ಫೇಸ್‌ಬುಕ್‌ನ ಭಾರತದ ಕಾರ್ಯನಿರ್ವಾಹಕಿ ಅಂಖಿ ದಾಸ್ ಮತ್ತು ಬಿಜೆಪಿ ಪ್ರೇಮದ ಕುರಿತು ಪ್ರಶ್ನೆಗಳೆದ್ದಿರುವ ಸಮಯದಲ್ಲಿ ಭಾರತದಲ್ಲಿ ಎದ್ದ ರಾಜಕೀಯ ವಿಷಯವನ್ನು ಫೇಸ್‌ಬುಕ್ ಹೇಗೆ ನಿಯಂತ್ರಿಸುತ್ತದೆ ಎಂಬ ಬಗ್ಗೆ ಅದರ ನೌಕರರು ಪ್ರಶ್ನೆ ಮಾಡಿದ್ದಾರೆ.
ಮುಸ್ಲಿಮರನ್ನು ದೇಶದ್ರೋಹಿಗಳು ಎಂದು ಕರೆದ ಬಿಜೆಪಿಯ ರಾಜಕಾರಣಿಯ ಪೋಸ್ಟ್‌ಗಳಿಗೆ ಕಂಪನಿಯ ದ್ವೇಷ-ಭಾಷಣ ನಿಯಮಗಳನ್ನು ಅನ್ವಯಿಸುವುದನ್ನು ದಾಸ್ ವಿರೋಧಿಸಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ ನಂತರ ವಿಶ್ವದ ಅತಿದೊಡ್ಡ ಸಾಮಾಜಿಕ ನೆಟ್‌ವರ್ಕ್ ಆದ ಫೇಸ್‌ಬುಕ್ ಭಾರತದಲ್ಲಿ ತೀವ್ರ ಟೀಕೆ ಎದುರಿಸುತ್ತಿದೆ.
ಫೇಸ್‌ಬುಕ್ ಈ ರೀತಿ ಒಂದು ಪಕ್ಷದ ಪರವಿರುವುದು ಸರಿಯೇ ಎಂದು ಅದರ ಉದ್ಯೋಗಿಗಳು ಪ್ರಶ್ನಿಸುತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ: ಫೇಸ್‌ಬುಕ್ ಇಂಡಿಯಾದ ಮುಖ್ಯಸ್ಥೆ ಅಂಖಿ ದಾಸ್ ವಿರುದ್ಧ ಎಫ್‌ಐಆರ್!
11 ಫೇಸ್‌ಬುಕ್ ಉದ್ಯೋಗಿಗಳು ಫೇಸ್‌ಬುಕ್‌ನ ಆಂತರಿಕ ವೇದಿಕೆಯೊಂದರಲ್ಲಿ ನಾಯಕತ್ವಕ್ಕೆ ಪತ್ರ ಬರೆದಿದ್ದು, ‘ಫೇಸ್‌ಬುಕ್ ನಾಯಕತ್ವವು ಮುಸ್ಲಿಂ ವಿರೋಧಿ ಧರ್ಮಾಂಧತೆಯನ್ನು ಖಂಡಿಸಬೇಕು ಮತ್ತು ಹೆಚ್ಚಿನ ನೀತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಒತ್ತಾಯಿಸಿದ್ದಾರೆ.
“ಭಾರತದಲ್ಲಿ ಮತ್ತು ಇತರೆಡೆ ನೀತಿ ನಿರೂಪಣಾ ತಂಡವು ವೈವಿಧ್ಯಮಯ ಪ್ರಾತಿನಿಧ್ಯವನ್ನು (ಹಲವು ಜಾತಿ, ಧರ್ಮ, ಲಿಂಗ, ಪ್ರದೇಶಗಳ ಅಧಿಕಾರಿಗಳನ್ನು) ಒಳಗೊಂಡಿರಬೇಕು” ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
“ನಾವು ಇದರಲ್ಲಿ ಒಬ್ಬಂಟಿಯಾಗಿಲ್ಲ ಎಂದು ನಮಗೆ ತಿಳಿದಿದೆ. ಕಂಪನಿಯಾದ್ಯಂತದ ಉದ್ಯೋಗಿಗಳು ಇದೇ ರೀತಿಯ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾರೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ. “ಫೇಸ್‌ಬುಕ್‌ನಲ್ಲಿರುವ ಮುಸ್ಲಿಂ ಸಮುದಾಯವು ನಮ್ಮ ಪ್ರಶ್ನೆಗಳನ್ನು ಫೇಸ್‌ಬುಕ್ ನಾಯಕತ್ವದಿಂದ ಕೇಳಲು ಬಯಸುತ್ತದೆ.” ಎಂದು ಪತ್ರ ಉಲ್ಲೇಖಿಸಿದೆ. ಈ ಬಗ್ಗೆ ಫೇಸ್‌ಬುಕ್ ಮತ್ತು ಅಂಖಿ ದಾಸ್ ತಕ್ಷಣ ಸ್ಪಂದಿಸಿಲ್ಲ ಎಂದು ದಿ ವೈರ್ ಪತ್ರಿಕೆ ಹೇಳಿದೆ.
ಇದನ್ನೂ ಓದಿ: ಫೇಸ್‌ಬುಕ್ ಇಂಡಿಯಾ ಬಗ್ಗೆ ವಿಚಾರಣೆ ನಡೆಸಿ: ಮಾರ್ಕ್ ಜುಕರ್‌ಬರ್ಗ್‌ಗೆ ಕೆ.ಸಿ.ವೇಣುಗೋಪಾಲ್ ಪತ್ರ
ನಕಲಿ ಸುದ್ದಿ, ಪ್ರಭುತ್ವ ಬೆಂಬಲಿತ ತಪ್ಪು ಮಾಹಿತಿ ಅಭಿಯಾನಗಳು ಮತ್ತು ಹಿಂಸಾತ್ಮಕ ವಿಷಯಗಳನ್ನು ಹರಡುವ ವಿಷಯದಲ್ಲಿ ಫೇಸ್‌ಬುಕ್ ಇತ್ತೀಚಿನ ವರ್ಷಗಳಲ್ಲಿ ಮುಂಚೂಣಿಯಲ್ಲಿದೆ.
ಪ್ರಧಾನಿ ನರೇಂದ್ರೆ ಮೋದಿಯ ಪಕ್ಷವಾದ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಗೆ ಹತ್ತಿರವಿರುವ ರಾಜಕಾರಣಿಗಳಿಗೆ ದ್ವೇಷ-ಭಾಷಣ ನಿಯಮಗಳನ್ನು ಅನ್ವಯ ಮಾಡಿದರೆ “ದೇಶದಲ್ಲಿ ಕಂಪನಿಯ ವ್ಯವಹಾರ ಭವಿಷ್ಯವನ್ನು ಹಾಳುಮಾಡುತ್ತದೆ” ಎಂದು ಅಂಖಿ ದಾಸ್ ಸಿಬ್ಬಂದಿಗೆ ತಿಳಿಸಿದ್ದಾರೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ಲೇಖನ ಹೇಳಿತ್ತು.
ಈ ವರದಿಯ ನಂತರ ಫೇಸ್‌ಬುಕ್ ಪ್ರತಿಕ್ರಿಯೆ ನೀಡಿದ್ದು, ರಾಜಕೀಯ ಸ್ಥಾನ ಅಥವಾ ಪಕ್ಷದ ಸಂಬಂಧವನ್ನು ಪರಿಗಣಿಸದೆ ಹಿಂಸಾಚಾರವನ್ನು ಪ್ರಚೋದಿಸುವ ಪೋಸ್ಟ್‌ಗಳ ವಿರುದ್ದ ನೀತಿಗಳನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿದೆ.
“ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ನಮಗೆ ತಿಳಿದಿದ್ದರೂ, ನಾವು ಜಾರಿಗೊಳಿಸುವಲ್ಲಿ ಪ್ರಗತಿಯನ್ನು ಸಾಧಿಸುತ್ತಿದ್ದೇವೆ ಮತ್ತು ನಿಯಮಿತವಾಗಿ ಇದರ ಬಗ್ಗೆ ಲೆಕ್ಕಪರಿಶೋಧನೆಯನ್ನು ನಡೆಸುತ್ತಿದ್ದೇವೆ” ಎಂದು ಭಾರತದಲ್ಲಿ 30 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಹೇಳಿದೆ. ನಿಜವಾಗಿಯೂ ಏನಾಯಿತು ಎಂಬುದರ ಕುರಿತು ಪರಿಶೀಲನೆ ನಡೆಯುತ್ತದೆ ಎಂದು ಹೇಳಲಾಗಿದೆ.
ಓದಿ: ಬಿಜೆಪಿ ನಾಯಕರ ದ್ವೇಷ ಭಾಷಣದ ನಿರ್ಲಕ್ಷ್ಯ ಆರೋಪ; ಫೇಸ್‌ಬುಕ್ ಸ್ಪಷ್ಟನೆ


