Homeಮುಖಪುಟಒಬಿಸಿ ಕಾಯ್ದೆ ತಿದ್ದುಪಡಿ 2021 ಹಿನ್ನೆಲೆ; ಮೀಸಲು ಸೌಲಭ್ಯ - ಭಾಗ ಒಂದು

ಒಬಿಸಿ ಕಾಯ್ದೆ ತಿದ್ದುಪಡಿ 2021 ಹಿನ್ನೆಲೆ; ಮೀಸಲು ಸೌಲಭ್ಯ – ಭಾಗ ಒಂದು

- Advertisement -

ಹಳ್ಳಿಗಾಡಿನ ರೈತನೊಬ್ಬನಿಗೆ ಮೂವರು ಮಕ್ಕಳು. ದೊಡ್ಡವರು ಇಬ್ಬರು ದುಡಿಯಲಿಕ್ಕೆ ಜಮೀನಿಗೆ ಹೋದರೆ, ಕೊನೆಯವನು ಇನ್ನೂ ಹೈಸ್ಕೂಲ್ ಹುಡುಗ. ಅವನು ದಿವ್ಯಾಂಗ. ಅವನಿಗೆ ಸರಿಯಾಗಿ ನಡೆಯಲು ಬರುವುದಿಲ್ಲ. ಅವನು ತನ್ನ ಸ್ನೇಹಿತನ ಸಹಾಯದಿಂದ ಹತ್ತಿರದ ನಗರದ ಶಾಲೆಗೆ ಹೋಗಿಬರುತ್ತಾನೆ. ಪ್ರತಿ ದಿವಸ ಸಂಜೆ ಆ ರೈತನ ಹೆಂಡತಿ ಆ ಮಕ್ಕಳು ಶಾಲೆಯಿಂದ ಮನೆಗೆ ಬರುವುದನ್ನೇ ಕಾಯುತ್ತಿರುತ್ತಾಳೆ.

ಆ ಇಬ್ಬರು ಹುಡುಗರು ತನ್ನ ಮನೆಯ ರಸ್ತೆಯ ಆ ತುದಿಗೆ ಕಾಣಹತ್ತಿದ ತಕ್ಷಣ ಅಲ್ಲಿಯವರೆಗೆ ಹೋಗಿ ಅವರ ಚೀಲ ಇಸಗೊಂಡು, ತನ್ನ ಮಗನ ಕೈಹಿಡಿದು ಕರೆತರುತ್ತಾಳೆ. ಅವನನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದ ನೆರೆ ಮನೆಯ ಹುಡುಗನಿಗೆ ಒಂದು ತುಂಡು ಬೆಲ್ಲ ಕೊಟ್ಟು, ನೀರು ಕುಡಿಸಿ ಕಳಿಸುತ್ತಾಳೆ.

ತನ್ನ ಮಗನ ಕೈ-ಕಾಲು ತೊಳೆಯಲು ನೀರು ಕೊಟ್ಟು ಊಟಕ್ಕೆ ಹಾಕುತ್ತಾಳೆ. ಮೂಲೆಯ ಮಡಕೆಯಲ್ಲಿ ಮಧ್ಯಾಹ್ನದಿಂದ ಕಾಯಿದಿಟ್ಟಿದ್ದ ರೊಟ್ಟಿ-ಚಟ್ನಿ ಅವನಿಗೆ ತಿನ್ನಲು ಕೊಡುತ್ತಾಳೆ. ತನ್ನ ಉಳಿದಿಬ್ಬರು ಮಕ್ಕಳು ಮಧ್ಯಾಹ್ನ ಊಟಕ್ಕೆ ಬಂದಾಗ ಅವಳೇ ಬಡಿಸಿರುತ್ತಾಳೆ. ಅವರಿಗೆ ಊಟಕ್ಕೆ ಹಾಕುವ ಮುನ್ನ ದಿವ್ಯಾಂಗ ಮಗನಿಗೆ ಎರಡು ರೊಟ್ಟಿ-ಚಟ್ನಿ ತೆಗೆದು ಇಟ್ಟಿರುತ್ತಾಳೆ. ಅವನು ಮನೆಗೆ ಬಂದಾಗ ಅವನಿಗೆ ಕೊಡುತ್ತಾಳೆ.

ಇದೇ ಮೀಸಲು ಸೌಲಭ್ಯ. ಇದನ್ನು ಬಹಳ ಸರಳವಾಗಿ ವಿವರಿಸಲು ಪ್ರಯತ್ನಿಸಿದ್ದೇನೆ.

ಈ ತಾಯಿಯ ಪ್ರೀತಿಯನ್ನು ತಾರತಮ್ಯ ಅನ್ನುವುದು ಸರಳ. ಅದರ ಹಿಂದಿನ ಅನಿವಾರ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ.

