ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗಂಗಾಧರ ನೆಲ್ಲೂರು ಕ್ಷೇತ್ರದ ಶ್ರೀರಂಗರಾಜಪುರಂನ ಎರ್ರಿಕೊಂಟಾದಲ್ಲಿ ಬಡವರು ನಿರ್ಮಿಸಿರುವ ಮನೆಗಳ ಮೇಲೆ ಸಮ್ಮಿಶ್ರ ಸರ್ಕಾರದ ನಾಯಕರು ಮತ್ತು ಸರ್ಕಾರಿ ಶಾಲಾ ಶಿಕ್ಷಕಿಯ ದೃಷ್ಟಿ ನೆಟ್ಟಿದ್ದು, ಅವರ ಕುಟುಂಬದ ಮೇಲೆ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ದೌರ್ಜನ್ಯ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ತೆಲುಗಿನ ‘ಸಾಕ್ಷಿ’ ನ್ಯೂಸ್ ಪೋರ್ಟಲ್ ವರದಿ ಮಾಡಿದೆ. ಸ್ಥಳೀಯರ ಪ್ರಕಾರ, ದಲಿತರಿಗೆ ಮನೆಗಳಿಲ್ಲದ ಕಾರಣ ಕಳೆದ 20 ವರ್ಷಗಳಿಂದ ಎರ್ರಿಕೊಂಟಾದಲ್ಲಿ 10 ಕುಟುಂಬಗಳು ಗುಡಿಸಲುಗಳಲ್ಲಿ ವಾಸಿಸುತ್ತಿವೆ. ಸರ್ಕಾರಿ ಶಿಕ್ಷಕಿ ದಿನಾವತಿ ಮತ್ತು ಟಿಡಿಪಿ ನಾಯಕ ಎತ್ತಿರಾಜುಲು ನಾಯ್ಡು ಈ ಭೂಮಿಯ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಅವರು, 20 ಜನ ಸಮ್ಮಿಶ್ರ ಸರ್ಕಾರದ ನಾಯಕರೊಂದಿಗೆ ಶುಕ್ರವಾರ ರಾತ್ರಿ ಜೆಸಿಬಿ ಬಳಸಿ ದಲಿತರು ನಿರ್ಮಿಸಿರುವ ಮನೆಗಳನ್ನು ಕೆಡವಲು ಪ್ರಯತ್ನಿಸಿದ್ದಾರೆ.
ಬಲವಂತದ ತೆರವು ಕಾರ್ಯಾಚರಣೆಯನ್ನು ದಲಿತ ಕುಟುಂಬಗಳು ವಿರೋಧಿಸಿದಾಗ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಜಾತಿ ಹೆಸರಿಡಿದು ಅವರನ್ನು ನಿಂದಿಸಿದರು. ನಾಳೆಯೊಳಗೆ ಮನೆ ಖಾಲಿ ಮಾಡದಿದ್ದರೆ ನಿದ್ರೆಯಲ್ಲಿಯೇ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ದಲಿತರು ಸ್ಥಳೀಯ ಪೊಲೀಸ್ ಠಾಣೆ ಮತ್ತು ತಹಶೀಲ್ದಾರ್‌ಗೆ ದೂರು ನೀಡಿ, ತಮಗೆ ಜೀವ ಬೆದರಿಕೆ ಇದೆ ಮತ್ತು ಸರ್ಕಾರ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಮನೆ ಹಕ್ಕುಪತ್ರ ನೀಡುವಂತೆ ಕಂದಾಯ ಅಧಿಕಾರಿಗಳಿಗೆ ಪದೇ ಪದೇ ಮನವಿ ಮಾಡಿದರೂ ಪ್ರಬಲ ಜಾತಿ ಗುಂಪಿನ ಮುಖಂಡರು ಅಡ್ಡಿಪಡಿಸುತ್ತಿದ್ದಾರೆ ಎಂದು ಸಂತ್ರಸ್ತರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಸರ್ಕಾರ ಸ್ಪಂದಿಸಿ ನ್ಯಾಯ ಒದಗಿಸಬೇಕು, ಇಲ್ಲದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಅವರು ತಮ್ಮ ದುಃಖವನ್ನು ವ್ಯಕ್ತಪಡಿಸಿದರು.
ಗುಜರಾತ್: ಶಾಲಾ ಮಾಲೀಕನಿಂದ ದಲಿತ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