆದ್ಯತೆ; ಉಳಿದ ಪಕ್ಷಗಳ ಕಥೆಯೇನು..?

0
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಬಿಜೆಪಿ ನೇತೃತ್ವದ ಎನ್‌ಡಿಎ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಗಳ ನಡುವಿನ ಸ್ಪರ್ಧೆಯಾಗಿದೆ. ಮಾಯಾವತಿಯವರ ಬಿಎಸ್‌ಪಿ ಪಕ್ಷ ಈ ಬಾರಿ ಇದ್ದು ಇಲ್ಲದಂತಾಗಿದೆ. ಬಿಜೆಪಿಯ...
Wordpress Social Share Plugin powered by Ultimatelysocial