ಇಡೀ ದೇಶವನ್ನು ಹಾಳು ಮಾಡಿದ್ದು ಮೀಸಲಾತಿ ಅಂತ ಕೆಲವರು ವಾದ ಮಾಡುತ್ತಾರೆ. ಅದು ಪ್ರತಿಭೆಯ ವಿರೋಧಿ, ಇಂಡಿಯಾದಲ್ಲಿ ಶಿಕ್ಷಣದ ಗುಣಮಟ್ಟ, ಸರ್ಕಾರಿ ನೌಕರರ ಸೋಮಾರಿತನ ಮುಂತಾದವಕ್ಕೆ ಇದೇ ಮುಖ್ಯ ಕಾರಣ ಅಂತ ಹೀಯಾಳಿಸುತ್ತಾರೆ.

ಇಲ್ಲ ಅದು ಹಾಗಲ್ಲ. ಹಿಂದುಳಿದವರ ಅಭಿವೃದ್ಧಿಗೆ ಇರೋದು ಇದೊಂದೇ ದಾರಿ ಅಂತ ಕೆಲವರು ಸಮಜಾಯಿಷಿ ಕೊಡುತ್ತಾರೆ. ಈ ಮಾತು ಕೇಳಿದವರೆಲ್ಲಾ ಮೀಸಲು ಸೌಲಭ್ಯ ಅನ್ನುವುದು ಬಡತನ ನಿರ್ಮೂಲನ ಕಾರ್ಯಕ್ರಮ ಅಂದುಕೊಂಡು ‘ಹಂಗಾದರೆ ನಮ್ಮ ಸಮುದಾಯದಲ್ಲಿಯೂ ಬಡವರು ಇದ್ದಾರೆ. ಅವರಿಗೂ ಈ ಸೌಲಭ್ಯ ಕೊಡಿ ಅಂತ ಕೇಳಲು ಕೆಲವರು ರೆಡಿ ಆಗಿ ಕುಳಿತಿರುತ್ತಾರೆ. ಈ ಘೋರವಾದ ಪರ-ವಿರೋಧದ ಮಾತುಗಳನ್ನು ನಾವು ಬಹಳ ಸರಿ ಕೇಳುತ್ತೇವೆ. ಹಾಗಾದರೆ ಇದರಲ್ಲಿ ಸತ್ಯ ಅನ್ನುವುದು ಯಾವುದು?

PC India Map

ಮೀಸಲಾತಿ ವಿರೋಧ ಮಾಡುವವರಲ್ಲಿ ಸಾಮಾನ್ಯವಾಗಿ ಕೆಲವು ಸಂದೇಹಗಳು ಇರುತ್ತವೆ. ಅವುಗಳಲ್ಲಿ ಪ್ರಮುಖವಾದವು ಇವು’

1. ಇದು ಕೇವಲ ಭಾರತದ ಸಮಸ್ಯೆ. ಮುಂದುವರೆದ ರಾಷ್ಟ್ರಗಳಲ್ಲಿ ಇದು ಇಲ್ಲ.

2. ಇದನ್ನು ಅಂಬೇಡ್ಕರ್ ವಿರೋಧಿಸಿದ್ದರು. ಹತ್ತು ವರ್ಷದ ನಂತರ ಇದನ್ನು ರದ್ದುಮಾಡುವಂತೆ ಅವರು ಹೇಳಿದ್ದರು.

3. ಸಮಗ್ರ ಭಾರತದ ಸಂಪೂರ್ಣ ಅಭಿವೃದ್ಧಿಗೆ ಇದು ಇರಬಾರದು. ಸಿಗಲೇಬೇಕು ಎಂದಾದರೆ ಅದು ಎಲ್ಲಾ ಜಾತಿಯ ಬಡವರಿಗೆ ಸಿಗಲಿ. ಎಸ್‌ಸಿ, ಎಸ್‌ಟಿ, ಹಿಂದುಳಿದ ಜಾತಿಯ ಸಾಹುಕಾರರಿಗೆ, ಅವರ ಮಕ್ಕಳಿಗೆ ಯಾಕೆ ಬೇಕು ಇದೆಲ್ಲಾ?

ಇವನ್ನು ಒಂದೊಂದಾಗಿ ನೋಡೋಣ.

