ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ.
ಸುನೇತ್ರಾ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಆಯ್ಕೆ ಮಾಡಲು ಎನ್‌ಸಿಪಿ ಶಾಸಕರು ಶನಿವಾರ (ಜ.31) ಮಧ್ಯಾಹ್ನ ಮುಂಬೈನಲ್ಲಿ ಸಭೆ ಸೇರಲಿದ್ದಾರೆ. ಬಳಿಕ ಸಂಜೆ 5 ಗಂಟೆ ಮಹಾರಾಷ್ಟ್ರ ಲೋಕಭವನದಲ್ಲಿ ಸುನೇತ್ರಾ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ವರದಿ ಹೇಳಿದೆ.
ಶುಕ್ರವಾರ (ಜ.30) ಎನ್‌ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್, ರಾಜ್ಯಾಧ್ಯಕ್ಷ ಸುನಿಲ್ ತತ್ಕರೆ, ಸಚಿವ ಛಗನ್ ಭುಜ್‌ಬಲ್ ಮತ್ತು ಮಾಜಿ ಸಚಿವ ಧನಂಜಯ್ ಮುಂಡೆ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿ ಸುನೇತ್ರಾ ಪವಾರ್ ಅವರನ್ನು ತಮ್ಮ ನಾಯಕಿಯಾಗಿ ಆಯ್ಕೆ ಮಾಡಲಾಗುವುದು ಮತ್ತು ಹಣಕಾಸು, ಅಬಕಾರಿ ಹಾಗೂ ಕ್ರೀಡೆ ಸೇರಿದಂತೆ ಅಜಿತ್ ಪವಾರ್ ಹೊಂದಿದ್ದ ಎಲ್ಲಾ ಪ್ರಮುಖ ಖಾತೆಗಳನ್ನು ಉಳಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸುನೇತ್ರಾ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಿದ ನಂತರ, ಅವರು ಡಿಸಿಎಂ ಹುದ್ದೆಗೆ ಹಕ್ಕು ಮಂಡಿಸುವ ನಿರೀಕ್ಷೆಯಿದ್ದು, ಬಳಿಕ ಸಂಜೆ ಲೋಕಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಮೈತ್ರಿಕೂಟ ಸುಗಮ ಪರಿವರ್ತನೆಗೆ ಬೆಂಬಲ ನೀಡುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕರು ಹೇಳಿದ್ದಾರೆ. ಶುಕ್ರವಾರ ಪಕ್ಷದ ನಾಯಕರು ಎನ್‌ಸಿಪಿ ಶಾಸಕರಿಗೆ ಫೋನ್ ಮಾಡಿ ಅಜಿತ್ ಪವಾರ್ ಅವರ ಉತ್ತರಾಧಿಕಾರಿಯ ಬಗ್ಗೆ ಅವರ ಅಭಿಪ್ರಾಯಗಳನ್ನು ಕೋರಿದ್ದಾರೆ ಎಂದು ಮೂಲವೊಂದು ತಿಳಿಸಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಶುಕ್ರವಾರ ಸಿಎಂ ಜೊತೆಗಿನ ಸಭೆಯ ಬಳಿಕ ಪ್ರತಿಕ್ರಿಯಿಸಿದ ಎನ್‌ಸಿಪಿ ರಾಜ್ಯಾಧ್ಯಕ್ಷ ಸುನಿಲ್ ತತ್ಕರೆ, “ಪಕ್ಷವು ತೀವ್ರ ದುಃಖದಲ್ಲಿದೆ. ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಪವಾರ್ ಕುಟುಂಬದೊಂದಿಗೆ ಸಮಾಲೋಚನೆ ನಡೆಸಲಾಗುವುದು. ಪಕ್ಷದ ನಾಯಕರು ಶಾಸಕರ ಅಭಿಪ್ರಾಯಗಳನ್ನು ಪಡೆಯಲು ಅವರನ್ನು ಸಂಪರ್ಕಿಸಲಾಗಿದೆ ಎಂದಿದ್ದಾರೆ ಎಂದಿದ್ದಾರೆ.
ಸುನೇತ್ರಾ ಪವಾರ್ ಮತ್ತು ಅವರ ಪುತ್ರರಾದ ಪಾರ್ಥ್ ಮತ್ತು ಜೇ ಪವಾರ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಬಹುದು ಎಂದು ಮೂಲಗಳು ಸೂಚಿಸಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
ಶನಿವಾರ ಮಧ್ಯಾಹ್ನ 2 ಗಂಟೆಗೆ ಸಭೆ ನಡೆಸಲು ವಿಧಾನ ಭವನದಲ್ಲಿ 50 ಜನರಿಗೆ ಆಸನ ವ್ಯವಸ್ಥೆ ಇರುವ ಹಾಲ್ ಸಂಖ್ಯೆ 26 ಅನ್ನು ಕಾಯ್ದಿರಿಸುವಂತೆ ಎನ್‌ಸಿಪಿ ಎಂಎಲ್‌ಸಿ ಸಂಜಯ್ ಖೋಡಕೆ ವಿಧಾನಸಭೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಈ ನಡುವೆ, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಮತ್ತು ಅಜಿತ್ ಪವಾರ್ ಬಣದ ನಡುವಿನ ಸಂಭಾವ್ಯ ವಿಲೀನದ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ. ಶರದ್ ಪವಾರ್ ಪಾಳಯದ ನಾಯಕರು ಒಗ್ಗಟ್ಟು ಅಜಿತ್ ಪವಾರ್‌ಗೆ ನಿಜವಾದ ಗೌರವ ಎಂದು ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ ವಿಲೀನ ಮಾತುಕತೆಗಳನ್ನು ನಿರೀಕ್ಷಿಸಲಾಗಿತ್ತು. ಅಜಿತ್ ಪವಾರ್ ಈ ಚರ್ಚೆಗಳನ್ನು ವೈಯಕ್ತಿಕವಾಗಿ ಮುನ್ನಡೆಸಿದ್ದರು ಎಂದು ಎನ್‌ಸಿಪಿ ಶರದ್ ಪವಾರ್ ಬಣದ ರಾಜ್ಯಾಧ್ಯಕ್ಷ ಶಶಿಕಾಂತ್ ಶಿಂಧೆ ತಿಳಿಸಿದ್ದಾರೆ.
ಮಾಹಿತಿಯಿಲ್ಲ ಎಂದ ಶರದ್ ಪವಾರ್
ಸುನೇತ್ರಾ ಪವಾರ್ ಅವರು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಕುರಿತು ನನಗೆ ಮಾಹಿತಿಯಿಲ್ಲ ಎಂದು ಎನ್‌ಸಿಪಿ (ಎಸ್ಪಿ) ನಾಯಕ ಹಾಗೂ ಅಜಿತ್ ಪವಾರ್ ಅವರ ಚಿಕ್ಕಪ್ಪ ಶರದ್ ಪವಾರ್ ಹೇಳಿದ್ದಾರೆ.
ಬಾರಾಮತಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸುನೇತ್ರಾ ಅವರು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಮಾಧ್ಯಮಗಳಿಂದ ನಾನು ವಿಷಯ ತಿಳಿದುಕೊಂಡೆ” ಎಂದಿದ್ದಾರೆ.


