ತಮಿಳುನಾಡಿನಲ್ಲಿ ರಾಜಕೀಯ ಬಣ್ಣ ಪಡೆದುಕೊಂಡಿರುವ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ನಡೆದ ವಿದ್ಯಾರ್ಥಿನಿಯ ಅತ್ಯಾಚಾರ ಘಟನೆ ಸಂಬಂಧ ಮದ್ರಾಸ್ ಹೈಕೋರ್ಟ್ ಶುಕ್ರವಾರ (ಡಿ.27) ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದೆ ಎಂದು ವರದಿಯಾಗಿದೆ.
ವಕೀಲೆ ಆರ್.ವರಲಕ್ಷ್ಮಿ ಅವರು ಮಾಡಿದ ಮನವಿಯ ಮೇರೆಗೆ ನ್ಯಾಯಮೂರ್ತಿಗಳಾದ ಎಸ್.ಎಂ ಸುಬ್ರಮಣ್ಯಂ ಮತ್ತು ವಿ.ಲಕ್ಷ್ಮೀನಾರಾಯಣನ್ ಅವರ ವಿಭಾಗೀಯ ಪೀಠವು ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದೆ. ಆದರೆ, ಮುಖ್ಯ ನ್ಯಾಯಮೂರ್ತಿಗಳು ಇನ್ನೂ ಒಪ್ಪಿಗೆ ನೀಡದ ಕಾರಣ ವಿಚಾರಣೆಯನ್ನು ಮುಂದೂಡಿದೆ.
ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯವು ಸ್ವಯಂಪ್ರೇರಿತ ವಿಚಾರಣೆ ಆರಂಭಿಸಬೇಕು ಎಂದು ವಕೀಲೆ ವರಲಕ್ಷ್ಮಿ ಕೋರಿದ್ದರು. ವಕೀಲೆಯ ಮನವಿ ಪರಿಗಣಿಸಿದ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡು ಇಂದು (ಶುಕ್ರವಾರ) ಮಧ್ಯಾಹ್ನ 2.15ಕ್ಕೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರ ಗೃಹ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮತ್ತು ಅಣ್ಣಾ ವಿಶ್ವವಿದ್ಯಾಲಯಕ್ಕೆ ಸೂಚಿಸಿತ್ತು.
ಮಧ್ಯಾಹ್ನದ ವಿರಾಮದ ಬಳಿಕ ಪ್ರಕರಣ ವಿಚಾರಣೆ ಪುನರಾರಂಭಿಸಿದ ನ್ಯಾಯಾಧೀಶರು, ಮುಖ್ಯ ನ್ಯಾಯಮೂರ್ತಿಗಳು ಈಗ ನ್ಯಾಯಾಲಯದಲ್ಲಿ ಹಾಜರಿಲ್ಲ. ಅವರಿಂದ ಒಪ್ಪಿಗೆ ಪಡೆದ ಬಳಿಕ ವಿಚಾರಣೆ ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ.
ಪ್ರಕರಣದ ವಿಚಾರಣೆ ಆರಂಭಿಸಿದ ವೇಳೆ ನ್ಯಾಯ ಪೀಠದ ಮುಂದೆ ಹಾಜರಾದ ಅಡ್ವೊಕೇಟ್ ಜನರಲ್ (ಎಜಿ) ಪಿ.ಎಸ್.ರಾಮನ್ ಅವರು, ಈ ಪ್ರಕರಣದಲ್ಲಿ ನಮ್ಮ ವಾದ ಆಲಿಸದೆ ಯಾವುದೇ ಮಧ್ಯಂತರ ಆದೇಶ ನೀಡದಂತೆ ಹಾಗೂ ವಿಚಾರಣೆಯನ್ನು ನಾಳೆಗೆ (ಶನಿವಾರ) ಮುಂದೂಡುವಂತೆ ಕೋರಿದ್ದಾರೆ. ರಾಜ್ಯ ಸರ್ಕಾರ ಪ್ರಕರಣದ ಸ್ಥಿತಿಯ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ.