ಮೊದಲನೆಯದಾಗಿ, ಮೀಸಲು ಸೌಲಭ್ಯ ಎನ್ನುವುದು ಕೇವಲ ‘ಭಾರತದ ಸಮಸ್ಯೆ’ ಅಲ್ಲ. ಅದು ಸಮಾಜದಲ್ಲಿ ಹಾಸುಹೊಕ್ಕಾಗಿರುವ ಅಸಮಾನತೆಯ ವಿರುದ್ಧ ಸೆಣಸಲು ನಾಗರಿಕ ಸಮಾಜ ಕಂಡುಕೊಂಡಿರುವ ಅಹಿಂಸಾತ್ಮಕ ಪರಿಹಾರ. ಜಗತ್ತಿನಲ್ಲಿರುವ 236 ದೇಶಗಳ ಪೈಕಿ 167ಗಳಲ್ಲಿ ಪ್ರಜಾಪ್ರಭುತ್ವ ಇದೆ. ಇವುಗಳಲ್ಲಿನ ಸಾಮಾನ್ಯ ಅಂಶಗಳು ಎಂದರೆ ಜನಸಾಮಾನ್ಯರಿಗೆ ಮತದಾನದ ಹಕ್ಕು, ಚುನಾಯಿತ ಸರಕಾರ, ಕಾಲಕಾಲಕ್ಕೆ ಚುನಾವಣೆ, ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳಲ್ಲಿ ಸಮಾನ ಅಧಿಕಾರ ಹಂಚಿಕೆ ಹಾಗೂ ಪರಸ್ಪರ ವಿಚಕ್ಷಣೆ, ನ್ಯಾಯಾಂಗದ ಸ್ವಾಯತ್ತತೆ ಹಾಗೂ ಚುನಾಯಿತ ನಾಯಕರ ಆಣತಿಯಲ್ಲಿ ಕೆಲಸ ಮಾಡುವ ರಕ್ಷಣಾ ಇಲಾಖೆ ಇರಬೇಕು ಇತ್ಯಾದಿ.

ಅಂತೆಯೇ, ಈ ಎಲ್ಲಾ ಪ್ರಜಾಪ್ರಭುತ್ವಗಳಲ್ಲಿ ಇರುವ ಇನ್ನೊಂದು ಸಾಮಾನ್ಯ ಅಂಶ ಎಂದರೆ ಅದು ಸಾಮಾಜಿಕ ನ್ಯಾಯ ಹಾಗೂ ಸಮಾಜ ಕಲ್ಯಾಣ. ಕೆಲವರು ಅದನ್ನು ಗಂಭೀರವಾಗಿ, ಪರಿಣಾಮಕಾರಿಯಾಗಿ ಮಾಡುತ್ತಿರಬಹುದು. ಇನ್ನು ಕೆಲವರ ಕೆಲಸ ಅಷ್ಟೊಂದು ಫಲಪ್ರದವಾಗಿರಲಿಕ್ಕಿಲ್ಲ. ಆದರೆ ಈ ದಾರಿಯಲ್ಲಿ ಎಲ್ಲರೂ ಸಹಪಯಣಿಗರು.

ಇದನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಅಮೆರಿಕದಲ್ಲಿ ಅಫರ್‌ಮೆಟಿವ್ ಆಕ್ಷನ್, ಹೆಡ್ ಸ್ಟಾರ್ಟ್, ಯೂರೋಪಿನಲ್ಲಿ ಡೈವರ್ಸಿಟಿ, ಈಕ್ವಲ್ ಆಪರ್ಚುನಿಟಿ, ರೈನ್‌ಬೋ ಅಲಯನ್ಸ್, ಇಕ್ವಾಲಿಟಿ ಇಂಡೆಕ್ಸ್, ಆಫ್ರಿಕಾದಲ್ಲಿ ಪ್ರೊಟೆಕ್ಟಿವ್ ಡಿಸ್‌ಕ್ರಿಮಿನೇಶನ್ ಇತ್ಯಾದಿ ಪದಗಳಿಂದ ಕರೆಯುತ್ತಾರೆ.

ಆಕ್ಸ್‌ಫರ್ಡ್-ಕೇಂಬ್ರಿಜ್-ಹಾರ್ವರ್ಡ್-ಯೇಲ್-ಇಲಿನೋಯಿಸ್ ಇತ್ಯಾದಿ ವಿಶ್ವವಿದ್ಯಾಲಯಗಳಿಗೆ ಹೋಗುವ ಅನೇಕ ಭಾರತೀಯರು, ಅಥವಾ ಅನಿವಾಸಿ ಭಾರತೀಯರು ಅಥವಾ ಭಾರತೀಯ ಸಂಜಾತರು ಹಾಗೂ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಅಲ್ಲಿ ಸೀಟು ಗಿಟ್ಟಿಸಿಕೊಳ್ಳುವುದು ಈ ಮೇಲಿನ ನಿಯಮಗಳಿಂದಲೇ. ಇದನ್ನು ಅವರು ಅರ್ಥ ಮಾಡಿಕೊಂಡಿರುವುದಿಲ್ಲ ಅಥವಾ ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿರುವುದಿಲ್ಲ.

ಭಾರತದಲ್ಲಿ ಮಿಸಲಾತೀಯ ವಿರುದ್ಧ ನಡೆಯುವ ನಿತ್ಯ ಕದನ ವಿಶ್ವದ ಯಾವ ದೇಶದಲ್ಲಿಯೂ ಸಹಿತ ನಡೆಯುವುದಿಲ್ಲ. ಅಲ್ಲಿ ಆಗಾಗ ‘ನಮ್ಮ ತೆರಿಗೆ ಹಣದಿಂದ ಕುಳಿತು ಉಣ್ಣುವ ಸೋಮಾರಿಗಳ ಬಗ್ಗೆ’ ಅಸಮಾಧಾನ ಹೊಗೆಯಾಡುವುದು ಹೌದೇ ಆದರೂ, ಅದು ಇಲ್ಲಿಯಷ್ಟು ಕಠೋರವಾಗಿರುವುದು ಅನುಮಾನ.

ಎರಡನೆಯದಾಗಿ ‘ಇದನ್ನು ಅಂಬೇಡ್ಕರ್ ವಿರೋಧಿಸಿದ್ದರು. ಹತ್ತು ವರ್ಷದ ನಂತರ ಇದನ್ನು ರದ್ದು ಮಾಡುವಂತೆ ಅವರು ಹೇಳಿದ್ದರು’ ಎಂಬುದು.

ತಮ್ಮ ಜೀವನದ ಉದ್ದಕ್ಕೂ ಸಾಮಾಜಿಕ ಸಮಾನತೆಯ ಪರವಾಗಿ ಇದ್ದ ಡಾ. ಬಿ. ಆರ್ ಅಂಬೇಡ್ಕರ್ ಅವರು ಮೀಸಲಾತಿಯನ್ನು ವಿರೋಧಿಸಲಿಲ್ಲ. ಅವರು ಅದರ ಪರವಾಗಿ ಮಾತಾಡಿದರು. ಅದಕ್ಕೇ ಸಂಶೋಧನೆ ಆಧಾರಿತವಾದ, ದತ್ತಾಂಶ ಬೆಂಬಲಿತ, ತರ್ಕಬದ್ಧವಾದಗಳನ್ನು ಮಂಡಿಸಿದರು. ತಮಗೆ ಅಧಿಕಾರ, ಅವಕಾಶ ಸಿಕ್ಕಾಗ ತಮ್ಮ ಯೋಚನೆಗಳನ್ನು ಜಾರಿಗೆ ತಂದರು.

“ಸಹಸ್ರಾರು ವರ್ಷಗಳಿಂದ ನಮ್ಮ ಸಮಾಜದಲ್ಲಿ ಸ್ಥಾಪಿತವಾಗಿರುವ ಅಸಮಾನತೆಯನ್ನು ನಿಧಾನವಾಗಿ, ಶಾಂತಿಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಾಗುವ ಅಸ್ತ್ರಗಳು ಇವು” ಎಂದು ಮೀಸಲು ಸೌಲಭ್ಯದ ನೀತಿಗಳನ್ನು ಬಣ್ಣಿಸಿದರು. ಅವುಗಳು ಸಂವಿಧಾನದ ಮೂಲ ಸ್ವರೂಪದ ನಿರ್ಣಾಯಕ ತತ್ವಗಳಾಗುವಂತೆ ನೋಡಿಕೊಂಡರು.

ಅವರು ಮೊದಲ ಹತ್ತು ವರ್ಷ ಮಾತ್ರ ಇರಲಿ ಮತ್ತೆ ನೋಡೋಣ ಎಂದು ಹೇಳಿದ್ದು ರಾಜಕೀಯ
ಮೀಸಲಾತೀಯ ಸಂದರ್ಭದಲ್ಲಿ. ಅದು ಯಾಕೆಂದರೆ, ಈಗ ನಾವು ನೋಡುತ್ತಿರುವ ಮೀಸಲಾತಿ ಅಂಬೇಡ್ಕರ್ ಅವರ ಕನಸಿನ ಮೀಸಲಾತಿ ಅಲ್ಲ. ಅವರು ಊರಿಗೆ ಒಬ್ಬ ಶಾಸಕ, ಕೇರಿಗೆ ಒಬ್ಬ ಶಾಸಕ ಎನ್ನುವ ತತ್ವದ ಪರವಾಗಿ ಇದ್ದರು. ಅವರ ಪ್ರಕಾರ, ಪ್ರತಿಯೊಂದು ಚುನಾವಣಾ ಕ್ಷೇತ್ರಕ್ಕೂ ಇಬ್ಬರು ಶಾಸಕರು ಇರಬೇಕಿತ್ತು. ಸಾಮಾನ್ಯ ಮತದಾರರು ಒಬ್ಬ ಅಭ್ಯರ್ಥಿಯನ್ನು ಚುನಾಯಿಸಿದರೆ, ದಲಿತ ಹಾಗೂ ಬುಡಕಟ್ಟು ಜನಾಂಗಕ್ಕೆ ಸೇರಿದ ಮತದಾರರು ತಮ್ಮದೇ ಆದ ಅಭ್ಯರ್ಥಿಯನ್ನು ಗೆಲ್ಲಿಸಿ ತರಬೇಕಿತ್ತು.

