ಅಮ್ಫಾನ್ ಚಂಡಮಾರುತ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಈಶಾನ್ಯ ರಾಜ್ಯಗಳ ಕರಾವಳಿ ತೀರಕ್ಕೆ ಅಪ್ಪಳಿಸಿರುವ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳ 19 ತಂಡಗಳನ್ನು ನಿಯೋಜಿಸಲಾಗಿದೆ. ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು ತಗ್ಗುಪ್ರದೇಶಗಳಿಗೆ ಭಾರೀ ಪ್ರಮಾಣದ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳಿಗೆ ವಲಸೆ ಕಾರ್ಮಿಕರು ತೆರಳುತ್ತಿದ್ದ ಕೆಲವು ರೈಲುಗಳ ಮಾರ್ಗ ಬದಲಾಯಿಸಲಾಗಿದೆ. ಪಶ್ಚಿಮಬಂಗಾಳ ಮತ್ತು ಒಡಿಶಾಕ್ಕೆ ತೆರಳಬೇಕಾಗಿದ್ದ ಶ್ರಮಿಕ ವಿಶೇಷ ರೈಲುಗಳನ್ನು ಸರ್ಕಾರ ರದ್ದುಗೊಳಿಸಿದೆ.
ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿರುವುದರಿಂದ ವಿದ್ಯುತ್, ದೂರ ಸಂಪರ್ಕ ಕಂಬಗಳು ಧರೆಗುರುಳಿವೆ. ಸಾಕಷ್ಟು ಮರಗಳು ಬುಡಮೇಲಾಗಿವೆ. ಕೊಲ್ಕತ್ತಾದ ಕೆಲವು ಪ್ರದೇಶಗಳು ನೀರಿನಿಂದ ಜಲಾವೃತವಾಗಿವೆ.
ಬಂಗಾಳ ಕೊಲ್ಲಿಯಲ್ಲಿ 4 ರಿಂದ 5 ಮೀಟರ್ ಎತ್ತರದ ಬೃಹತ್ ಅಲೆಗಳು ಕರಾವಳಿ ತೀರವನ್ನು ಅಪ್ಪಳಿಸುತ್ತಿವೆ. ಭಾರೀ ಮಳೆಯೂ ಸುರಿಯುತ್ತಿದೆ. ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ರಕ್ಷಿಸಲು ನಗರದಲ್ಲಿ 9 ಸಾವಿರ ಮಂದಿ ಪೊಲೀಸ್ ಅಧಿಕಾರಿಗಳನ್ನು ಸನ್ನದ್ದುಗೊಳಿಸಿದೆ.
ಕೊಲ್ಕತ್ತಾದಲ್ಲಿ ಖಾಲಿ ಇರುವ ಸರ್ಕಾರಿ ಶಾಲೆಗಳು ಮತ್ತು ಸಮುದಾಯ ಕೇಂದ್ರಗಳನ್ನು ಪರಿಹಾರ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಚಂಡಮಾರುತಕ್ಕೆ ಸಿಲುಕಿರುವ ಜನರನ್ನು ಪರಿಹಾರ ಕೇಂದ್ರಗಳಲ್ಲಿಟ್ಟು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
ಪಶ್ಚಿಮಬಂಗಾಳ ಮತ್ತು ಒಡಿಶಾದ ಕರಾವಳಿ ತೀರದಲ್ಲಿ ವಾಸವಿದ್ದ 3 ಲಕ್ಷ ಜರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ದಕ್ಷಿಣ 24 ಪಗರಣ, ಉತ್ತರ 24 ಪಗರಣ ಜಿಲ್ಲೆಗಳ ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರದ ಜನರನ್ನು ಸ್ಥಳಾಂತರ ಮಾಡಿದೆ.
ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜನರು ಮನೆಯಲ್ಲೇ ಇರುವಂತೆ ಮನವಿ ಮಾಡಿದ್ದಾರೆ.
ಭಾರತೀಯ ನೌಕಾಪಡೆ ಪರಿಹಾರ ಕಾರ್ಯ ಕೈಗೊಳ್ಳಲು ತಂಡಗಳನ್ನು ಕೊಲ್ಕತ್ತಾ ಮತ್ತು ಒಡಿಶಾಕ್ಕೆ ಕಳಿಸಿದೆ. ಬಿರುಗಾಳಿ ಸಹಿತ ವ್ಯಾಪಕ ಮಳೆ ಸುರಿಯುತ್ತಿದ್ದು ರಕ್ಷಣಾ ಕಾರ್ಯಗಳು ಭರದಿಂದ ಸಾಗಿವೆ.
ಈ ಮಧ್ಯೆ ಬಾಂಗ್ಲಾದೇಶದ ಕರಾವಳಿ ತೀರವೂ ಅಮ್ಪಾನ್ ಚಂಡಮಾರುತಕ್ಕೆ ತುತ್ತಾಗಿದೆ. ಈವರೆಗೆ ಒಬ್ಬರು ಸಾವನಪ್ಪಿದ್ದಾರೆ. ಹೀಗಾಗಿ ಅಲ್ಲಿನ ಸರ್ಕಾರ 20 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಓದಿ: ‘ಅಮ್ಫಾನ್’ ಚಂಡಮಾರುತ ಸೂಪರ್ ಸೈಕ್ಲೋನ್ ಆಗಲಿದೆ: ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ


