ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ಲಕ್ಷ್ಮೀ ಬಾಂಬ್ ಟ್ರೈಲರ್ ಮತ್ತು ಬುರ್ಜ್ ಖಲೀಫಾ ಹಾಡುಗಳು ಸಾಕಷ್ಟು ಹವಾ ಕ್ರಿಯೇಟ್ ಮಾಡಿವೆ. ಇದು ಚಿತ್ರತಂಡಕ್ಕೆ ಖುಷಿಯ ವಿಚಾವಾದರೆ, ಇತ್ತ ಕೆಲ ಸಂಘಟನೆಗಳು ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿವೆ.
ಲಕ್ಷ್ಮೀ ಬಾಂಬ್‌ನ ಟ್ರೈಲರ್ ತಮಾಷೆಯ ಮತ್ತು ಭಯಾನಕ ದೃಶ್ಯಗಳಿಂದ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಯಿತು. ಲೈಂಗಿಕ ಅಲ್ಪಸಂಖ್ಯಾತರಾಗಿ ನಟ ಅಕ್ಷಯ್ ಕುಮಾರ್ ಪಾತ್ರವು ಈಗಾಗಲೇ ಸಾಕಷ್ಟು ಸಂಚಲನವನ್ನು ಸೃಷ್ಟಿಸುತ್ತಿದೆ.
ಆದರೆ ಇಂದು(ಅ.29) ರಾಘವ ಲಾರೆನ್ಸ್ ನಿರ್ದೇಶಿಸಿದ ಚಿತ್ರವು ತನ್ನ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಹೋಗಿ ಸ್ಕ್ರೀನಿಂಗ್ ಅನ್ನು ಪೋಸ್ಟ್ ಮಾಡಿದೆ. ಜೊತೆಗೆ ಚಿತ್ರ ತಯಾರಕರು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಯೊಂದಿಗೆ ಚರ್ಚಿಸಿ, ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಲು ನಿರ್ಧರಿಸಿದ್ದಾರೆ.
ಚಿತ್ರದ ಶೀರ್ಷಿಕೆಗೆ ವಿರೋಧಗಳು ಬಂದ ಹಿನ್ನೆಲೆ, ಚಿತ್ರ ವೀಕ್ಷಕರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಚಿತ್ರದ ನಿರ್ಮಾಪಕರಾದ ಶಬಿನಾ ಖಾನ್, ತುಷಾರ್ ಕಪೂರ್ ಮತ್ತು ಅಕ್ಷಯ್ ಕುಮಾರ್ ಈಗ ತಮ್ಮ ಚಿತ್ರದ ಹೆಸರನ್ನು ಲಕ್ಷ್ಮೀ ಬಾಂಬ್ ಬದಲು ಲಕ್ಷ್ಮೀ ಎಂದು ಬದಲಾಯಿಸಲಿದ್ದಾರೆ.
ಇದನ್ನೂ ಓದಿ: ದ್ವೇಷಕಾರುವ ಚಾನೆಲ್‌ಗಳಿಗೆ ಜಾಹೀರಾತು ನಿಷೇಧ; ಬಜಾಜ್ & ಪಾರ್ಲೆಯನ್ನು ಶ್ಲಾಘಿಸಿದ ಬಾಲಿವುಡ್
ನವೆಂಬರ್ 9 ರಂದು ತೆರೆಗೆ ಬರಲಿರುವ ಚಿತ್ರಕ್ಕೆ ಅಖಿಲ ಭಾರತ ಹಿಂದೂ ಮಹಾಸಭಾ ವಿರೋಧ ವ್ಯಕ್ತಪಡಿಸಿತ್ತು. ಈ ಚಿತ್ರ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುತ್ತದೆ ಎಂದು ರಾಜ್ಯ ಕಾರ್ಯಕಾರಿ ಅಧ್ಯಕ್ಷ ರಾಜೇಶ್ ಪವಿತ್ರನ್ ಹೇಳಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೂಗಳ ಭಾವನೆಗಳನ್ನು ಈ ಚಿತ್ರ ಅವಮಾನಿಸಿದೆ. ಈ ಚಿತ್ರದಲ್ಲಿ ನಾಯಕನ ಹೆಸರು ಆಸಿಫ್, ನಾಯಕಿಯ ಹೆಸರು ಪ್ರಿಯಾ ಯಾದವ್ ಆಗಿದೆ. ಚಿತ್ರ “ಲವ್ ಜಿಹಾದ್” ಅನ್ನು ಪ್ರಚಾರ ಪಡಿಸುತ್ತದೆ ಹಾಗಾಗಿ ಚಲನಚಿತ್ರವನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಕರೆ ನೀಡಿದ್ದರು.
“ಚಲನಚಿತ್ರ ನಿರ್ಮಾಪಕರು ಕೋಮು ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮೀ ಬಾಂಬ್ ಎಂಬ ಚಲನಚಿತ್ರವನ್ನು ನಿರ್ಮಿಸುವವರು ಎಂದಾದರೂ ತಸ್ಲೀಮಾ ಬಾಂಬ್ ಎಂಬ ಚಿತ್ರ ಮಾಡಲು ಧೈರ್ಯ ಮಾಡುತ್ತಾರೆಯೇ?” ಎಂದು ಪ್ರಶ್ನಿಸಿದ್ದರು.