ಇದನ್ನು ಮಹಾತ್ಮ ಗಾಂಧಿ ಸೇರಿದಂತೆ ಅನೇಕರು ಉಗ್ರವಾಗಿ ವಿರೋಧಿಸಿದರು. ನೀವು ದೇಶವನ್ನು ವಿಭಜಿಸುತ್ತಿದ್ದೀರಿ, ಸಮಾಜದಲ್ಲಿ ಅಸಮಾನತೆಯನ್ನು ಬೆಳೆಸುತ್ತಿದ್ದೀರಿ ಅಂತ ಅಂಬೇಡ್ಕರ್ ಅವರ ಮೇಲೆ ಅಪವಾದ ಹೇರಿದರು. “ಹಾಗೇನಿಲ್ಲ. ಸಮಾನ ಪ್ರಾತಿನಿಧ್ಯದ ಮೂಲಕ ನಾನು ಸಮಾನತೆಯನ್ನು ತರಲು ಪ್ರಯತ್ನಿಸುತ್ತಾ ಇದ್ದೇನೆ” ಎಂದು ಅವರು ವಾದಿಸಿದರು. ಗಾಂಧೀಜಿ ಆರಂಭಿಸಿದ ಉಪವಾಸ ಸತ್ಯಾಗ್ರಹದ ಮುಂದೆ ಅಂಬೇಡ್ಕರ್ ಅವರ ವಾದ ಸೊರಗಿತು. ಅವರು ಒಲ್ಲದ ಮನಸ್ಸಿನಿಂದ ಪೂನಾ ಒಪ್ಪಂದಕ್ಕೆ ಸಹಿ ಮಾಡಿದರು. ಅದರಲ್ಲಿ ಜನಸಂಖ್ಯಾ ಆಧಾರಿತ ರಾಜಕೀಯ ಮೀಸಲಾತಿ – ದಲಿತ ಹಾಗೂ ಬುಡಕಟ್ಟು ಜನರ ಜನಸಂಖ್ಯೆಯ ಮೇರೆಗೆ ಅವರಿಗೆ ಪ್ರಾತಿನಿಧ್ಯ ಎನ್ನುವ ಸೂತ್ರ ಒಪ್ಪಿಕೊಂಡರು.

ಅಂಬೇಡ್ಕರ್ ಅವರು ಸಮಯಮಿತಿ ವಿಧಿಸಿದ್ದು ಈ ಮೀಸಲಾತಿಗೆ.

“ಇದು ಹತ್ತು ವರ್ಷ ಇರಲಿ. ನಮ್ಮ ಸಮಾಜದ ಸಮಸ್ಯೆಗಳನ್ನು ಬಿಡಿಸಲು ಇದು ಎಷ್ಟರಮಟ್ಟಿಗೆ ಸಹಾಯ ಮಾಡುತ್ತದೆ ಎನ್ನುವದನ್ನು ನೋಡಿ ಇದನ್ನು ಮುಂದುವರೆಸುವ ಬಗ್ಗೆ ನಿರ್ಧಾರ ಮಾಡೋಣ” ಎಂದು ಅವರು ಹೇಳಿದ್ದು ಕೇಂದ್ರ- ರಾಜ್ಯ ಶಾಸನಸಭೆಗಳ ಕ್ಷೇತ್ರವಾರು ವಿಂಗಡಣೆ ಮಾಡಿಸಿದ ಮೀಸಲಾತಿ ಬಗ್ಗೆ. ಅಷ್ಟಾಗಿಯೂ ಅವರು ಅದನ್ನು ರದ್ದು ಮಾಡಲು ಹೇಳಿರಲಿಲ್ಲ. ಅದನ್ನು ಮರುಪರಿಶೀಲಿಸುವಂತೆ ಹೇಳಿದ್ದರು. ಇದರ ಬಗ್ಗೆ ಸ್ಪಷ್ಟ ದಾಖಲೆಗಳು ಇವೆ. ಸಂವಿಧಾನ ಕರಡು ತಯಾರು ಮಾಡಿದ ಸಮಿತಿಯ ಚರ್ಚೆಗಳನ್ನು ಓದಿದರೆ ಇದು ಸುಲಭವಾಗಿ ಅರ್ಥವಾಗುತ್ತದೆ.

ಮೂರನೆಯದು: ‘ಸಮಗ್ರ ಭಾರತದ ಸಂಪೂರ್ಣ ಅಭಿವೃದ್ಧಿಗೆ ಇದು ಇರಬಾರದು. ಸಿಗಲೇಬೇಕು ಎಂದಾದರೆ ಅದು ಎಲ್ಲಾ ಜಾತಿಯ ಬಡವರಿಗೆ ಸಿಗಲಿ. ಎಸ್‌ಸಿ, ಎಸ್‌ಟಿ, ಹಿಂದುಳಿದ ಜಾತಿಯ ಸಾಹುಕಾರರಿಗೆ, ಅವರ ಮಕ್ಕಳಿಗೆ ಯಾಕೆ ಬೇಕು ಇದೆಲ್ಲಾ?’ ಎಂಬುದು.