ನ್ಯಾಯಾಲಯದಲ್ಲಿ ಹಾಜರಿದ್ದ ಎಐಎಡಿಎಂಕೆ ಪಕ್ಷದ ಪರ ವಕೀಲ ಜಯಪ್ರಕಾಶ್ ಸೇರಿದಂತೆ ಕೆಲ ವಕೀಲರು, ಸ್ವಯಂ ಪ್ರೇರಿತ ವಿಚಾರಣೆ ಮುಂದುವರಿಸಲು ಸಾಧ್ಯವಾಗದಿದ್ದರೆ ಅದನ್ನು ವಾಪಸ್ ಪಡೆಯಿರಿ. ನಾವು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವಕೀಲೆ ವರಲಕ್ಷ್ಮಿ ಅವರು ನ್ಯಾಯಾಲಯಕ್ಕೆ ಬರೆದ ಪತ್ರದಲ್ಲಿ, ಆರೋಪಿ ಜ್ಞಾನಶೇಖರನ್ ಅವರನ್ನು ಬಂಧಿಸಿದ್ದರೂ, ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬನನ್ನು ಇನ್ನೂ ಬಂಧಿಸಿಲ್ಲ ಎಂದು ಹೇಳಿದ್ದಾರೆ.
ಆದರೆ, ಇದುವರೆಗಿನ ತನಿಖೆಯಲ್ಲಿ ಬೇರೆ ಯಾವುದೇ ವ್ಯಕ್ತಿಯ ಪಾತ್ರದ ಬಗ್ಗೆ ತಿಳಿದು ಬಂದಿಲ್ಲ ಎಂದು ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತರು ಗುರುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಂಧಿತ ಆರೋಪಿಯು ಆಡಳಿತ ಪಕ್ಷದೊಂದಿಗೆ ಸಂಪರ್ಕ ಹೊಂದಿರುವುದರಿಂದ ಮತ್ತು ಪಕ್ಷದ ಹಲವು ಹುದ್ದೆಗಳನ್ನು ಹೊಂದಿರುವುದರಿಂದ, ಈಗ ನಡೆಯುತ್ತಿರುವ ತನಿಖೆಯ ನಿಷ್ಪಕ್ಷಪಾತ ಮತ್ತು ದಕ್ಷತೆಯ ಬಗ್ಗೆ ವಕೀಲೆ ವರಲಕ್ಷ್ಮಿ ತಮ್ಮ ಪತ್ರದಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಎಫ್‌ಐಆರ್ ಪ್ರತಿ ಸೋರಿಕೆ ಮಾಡಿ ಸಂತ್ರಸ್ತೆಯ ಗುರುತು ಬಹಿರಂಗ ಮಾಡಲಾಗಿದೆ ಎಂದು ಆರೋಪಿಸಿರುವ ಅವರು, ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೃಷ್ಣಗಿರಿ ಜಿಲ್ಲೆಯ ನಕಲಿ ಎನ್‌ಸಿಸಿ ಶಿಬಿರಗಳಲ್ಲಿ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಚೆನ್ನೈನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಹಲ್ಲೆ ಘಟನೆಗಳನ್ನೂ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಗಳು ಹೇಳಿವೆ.
ವಕೀಲೆ ವರಲಕ್ಷ್ಮಿ ಅವರು ತನಿಖೆಯ ಮೇಲ್ವಿಚಾರಣೆಗೆ ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ಸಮಿತಿಯನ್ನು ರಚಿಸುವಂತೆ ಅಥವಾ ಪರ್ಯಾಯವಾಗಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಹೆಚ್ಚುತ್ತಿರುವ ಆದಿವಾಸಿಗಳ ಆತ್ಮಹತ್ಯೆ: ಕೇರಳ ಸರ್ಕಾರ, ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ಜಾರಿ


