ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹುಸ್ಕೂರು ಕೆರೆಯಲ್ಲಿ ಯುವತಿಯೋರ್ವಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಯುವತಿ ಹಾಗೂ ಆಕೆಯ ತಂದೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಬೈಕ್ ಕೆರೆಗೆ ಉರುಳಿದೆ. ತಂದೆ ರಾಮಮೂರ್ತಿ ಈಜಿ ದಡ ಸೇರಿದ್ದಾರೆ. ಆದರೆ ಮಗಳು ಸಹನಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ ಎಂದು ಅವರು ಹೆಬ್ಬಗೋಡಿ ಪೊಲೀಸ್ ಠಾಣೆಗೆ ಹಾಜರಾಗಿ ತಿಳಿಸಿದ್ದಾರೆ.
ತಂದೆ ರಾಮಮೂರ್ತಿ ಕೆರೆಯಲ್ಲಿ ಮುಳುಗುತ್ತಿದ್ದ ಮಗಳನ್ನು ರಕ್ಷಿಸದೆ, ದೂರು ನೀಡಲು ಠಾಣೆಗೆ ಆಗಮಿಸಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಆದರೆ, ಆಕೆಯ ಪ್ರಿಯಕರ ನಿತಿನ್ ಇದೊಂದು ಮರ್ಯಾದಾ ಹತ್ಯೆ ಎಂದು ಆರೋಪಿಸಿದ್ದಾರೆ. ಪ್ರಸ್ತುತ, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಒಂದು ವರ್ಷದಿಂದ ನಿತಿನ್ ಮತ್ತು 21 ವರ್ಷದ ಸಹನಾ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ದಿನದ ಹಿಂದೆ ಪೋಷಕರಿಗೆ ಮಗಳ ಪ್ರೀತಿಯ ವಿಚಾರ ಗೊತ್ತಾಗಿದೆ. ಅಂದು ರಾತ್ರಿ ಪ್ರಿಯಕರ ನಿತಿನ್ಗೆ ಕರೆ ಮಾಡಿದ್ದ ಸಹನಾ ತಂದೆ, ಬೆಳಗ್ಗೆ ಮಾತುಕತೆಗೆ ಬರುವಂತೆ ತಿಳಿಸಿದ್ದಾರೆ. ಸಹನಾ ತಂದೆ ಸ್ನೇಹಿತನ ಮನೆಯಲ್ಲಿ ನ್ಯಾಯ ಪಂಚಾಯಿತಿ ನಡೆದಿದೆ. ಈ ವೇಳೆ ಪುತ್ರಿ ಮೇಲೆ ರಾಮಮೂರ್ತಿ ಹಲ್ಲೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಈ ಪ್ರೀತಿಗೆ ಒಪ್ಪುವುದಿಲ್ಲ ಎಂದು ಅವರು ಖಡಕ್ ಆಗಿ ತಿಳಿಸಿದ್ದಾರೆ.
ನಿತಿನ್ ತಾಯಿ ಮನವಿ ಮಾಡಿದರೂ ಯುವತಿಯ ತಂದೆ ಮದುವೆಗೆ ಒಪ್ಪಿಲ್ಲ. ಅಂತಿಮವಾಗಿ ಎರಡು ದಿನ ಸಮಯ ಕೇಳಿದ್ದಾರೆ. ಇಂದು ಮಗಳನ್ನು ರಾಮಮೂರ್ತಿ ಬೈಕ್ ನಲ್ಲಿ ಕರೆದೊಯ್ದಿದ್ದು, ಮಾರ್ಗಮಧ್ಯೆ ಪುತ್ರಿ ಸಹನಾರನ್ನು ರಾಮಮೂರ್ತಿ ಕೆರೆಗೆ ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ದೂರಿನ ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಸದ್ಯ ಯುವತಿ ಸಾವಿನ ಸುತ್ತ ಅನುಮಾನ ಕಾಡುತ್ತಿದೆ. ಆಕಸ್ಮಿಕವಾಗಿ ಕೆರೆಗೆ ಬಿದ್ದರೇ ಅಥವಾ ಅಪ್ಪನೇ ಕೆರೆಗೆ ತಳ್ಳಿದರೇ ಎಂಬ ಅನುಮಾನ ಕಾಡುತ್ತಿದೆ. ನಿತಿನ್ನನ್ನೇ ಮದುವೆಯಾಗುವುದಾಗಿ ಯುವತಿ ಹಠ ಹಿಡಿದಿದ್ದಳು. ಆದರೆ, ಪೋಷಕರು ಅಕ್ಕನ ಮಗನ ಜೊತೆ ವಿವಾಹಕ್ಕೆ ಮುಂದಾಗಿದ್ದರು. ಇದೇ ವಿಚಾರಕ್ಕೆ ಅಪ್ಪ ಮಗಳ ನಡುವೆ ಜೋರು ಗಲಾಟೆ ನಡೆದಿತ್ತು ಎಂದು ತಿಳಿದು ಬಂದಿದೆ.
ಇದನ್ನೂ ಒದಿ; ಮಹಾರಾಷ್ಟ್ರ | 17 ಆದಿವಾಸಿಗಳನ್ನು ಕೂಡಿ ಹಾಕಿ ಜೀತದಾಳುಗಳಂತೆ ಕಬ್ಬಿನ ಗದ್ದೆಯಲ್ಲಿ ದುಡಿಯುವಂತೆ ಒತ್ತಾಯ