ಇದು ಒಂದು ಅಲಂಕಾರಿಕ ಪ್ರಶ್ನೆ (ರೆಟರಿಕಲ್ ಕ್ವಶ್ಚನ್) ಅಥವಾ ತನ್ನ ಹೊಟ್ಟೆಯ ಒಳಗೆ ಉತ್ತರವನ್ನು ಇಟ್ಟುಕೊಂಡಿರುವ ಪ್ರಶ್ನೆ.

ಅವರು ಸಾಹುಕಾರರು ಆದರೂ ಕೂಡ ನಾವು ಅವರನ್ನು ಅವರ ಜಾತಿಯಿಂದ ಗುರುತಿಸುತ್ತೇವೆ ಎನ್ನುವುದೇ ಮೀಸಲಾತಿ ಮುಂದುವರೆಯಬೇಕು ಎನ್ನುವುದರ ಪರವಾಗಿ ಇರುವ ಅತಿದೊಡ್ಡ ವಾದ.

ಇದನ್ನು ಒಂದು ಸಣ್ಣ ಉದಾಹರಣೆಯ ಮೂಲಕ ನೋಡಬಹುದು. ನಮ್ಮ ಸಮಾಜದಲ್ಲಿ ಸವಿತಾ ಸಮುದಾಯಕ್ಕೆ ಸೇರಿದವರನ್ನು ‘ಹಜಾಮ’, ‘ನಾಯಿಂದ’ ಇತ್ಯಾದಿಯಾಗಿ ಗುರುತಿಸುತ್ತೇವೆ. ಈ ಶಬ್ದಗಳು ಬೈಗುಳಗಳಾಗಿ ಬಳಕೆ ಆಗುತ್ತವೆಯೇ ಹೊರತು ಗೌರವಪೂರ್ವಕವಾಗಿ ಅಲ್ಲ. ಇವು ಜಾತಿ ಸೂಚಕ ಪದಗಳು. ಆ ಜಾತಿಗೆ ಸೇರಿದ ಯಾರೇ ಆಗಲಿ, ಅವರಲ್ಲಿ ಎಷ್ಟು ಒಳ್ಳೆಯ ಶಿಕ್ಷಣ ಪಡೆದರನ್ನು ಕೂಡ, ಅವರು ಈ ಕೆಲಸ ಮಾಡುವರು ಅಂತ ಕೀಳಾಗಿ ನೋಡುವುದು ಸಮಾಜದಲ್ಲಿ ರೂಢಿಯಾಗಿದೆ.

ಕಮಲ ಹಾಸನ್ ಅವರ ‘ವರುಮೈನ ನೀರಂ ಸೀವಪ್ಪು’ ಸಿನಿಮಾದಲ್ಲಿ ಖ್ಯಾತ ಸಂಗೀತಗಾರರ ಮಗನೊಬ್ಬ ಪದವಿ ಗಳಿಸಿದ ನಂತರ ಕೆಲಸ ಸಿಗದೇ ಕ್ಷೌರಿಕನಾಗಿ ಹೊಟ್ಟೆ ಹೊರೆದುಕೊಳ್ಳುವುದು, ಯಂಡಮೂರಿ ವೀರೇಂದ್ರನಾಥ ಅವರ ’ಆನಂದೋ ಬ್ರಹ್ಮ’ ಕಾದಂಬರಿಯಲ್ಲಿ ಪಕ್ಕದ ಮನೆ ಆಂಟಿಯ ಸವಾಲು ಸ್ವೀಕರಿಸಿ ಆತ್ಮನಿರ್ಭರನಾಗಲು ಹೋರಾಟ ಯುವಕನೊಬ್ಬ ಕ್ಷೌರ ವೃತ್ತಿ ಕಲಿತು ಎರಡು ಬಾಳೆ ಹಣ್ಣು ಖರೀದಿಸುತ್ತಾನೆ.

PC : Outlook

ಇವೆಲ್ಲ ಸಮಾಜದ ಪೂರ್ವಗ್ರಹಗಳನ್ನು ಮೆಟ್ಟಿ ನಿಂತ ಯುವಕರ ಕಾರ್ಯ ಕೌಶಲ್ಯದ ಕತೆಗಳಲ್ಲ. ’ಮೇಲುಜಾತಿಯವರಿಗೆ ಎಂಥ ಕೆಟ್ಟ ಪರಿಸ್ಥಿತಿ ಬಂತು ಎಂದರೇ ಅವರು ಈ ಕೆಲಸ ಮಾಡಬೇಕಾಯಿತಲ್ಲ’ ಎನ್ನುವ ಕಣ್ಣೀರಿನ ಕತೆಗಳು.

