ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಮರ ಹಕ್ಕುಗಳನ್ನು ಕಿತ್ತುಕೊಳ್ಳುವ ‘ಕರಾಳ ಕಾನೂನು’ ಎಂದಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ), ತಿದ್ದುಪಡಿ ಮಸೂದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದೆ.
ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ಬುಧವಾರ (ಏ.2) ಲೋಕಸಭೆಯಲ್ಲಿ ಮಂಡಿಸಲಾಗಿದೆ. ಅದು ಲೋಕಸಭೆಯಲ್ಲಿ ಅಂಗೀಕಾರಗೊಂಡರೆ, ಗುರುವಾರ ರಾಜ್ಯಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ.
ಪತ್ರಿಕಾಗೋಷ್ಠಿ ನಡೆಸಿ ಮಸೂದೆಯನ್ನು ಟೀಕಿಸಿದ ಎಐಎಂಪಿಎಲ್‌ಬಿ ಸದಸ್ಯ ಎಂ.ಡಿ ಅದೀಬ್, “ಇದು ಮುಸ್ಲಿಂ ಸಮುದಾಯದ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನ” ಎಂದು ಆರೋಪಿಸಿದರು.
“ನಮ್ಮ ಆಸ್ತಿಗಳನ್ನು ಕಿತ್ತುಕೊಳ್ಳಬಹುದೆಂದು ಭಾವಿಸಿ ಅವರು ಈ ನಾಟಕ ಆರಂಭಿಸಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ? ನಾವು ಸೋತಿದ್ದೇವೆ ಎಂದು ಭಾವಿಸಬೇಡಿ. ಇದು ಮಸೂದೆಯ ವಿರುದ್ದದ ಹೋರಾಟದ ಆರಂಭವಷ್ಟೇ” ಎಂದು ಅದೀಬ್ ಹೇಳಿದ್ದಾರೆ.
“ಮಸೂದೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ನಾವು ತಿದ್ದುಪಡಿಯನ್ನು ವಿರೋಧಿಸಿದ್ದೆವು. ನಾವು ಯುದ್ಧದಲ್ಲಿ ಸೋತಿದ್ದೇವೆ ಎಂದು ಭಾವಿಸಬೇಡಿ, ಈಗಷ್ಟೇ ಆರಂಭಿಸಿದ್ದೇವೆ” ಎಂದು ಕಿಡಿಕಾರಿದ್ದಾರೆ.
“ಭಾರತ ಎಂಬುವುದರ ರಚನೆಗೇ ಈ ಮಸೂದೆ ಸವಾಲು ಒಡ್ಡುವುದರಿಂದ, ನಮ್ಮ ಹೋರಾಟ ದೇಶ ಉಳಿಸಲು. ಆತ್ಮಸಾಕ್ಷಿ ಇರುವ ಎಲ್ಲಾ ನಾಗರಿಕರು ಮಸೂದೆಯನ್ನು ವಿರೋಧಿಸಬೇಕು. ನಾವು ಕಾನೂನಾತ್ಮಕವಾಗಿ ಮತ್ತು ಹೊರತಾಗಿಯೂ ಮಸೂದೆಯ ವಿರುದ್ದ ಹೋರಾಡಲಿದ್ದೇವೆ. ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ. ಸರ್ಕಾರ ಕಾನೂನು ಹಿಂತೆಗೆದುಕೊಳ್ಳುವವರೆಗೆ ವಿರಮಿಸುವುದಿಲ್ಲ ಎಂದು ಅದೀಬ್ ತಿಳಿಸಿದ್ದಾರೆ.
“ದೇಶವನ್ನು ಉಳಿಸಲು ನಾವು ಈ ಹೋರಾಟವನ್ನು ಪ್ರಾರಂಭಿಸಿದ್ದೇವೆ. ಈ ಕರಾಳ ಕಾನೂನನ್ನು ಕೊನೆಗಾಣಿಸುವುದು ನಮ್ಮ ಗುರಿ ಎಂದು ಎಐಎಂಪಿಎಲ್‌ಬಿ ವಕ್ತಾರ ಮೊಹಮ್ಮದ್ ಅಲಿ ಮೊಹ್ಸಿನ್ ಹೇಳಿದ್ದಾರೆ.
“ರೈತರ ಹೋರಾಟದಂತೆ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ದ ದೇಶದಾದ್ಯಂತ ಹೋರಾಟ ರೂಪಿಸುತ್ತೇವೆ. ರಸ್ತೆ ತಡೆ ಪ್ರತಿಭಟನೆ ಸೇರಿದಂತೆ ಎಲ್ಲಾ ಶಾಂತಿಯುತ ಹೋರಾಟದ ಮಾರ್ಗಗಳನ್ನು ನಾವು ಬಳಸುತ್ತೇವೆ” ಎಂದು ಎಐಎಂಪಿಎಲ್‌ಬಿ ತಿಳಿಸಿದೆ.