ಇನ್ನು ಈ ಚಿತ್ರವನ್ನು ಬಹಿಷ್ಕರಿಸುವಂತೆ ಅನೇಕ ಜನರು ಒತ್ತಾಯಿಸಿದ್ದಾರೆ. ಚಿತ್ರದ ಹೆಸರು ಹಿಂದು ದೇವತೆಗೆ ಅವಮಾನ ಮಾಡುತ್ತದೆ. ಇದರಿಂದ ಹಿಂದೂಗಳ ಭಾವನೆಗೆ ಪೆಟ್ಟು ಬೀಳುತ್ತದೆ ಎಂದು ಹೇಳಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲೂ #bycottlaxmibomb ಟ್ರೆಂಡಿಂಗ್ ಆಗಿದೆ.
ಇದನ್ನೂ ಓದಿ: PUBG ನಿಷೇಧದ ಬೆನ್ನಿಗೆ FAU-G ಅನಾವರಣಗೊಳಿಸಿದ ನಟ ಅಕ್ಷಯ್ ಕುಮಾರ್
#ShameOnUAkshayKumar
Why this Love jihad.
You can't disrespect our beloved Hindu religion. #BycottBollywood #bycottlaxmibomb@ravichauhan9580 pic.twitter.com/bMhHejKPoV— Raj Singh (@Me_RajSingh) October 26, 2020
ಹೀಗಾಗಿ ಚಿತ್ರದ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿ ರಜಪೂತ್ ಕರ್ಣಿ ಸೇನಾ ಪರವಾಗಿ ವಕೀಲ ರಾಘವೇಂದ್ರ ಮೆಹ್ರೋತ್ರಾ ಚಿತ್ರದ ನಿರ್ಮಾಪಕರಿಗೆ ನಿನ್ನೆ(ಅ.28) ಲೀಗಲ್ ನೋಟಿಸ್ ಕಳುಹಿಸಿದ್ದರು. ಲಕ್ಷ್ಮೀ ಬಾಂಬ್ ಚಿತ್ರದ ಹೆಸರು ಹಿಂದೂ ದೇವತೆ ಲಕ್ಷ್ಮಿಗೆ ಸಾಕಷ್ಟು ಅವಹೇಳನಕಾರಿ ಎಂದು ಲೀಗಲ್ ನೋಟಿಸ್‌ನಲ್ಲಿ ಹೇಳಲಾಗಿದೆ. ಲಕ್ಷ್ಮಿ ದೇವಿಯನ್ನು ಅವಮಾನಿಸಲು ತಯಾರಕರು ಉದ್ದೇಶಪೂರ್ವಕವಾಗಿ ಚಿತ್ರದ ಶೀರ್ಷಿಕೆಯನ್ನು ಇಟ್ಟುಕೊಂಡಿದ್ದಾರೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು.
ಅಕ್ಷಯ್ ಕುಮಾರ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಥ್ರಿಲ್ಲರ್ ಮತ್ತು ಹಾಸ್ಯ ತುಂಬಿರುವ ಚಿತ್ರ ಈಗ ಲಕ್ಷ್ಮಿ ಎಂದು ಹೆಸರು ಬದಲಾಗಿದೆ. ಈ ಚಿತ್ರವು ಲಾರೆನ್ಸ್ ನಿರ್ದೇಶನದ 2011 ರ ತಮಿಳು ಚಿತ್ರ ಕಾಂಚನ ರೀಮೇಕ್ ಆಗಿದೆ. ಇದು ಕನ್ನಡದಲ್ಲಿ ಕಲ್ಪನ ಹೆಸರಿನಲ್ಲಿಯಲ್ಲಿಯೂ ಸಹ ರೀಮೇಕ್ ಆಗಿತ್ತು. ‘ಲಕ್ಷ್ಮಿ’ ಲಾರೆನ್ಸ್ ಅವರ ನಿರ್ದೇಶನದ ಚೊಚ್ಚಲ ಹಿಂದಿ ಚಿತ್ರವಾಗಿದೆ.
ಚಿತ್ರದಲ್ಲಿ ಬರುವ ಕೆಲ ಪಾತ್ರಗಳ ಹೆಸರುಗಳನ್ನು ಇಟ್ಟುಕೊಂಡು ಚಿತ್ರ ಬಹಿಷ್ಕರಣೆಗೆ ಕರೆ ನೀಡುವುದು, ಚಿತ್ರದ ಹೆಸರು ಬದಲಾವಣೆಗೆ ಒತ್ತಾಯಿಸುವುದು ಇತ್ತಿಚೆಗೆ ಹೆಚ್ಚಾಗುತ್ತಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿಂದೆ 2016 ರಲ್ಲಿ ತೆಲುಗಿನಲ್ಲಿ ಲಕ್ಷ್ಮಿ ಬಾಂಬ್ ಎಂಬ ಹೆಸರಿನ ಚಿತ್ರ ಬಿಡುಗಡೆಯಾಗಿತ್ತು.