ಆದರೆ ಇದು ಕೇವಲ ಗಂಡಸರ ಕ್ಷೌರದ ವಿಷಯ. ಹೆಂಗಸರ ಅಥವಾ ಮಕ್ಕಳ ಕೇಶಕರ್ತನಕ್ಕೆ ಸಂಬಂಧಿಸಿದಂತೆ ನಾವು ಈ ಪದಗಳನ್ನು ಬಳಸುವುದಿಲ್ಲ. ನಗರ-ಮಹಾನಗರಗಳಲ್ಲಿ ಇರುವ ಅಸಂಖ್ಯ ಬ್ಯೂಟಿ ಪಾರ್ಲರ್‌ಗಳಿಗೆ ಹಜಮಾರ ಅಂಗಡಿ ಅಂತ ಯಾರಾದರೂ ಕರೆದದ್ದನ್ನು ಯಾರಾದರೂ ನೋಡಿದ್ದಾರೆಯೇ?

ನನ್ನ ಕುಟುಂಬದ ಸ್ನೇಹಿತರಾದ ಗಂಧರ್ವ ಸೇನಾ ಅವರು ಬೀದರ್ ಜಿಲ್ಲೆಯಲ್ಲಿ 70ರ ದಶಕದಲ್ಲಿ ಪಬ್ಲಿಕ್ ಎನ್ನುವ ಕನ್ನಡ ಪತ್ರಿಕೆ ಶುರು ಮಾಡಿ ಸಾಮಾಜಿಕ ಹೋರಾಟದ ದಾರಿ ಕಂಡುಕೊಂಡವರು. ಉರ್ದು-ತೆಲುಗು-ಹಿಂದಿ ಪ್ರಭಾವ ಜೋರಾಗಿದ್ದ ಆ ಗಡಿ ಜಿಲ್ಲೆಯಲ್ಲಿ ಕನ್ನಡ ಜಾಗೃತಿ ಬೆಳೆಸಿದವರು. ಉಸ್ಮಾನಿಯ ವಿಶ್ವವಿದ್ಯಾಲಯದ ಪದವೀಧರರಾದ ಅವರು ತಮ್ಮ ಜೀವನದ ಉದ್ದಕ್ಕೂ ಜನಕಲ್ಯಾಣದ ಕೆಲಸಗಳಲ್ಲಿ ತೊಡಗಿಸಿಕೊಂಡವರು. ಹೈದರಾಬಾದ್ ನಿಜಾಮನ ರಾಜ್ಯದಲ್ಲಿ ಶಿಕ್ಷಕರಾಗಿದ್ದ ಅವರ ತಂದೆಯಿಂದ ಪ್ರಭಾವಿತರಾಗಿ ಸಮಾಜ ಸಂಘಟನೆಯಲ್ಲಿ ಮುಳುಗಿದವರು. ಅವರ ಮಕ್ಕಳು ಇಂಜಿನಿಯರಿಂಗ್, ಮ್ಯಾನೇಜ್‌ಮೆಂಟ್ ಇತ್ಯಾದಿ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆದು ಕೆಲಸದಲ್ಲಿದ್ದಾರೆ.

ಈ ಕುಟುಂಬ ಮೂರು ತಲೆಮಾರುಗಳಿಂದ ತಮ್ಮ ಸಮುದಾಯದ ಸಾಂಪ್ರದಾಯಿಕ ಕೆಲಸದಿಂದ ದೂರ ಇದೆ. ಆದರೆ ಇವತ್ತಿಗೂ ಅವರ ಪತ್ರಿಕೆ ಮಾರುಕಟ್ಟೆಗೆ ಬಂದಾಗ ‘ಆ ಹಜಾಮನ ಪತ್ರಿಕೆ ಕೊಡಿ’, ‘ಹಜಾಮ ಏನು ಬರೆದಿದ್ದಾನೆ ನೋಡೋಣ’ ಎನ್ನುವ ಮಾತುಗಳು ಅಂಗಡಿಗಳಲ್ಲಿ ಕೇಳಿಬರುತ್ತವೆ.

ಹಾಗಂತ ಸವಿತಾ ಸಮಾಜಕ್ಕೆ ಸೇರಿದ ಕೆಲವರು ‘ತಾವು ಮೇಲುಜಾತಿಗೆ ಸೇರಿದವರು, ನಾವು ನಮ್ಮ ಕೆಳಗಿನವರನ್ನು ಕೀಳಾಗಿ ನೋಡಬೇಕು’ ಎಂದುಕೊಂಡು ‘ನಾವು ಈ ಹಳ್ಳಿಯ ದಲಿತರಿಗೆ ಕ್ಷೌರ ಮಾಡುವುದಿಲ್ಲ’ ಎಂದು ಬಹಿಷ್ಕಾರ ಹಾಕಿರುವ ಉದಾಹರಣೆಗಳೂ ಇವೆ. ಅದು ಬೇರೆ ವಿಷಯ. ಅದು ಗಂಭೀರ ಸಮಸ್ಯೆ ಆದರೂ ಸಹಿತ ಇಂದಿನ ಚರ್ಚೆಗೆ ಪ್ರಸ್ತುತವಾದದ್ದಲ್ಲ.

