ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರು ಮೊಹಮ್ಮದ್ ಅಜ್ಮಲ್ ಕಸಬ್‌ನಿಂದ ವಶಪಡಿಸಿಕೊಂಡ ಮೊಬೈಲ್ ಫೋನ್ ಅನ್ನು ನಾಶಪಡಿಸಿದ್ದಾರೆ ಎಂದು ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಸಂಶೇರ್ ಖಾನ್ ಪಠಾಣ್ ಆರೋಪಿಸಿದ್ದಾರೆ. ಅಜ್ಮಲ್ ಕಸಬ್‌ನನ್ನು 26/11 ಮುಂಬೈ ದಾಳಿಯ ದೋಷಿ ಎಂದು ಸುಪ್ರೀಂ ಕೋರ್ಟ್ ಘೋಷಿಸಿತ್ತು ಮತ್ತು ನವೆಂಬರ್ 2012 ರಲ್ಲಿ ಆತನನ್ನು ಗಲ್ಲಿಗೇರಿಸಲಾಯಿತು.
ಸಂಶೇರ್ ಖಾನ್ ಪಠಾಣ್ ಅವರು ಜುಲೈನಲ್ಲಿ ಮುಂಬೈ ಪೊಲೀಸ್ ಆಯುಕ್ತರಿಗೆ ಲಿಖಿತ ದೂರನ್ನು ಸಲ್ಲಿಸಿದ್ದರು. ಈ ದೂರಿನಲ್ಲಿ ಪರಮ್ ಬೀರ್ ಸಿಂಗ್ ವಿರುದ್ಧ ತನಿಖೆ ಮತ್ತು ನಂತರದ ಕ್ರಮಕ್ಕಾಗಿ ಒತ್ತಾಯಿಸಿದ್ದರು. ಈ ದೂರಿನ ಪ್ರತಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪ್ರಸಾರವಾಯಿತು.
ಪರಮ್ ಬೀರ್ ಸಿಂಗ್ ಅವರನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಮುಂಬೈ ಪೊಲೀಸ್ ಮುಖ್ಯಸ್ಥ ಹುದ್ದೆಯಿಂದ ತೆಗೆದುಹಾಕಲಾಯಿತು.
ಇದನ್ನೂ ಓದಿ: 26/11 ಮುಂಬೈ ಭಯೋತ್ಪಾದಕ ದಾಳಿಗೆ 13 ವರ್ಷ: ಹುತಾತ್ಮರನ್ನು ಸ್ಮರಿಸಿದ ಗಣ್ಯರು
ಸಂಶೇರ್ ಖಾನ್ ಪಠಾಣ್ ತಮ್ಮ ದೂರಿನಲ್ಲಿ, “ಅಜ್ಮಲ್ ಕಸಬ್‌ನಿಂದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದೇವೆ ಎಂದು ಡಿಬಿ ಮಾರ್ಗ್ ಪೊಲೀಸ್ ಠಾಣೆಯ ಆಗಿನ ಹಿರಿಯ ಇನ್ಸ್‌ಪೆಕ್ಟರ್ ಎನ್‌ಆರ್ ಮಾಲಿ ಅವರು ತಿಳಿಸಿದ್ದರು” ಎಂದು ವಿವರಿಸಿದ್ದಾರೆ.
“ಅಲ್ಲಿಂದ ಈ ಮೊಬೈಲ್ ಅನ್ನು ಕಾಂಬ್ಳೆ ಎಂದು ಗುರುತಿಸಲಾದ ಕಾನ್‌ಸ್ಟೆಬಲ್‌ಗೆ ಹಸ್ತಾಂತರಿಸಲಾಯಿತು. ಆಗಿನ ಡಿಐಜಿ (ಭಯೋತ್ಪಾದನಾ ನಿಗ್ರಹ ದಳ) ಆಗಿದ್ದ ಪರಮ್ ಬೀರ್ ಸಿಂಗ್ ಕಾನ್‌ಸ್ಟೆಬಲ್‌ನಿಂದ ಮೊಬೈಲ್ ಫೋನ್ ತೆಗೆದುಕೊಂಡರು. ಪ್ರಕರಣದ ತನಿಖಾಧಿಕಾರಿ ರಮೇಶ್ ಮಹಾಲೆ ಅವರಿಗೆ ಫೋನ್ ಹಸ್ತಾಂತರಿಸಬೇಕಿತ್ತು. ಆದರೂ ಪರಮ್ ಬೀರ್‌ಸಿಂಗ್ ಅದನ್ನು ನಾಶಪಡಿಸಿದ್ದಾರೆ” ಎಂದು ಸಂಶೇರ್ ಖಾನ್ ಪಠಾಣ್ ಆರೋಪಿಸಿದ್ದಾರೆ.
ದೇಶದ ಆರ್ಥಿಕ ರಾಜಧಾನಿ ಮುಂಬೈ ಮೇಲೆ ನವೆಂಬರ್ 26, 2008 ರಂದು ಭಯೋತ್ಪಾದಕ ದಾಳಿ ನಡೆದಿತ್ತು. ಈ ದಾಳಿ ನಡೆದು ಶುಕ್ರವಾರಕ್ಕೆ(ನಿನ್ನೆ) 13 ವರ್ಷ ಆಗಿದೆ. ಲಷ್ಕರ್–ಎ–ತೊಯ್ಬಾದ ಸಂಘಟನೆ ಭಯೋತ್ಪಾದಕರು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಮುಂಬೈ ಪ್ರವೇಶಿಸಿ, ನಡೆಸಿದ ಸರಣಿ ದಾಳಿಗಳಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರು ಈ ಘಟನೆಯಲ್ಲಿ ಮೃತಪಟ್ಟಿದ್ದರು. ಮುಂಬೈಯ ಜನನಿಬಿಡ ಪ್ರದೇಶಗಳಲ್ಲಿ ಗುಂಡಿನ ಮಳೆ ಸುರಿಸಿದ್ದರು. ನಂತರ ಮುಂಬೈನ ತಾಜ್ ಹೋಟೆಲ್ ಪ್ರವೇಶಿಸಿ ದಾಳಿ ಪ್ರಾರಂಭಿಸಿದ್ದರು. ಭದ್ರತಾ ಪಡೆಗಳು 10 ಉಗ್ರರ ಪೈಕಿ ಒಂಬತ್ತು ಮಂದಿಯನ್ನು ಹೊಡೆದುರುಳಿಸಿತ್ತು. ಬದುಕುಳಿದ್ದ ಏಕೈಕ ಉಗ್ರ ಅಜ್ಮಲ್ ಕಸಬ್ ಅನ್ನು ನವೆಂಬರ್ 21, 2012 ರಂದು ಗಲ್ಲಿಗೇರಿಸಲಾಯಿತು.
ಇದನ್ನೂ ಓದಿ: ಮತ್ತೆ ರೈತ ಮಹಾಪಂಚಾಯತ್‌ಗಳ ಆರಂಭ: ಮುಂಬೈ, ಲಕ್ನೋಗಳಲ್ಲಿ ಅಬ್ಬರಿಸಲಿರುವ ರೈತರು


