ಬೀದರ್ ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಹುಮನಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಪಾಟೀಲ್ ಹಾಗೂ ಕಾಂಗ್ರೆಸ್ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ನಡುವೆ ತೀವ್ರ ವಾಗ್ವಾದ ನಡೆಯಿತು. ಇದರಿಂದ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಹುಮನಾಬಾದ್ ಮತ ಕ್ಷೇತ್ರದ ಅರಣ್ಯ ಭೂಮಿಯ ಕುರಿತು ಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು. ಚರ್ಚೆಯಲ್ಲಿ ಭಾಗವಹಿಸಿ ಡಾ. ಸಿದ್ದಲಿಂಗಪ್ಪ ಪಾಟೀಲ ಹಾಗೂ ಭೀಮರಾವ್ ಪಾಟೀಲ್ ಮಾತನಾಡುತ್ತಿದ್ದರು. ಈ ವೇಳೆ ಇಬ್ಬರು ಪರಸ್ಪರ ಆರೋಪ-ಪ್ರತ್ಯಾತೋಪ, ಟೀಕೆ-ಟಿಪ್ಪಣಿಯಲ್ಲಿ ತೊಡಗಿದರು.
ಸಿದ್ದಲಿಂಗಪ್ಪ ಪಾಟೀಲ್ ಅವರು ಮಾತನಾಡುವಾಗ ಅದನ್ನು ಬಲವಾಗಿ ವಿರೋಧಿಸುತ್ತ ತಮ್ಮ ಆಸನದಿಂದ ಎದ್ದ ಭೀಮರಾವ್ ಪಾಟೀಲ್ ಅವರು ಸಿದ್ದಲಿಂಗಪ್ಪ ಪಾಟೀಲ್ ಕಡೆಗೆ ತೆರಳಿದರು. ಈ ವೇಳೆ ಇಬ್ಬರೂ ಕೈ ಕೈ ಮಿಲಾಯಿಸಿ ಜೋರು ಧ್ವನಿಯಲ್ಲಿ ನಿಂದಿಸಿಕೊಂಡರು.
ಭೀಮರಾವ್ ಪಾಟೀಲ್ ಅವರ ಹಿಂದೆ ಎಂ.ಎಲ್.ಸಿ.ಯೂ ಆದ ಅವರ ಸಹೋದರ ಡಾ. ಚಂದ್ರಶೇಖರ್ ಪಾಟೀಲ್ ತೆರಳಿ ಬೆಂಬಲಕ್ಕೆ ನಿಂತರು. ಪರಿಸ್ಥಿತಿ ಕೈಮೀರುತ್ತಿದ್ದಾಗ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಮಧ್ಯಪ್ರವೇಶಿಸಿ ಜಗಳ ಬಿಡಿಸಿದರು.
ಆನಂತರ ಅಲ್ಲೇ ಇದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ವೇದಿಕೆಯಿಂದ ಕೆಳಗಿಳಿದು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.
ಆನಂತರ ಅನಿರ್ದಿಷ್ಟ ಅವಧಿಗೆ ಸಭೆ ಮುಂದೂಡಲಾಗಿದೆ ಎಂದು ಘೋಷಿಸಲಾಯಿತು. ಯಾವುದೇ ರೀತಿಯ ಚರ್ಚೆಯಿಲ್ಲದೇ ಸಭೆ ಮೊಟಕುಗೊಂಡಿತು.