“ನಮ್ಮ ಸಮುದಾಯಕ್ಕೆ ಮೀಸಲಾತಿ ಬೇಕು ಎನ್ನುವ ಬೇಡಿಕೆ ನಿಲ್ಲಬೇಕು. ಈ ಪರಾವಲಂಬಿ ಮನಸ್ಥಿತಿಯಿಂದ ಹಿಂದುಳಿದವರು ಹೊರಬರಬೇಕು. ಎಲ್ಲರೂ ವ್ಯಕ್ತಿತ್ವ ವಿಕಸನದತ್ತ ಸಾಗಬೇಕು. ಇದರಿಂದ ಆಂತರಿಕ ಹಾಗೂ ಬಾಹ್ಯ ಬದಲಾವಣೆ ಸಾಧ್ಯ ಇದೆ” ಎಂದು ಹಿಂದೊಮ್ಮೆ ಒಬ್ಬ ನಾಯಕರು ಹೇಳಿದ್ದು ನನಗೆ ನೆನಪು ಇದೆ.

ವ್ಯಕ್ತಿತ್ವ ವಿಕಸನ, ಆಂತರಿಕ ಹಾಗೂ ಬಾಹ್ಯ ಬದಲಾವಣೆ ಬೇಕಾಗಿರುವುದು ಮೀಸಲು ಸೌಲಭ್ಯ ಬೇಕು ಎನ್ನುವವರಿಗಲ್ಲ. ಅದನ್ನು ಹಿಂದುಳಿದವರಿಗೆ ಕೊಡಬೇಡಿ ಎನ್ನುವವರಿಗೆ. ಈ ಮನಸ್ಥಿತಿಯಿಂದ ಹೊರಬರಬೇಕಾಗಿರುವವರು ಈ ಸಾಮಾಜಿಕ ನ್ಯಾಯದ-ಸಮಾನತೆಯ ಸಾಧನ ಹಾಗೂ ಪ್ರಕ್ರಿಯೆಯನ್ನು ವಿರೋಧಿಸುವವರೇ ಹೊರತು, ಅದರ ಮೇಲೆ ಅವಲಂಬಿತ ಆಗಿರುವವರಲ್ಲ.

ಇದು ನನ್ನ ಖಚಿತ ಅಭಿಪ್ರಾಯ.

ಹೃಷಿಕೇಶ ಬಹಾದ್ದೂರ ದೇಸಾಯಿ

ಹೃಷಿಕೇಶ ಬಹಾದ್ದೂರ ದೇಸಾಯಿ
ಹಿಂದೂ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೃಷಿಕೇಶ ಅವರಿಗೆ ಕರ್ನಾಟಕದ ಬಹು ಸಂಸ್ಕೃತಿಗಳ ಬಗ್ಗೆ ಆಸಕ್ತಿ. ಬಹಮನಿ ಸುಲ್ತಾನರು, ನಿಜಾಮರ ಕಾಲದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಂಗತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉರ್ದು ಭಾಷೆಯಿಂದ ಕವಿತೆಗಳನ್ನು ಅನುವಾದಿಸುವುದು ಅವರ ಆಸಕ್ತಿಗಳಲ್ಲಿ ಒಂದು.


ಇದನ್ನೂ ಓದಿ: ಜಸ್ಟ್ ಆಸ್ಕಿಂಗ್: ಹಿಂದೆ ಅಮಿತ್ ‍ಶಾರನ್ನು ಕಸ್ಟಡಿಗೆ ಕಳುಹಿಸಿದ್ದ ಜಸ್ಟೀಸ್ ಖುರೇಷಿಯವರಿಗೆ ಪದೋನ್ನತಿ ಇಲ್ಲ!

ಹೃಷಿಕೇಶ ಬಹಾದ್ದೂರ ದೇಸಾಯಿ
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕರ್ನಾಟಕ ಕೊರೊನಾ: 24 ಗಂಟೆಯಲ್ಲಿ 67 ಸಾವಿರ ಡಿಸ್ಚಾರ್ಜ್, 38 ಸಾವಿರ ಹೊಸ ಪ್ರಕರಣ

0
ಕೊರೊನಾ ಮೂರನೇ ಅಲೆಯಲ್ಲಿ ರಾಜ್ಯದಲ್ಲಿ ಪ್ರಕರಣಗಳು ದಿಢೀರ್‌ ಹೆಚ್ಚಾಗಿದ್ದವು. ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿನ ಕೇಸಸ್ ಪತ್ತೆಯಾಗಿದ್ದವು. ಆದರೆ, ಕಳೆದ 24 ಗಂಟೆಯಲ್ಲಿ 67 ಸಾವಿರ ಕೊರೊನಾ ಸೋಂಕಿತರು ಚೇತರಿಕೆ ಕಂಡು, ಡಿಸ್ಚಾರ್ಜ್ ಆಗಿದ್ದಾರೆ....
Wordpress Social Share Plugin powered by Ultimatelysocial