ಅಹಮದಾಬಾದ್: ಕಳೆದ ವಾರ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಗುಜರಾತಿನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಯ ಮೃತದೇಹವನ್ನು ಅಸ್ಪತ್ರೆಯ ಅಧಿಕಾರಿಗಳು ಸೋಮವಾರದಂದು ಅವರ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.
ಇಂದು (ಸೋಮವಾರ) ಸಂಜೆ ರೂಪಾನಿಯ ತವರು ನಗರ ರಾಜಕೋಟ್ ನಲ್ಲಿ ಅಂತಿಮ ಮೆರವಣಿಗೆಯನ್ನು ನಡೆಸಿ, ನಂತರ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರವನ್ನು ನಡೆಸಲಾಗುತ್ತದೆ ಎಂದು ಪಿಟಿಐ ವರದಿ ಮಾಡಿದೆ.
68ರ ಹರೆಯದ ರೂಪಾನಿಯವರು 2016ರ ಆಗಸ್ಟ್ ನಿಂದ 2021ರ ಸೆಪ್ಟಂಬರ್ ಅವರಿಗೆ ಗುಜರಾತಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೇ ಜೂನ್ 12ರಂದು ಅಹಮದಾಬಾದ್ ನಲ್ಲಿ ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ 12 ಮಂದಿ ಸಿಬ್ಬಂದಿ ಸೇರಿದಂತೆ 242 ಮಂದಿ ಪ್ರಯಾಣಿಸುತ್ತಿದ್ದರು. ಈ ಪ್ರಯಾಣಿಕರಲ್ಲಿ ರೂಪಾನಿ ಕೂಡ ಒಬ್ಬರಾಗಿದ್ದರು.
ದುರಂತದಲ್ಲಿ 241 ಮಂದಿ ಸಾವನ್ನಪ್ಪಿದ್ದು, ಅಶ್ಚರ್ಯವೆಂಬಂತೆ ಒಬ್ಬ ಪ್ರಯಾಣಿಕ ಬದುಕುಳಿದಿದ್ದಾನೆ. ದುರಂತ ನಡೆದ ಸ್ಥಳದಲ್ಲಿ ಇತರೇ ಸುಮಾರು 29 ಜನರು ಮೃತಪಟ್ಟಿದ್ದು, ಇವರಲ್ಲಿ ಐದು ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಎಂದು ವರದಿಯಾಗಿದೆ.
ರೂಪಾನಿಯ ದೇಹವು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದ್ದರಿಂದ ಅವರ ಸಂಬಂಧಿಕರ ಡಿಎನ್ಎ ಮಾದರಿಗಳೊಂದಿಗೆ ಹೋಲಿಸಿ, ಅವರ ಮೃತದೇಹವನ್ನು ಗುರುತಿಸಲಾಗಿದೆ.
ರೂಪಾನಿಯವರ ಮೃತದೇಹವನ್ನು ಹಸ್ತಾಂತರ ಮಾಡುವಾಗ ಅವರ ಪತ್ನಿ ಅಂಜಲಿ ರೂಪಾನಿ ಮತ್ತು ಇತರ ಕುಟುಂಬ ಸದಸ್ಯರು ಸೋಮವಾರದಂದು ಸಿಟಿ ಸಿವಿಲ್ ಆಸ್ಪತ್ರೆಯಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರ ಸಚಿವರು ಕೂಡ ಹಾಜರಿದ್ದರು.
ರೂಪಾನಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ ನಂತರ ರಾಜ್‌ಕೋಟ್‌ಗೆ ತರಲು ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ರಾಜ್ ಕೋಟ್ ಬಳಿಯ ಹಿರಾಸರ್ ನಲ್ಲಿರುವ ವಿಮಾನ ನಿಲ್ದಾಣದಿಂದ ಅವರ ಮನೆಗೆ ಕರೆದೊಯ್ದು, ಅಲ್ಲಿ ಒಂದು ಗಂಟೆ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ.
ಇಂದು ಸಂಜೆ (ಸೋಮವಾರ) ಅಂತ್ಯಕ್ರಿಯೆಯ ಮೆರವಣಿಗೆ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇಂಧನ ಸಚಿವ ಸಿ.ಆರ್. ಪಾಟೀಲ್ ಅವರು ರೂಪಾನಿ ಅವರ ಮನೆಗೆ ಭೇಟಿ ನೀಡಿ ಅವರಿಗೆ ಅಂತಿಮ ಗೌರವ ಸಲ್ಲಿಸುವ ನಿರೀಕ್ಷೆಯಿದೆ.
ಪೌರತ್ವ ದಾಖಲೆ ಒದಗಿಸಿದರೂ ಬಂಗಾಳದ ವ್ಯಕ್ತಿಯನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ ಅಧಿಕಾರಿಗಳು: ವರದಿ


