ಜಸ್ಟೀಸ್ ನಾಗಮೋಹನ್ ದಾಸ್ ಏಕಸದಸ್ಯ ಸಮಿತಿ ಒಳ ಮೀಸಲಾತಿ ಕುರಿತು ಗುರುವಾರ ಸಲ್ಲಿಸಿರುವ ಮಧ್ಯಂತರ ವರದಿ ಸಹ ನಮ್ಮ ನ್ಯಾಯಯುತ ಬೇಡಿಕೆಯನ್ನು ಮುಂದಕ್ಕೆ ಹಾಕುವ ಮತ್ತೊಂದು ಪ್ರಯತ್ನವಾಗಿದೆ ಎಂದು ಹಿರಿಯ ದಲಿತ ಮುಖಂಡರಾದ ಎನ್.ಮೂರ್ತಿ ತಿಳಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸುಪ್ರೀಂಕೋರ್ಟಿನ ಏಳು ಮಂದಿ ನ್ಯಾಯಮೂರ್ತಿಗಳ ತೀರ್ಪಿನಂತೆ ಒಳಮೀಸಲಾತಿ ಜಾರಿಗಾಗಿ ಕರ್ನಾಟಕ ಸರಕಾರ ರಚಿಸಿರುವ ನ್ಯಾ. ನಾಗಮೋಹನ್‌ದಾಸ್ ಏಕಸದಸ್ಯ ಆಯೋಗ ನೀಡಿರುವ ಮಧ್ಯಂತರ ವರದಿ ಮಾದಿಗ ವಿರೋಧಿಯಾಗಿದೆ. ಮಧ್ಯಂತರ ವರದಿಯನ್ನು ಸರ್ಕಾರವೇ ಹೇಳಿ ಬರೆಸಿದೆ. ಸರ್ಕಾರದ ಮಾದಿಗ ವಿರೊಧಿ ನಡೆ ಖಂಡಿಸಿ ಹೋರಾಟ ರೂಪಿಸಲು 2025ರ ಏಪ್ರಿಲ್ 9 ರಂದು ಸಮುದಾಯದ ಮುಖಂಡರ ಸಭೆ ನಡೆಸಲಾಗುವುದು” ಎಂದು ಹೇಳಿದರು.
“ಪರಿಶಿಷ್ಟ ಜಾತಿಯಲ್ಲಿ ಅತಿ ಹಿಂದುಳಿದಿರುವ ಮಾದಿಗ ಸಮುದಾಯದ ಮೂರು ದಶಕಗಳ ಹೋರಾಟಕ್ಕೆ ನ್ಯಾಯ ದೊರಯಬಹುದು ಎಂದು ನಾವೆಲ್ಲಾ ಚಾತಕ ಪಕ್ಷಿಗಳಂತೆ ಕಾಯುತ್ತಲೇ ಇದ್ದೇವೆ. ಕಾಂಗ್ರೆಸ್ ಸರ್ಕಾರ ಮಾತ್ರ ಕುಂಟು ನೆಪ ಮುಂದೆ ಮಾಡಿ ಮುಂದೂಡುತ್ತಲೇ ಬಂದಿದೆ. ಗುರುವಾರ ಸಲ್ಲಿಕೆಯಾಗಿರುವ ಮಧ್ಯಂತರ ವರದಿ ಸಹ ನಮ್ಮ ನ್ಯಾಯಯುತ ಬೇಡಿಕೆಯನ್ನು ಮುಂದಕ್ಕೆ ಹಾಕುವ ಮತ್ತೊಂದು ಪ್ರಯತ್ನವಾಗಿದೆ” ಎಂದು ಆರೋಪಿಸಿದರು.
“ಪರಿಶಿಷ್ಟ ಜಾತಿಯಲ್ಲಿನ 101 ಸಮುದಾಯಗಳಲ್ಲಿ ಅತಿ ಹಿಂದುಳಿದಿರುವ ಮಾದಿಗ, ಮೋಚಿ, ದಕ್ಕಲಿಗ, ಸಮಗಾರ, ಜಾಡಮಾಲಿಗಳಿಗೆ ಸಾಕಷ್ಟು ವಂಚನೆಯಾಗಿದೆ. ಎಂಪರಿಕಲ್ ಡೇಟಾ ಪಡೆಯಲು ಮತ್ತೊಂದು ಸಮೀಕ್ಷೆ ಮಾಡುವಂತಿದ್ದರೆ ನ್ಯಾ.ನಾಗಮೋಹನ್ ದಾಸ್ ಸಮಿತಿಯ ಅಗತ್ಯವಾದರೂ ಏನಿತ್ತು” ಎಂದು ಅವರು ಪ್ರಶ್ನಿಸಿದರು.
“ನಿಖರವಾದ ದಾಖಲೆಗಾಗಿ ಈಗಾಗಲೇ ನಮ್ಮ ಬಳಿ ನ್ಯಾ.ಸದಾಶಿವ ಆಯೋಗ, ಕಾಂತರಾಜು ವರದಿ, ನ್ಯಾ. ನಾಗಮೋಹನ್ ದಾಸ್ ವರದಿಗಳಿವೆ. ಇವುಗಳನ್ನು ಕ್ರೂಢೀಕರಿಸಿ 101 ಜಾತಿಗಳಿಗೂ ನ್ಯಾಯ ಒದಗಿಸಬಹುದಾಗಿತ್ತು. ಆದರೆ, ನಮಗೆ ನ್ಯಾಯ ನಿರಾಕರಿಸುವ ಉದ್ದೇಶದಿಂದಲೇ, ಒಳಮೀಸಲಾತಿ ವಿರೋಧಿಸುವ ಸಮುದಾಯಗಳ ಬೆದರಿಕೆ ನೀಡಿದ ವರದಿಯಾಗಿದೆ. ಮಾದಿಗರಿಗೆ ಮೀಸಲಾತಿ ನಿರಾಕರಿಸುವ ರಾಜಕೀಯ ಷಡ್ಯಂತ್ರ; ಹೋರಾಟವನ್ನು ತಣ್ಣಗಾಗಿಸುವ ಕುತಂತ್ರವಾಗಿದೆ. ಇದರ ವಿರುದ್ದ ಉಗ್ರ ಹೋರಾಟವನ್ನು ಮುಂದಿನ ದಿನಗಳಲ್ಲಿ ಮಾಡಲಿದ್ದು, ಈ ವೇಳೆ ಆಗುವ ಆಗುಹೋಗುಗಳಿಗೆ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ” ಎಂದು ಎನ್.ಮೂರ್ತಿ ಎಚ್ಚರಿಕೆ ನೀಡಿದ್ದಾರೆ.
ಮಾದಿಗ ವಿರೋಧಿ ಸಿದ್ದರಾಮಯ್ಯ ಸರ್ಕಾರ
“ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾದಿಗ ವಿರೋಧಿಯಾಗಿದೆ ಎಂಬುದಕ್ಕೆ ಈ ಮಧ್ಯಂತರ ವರದಿಯೇ ಸಾಕ್ಷಿ; ಸಾಮಾಜಿಕ ನ್ಯಾಯದ ಹರಿಕಾರ ಎಂಬುದು ಒಂದು ಮುಖವಾಡವಷ್ಟೇ. ಕಾಂಗ್ರೆಸ್ ಪಕ್ಷದ ಈ ನಡೆಗೆ ಮುಂದಿನ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಾದಿಗ ಸಮುದಾಯ ತಕ್ಕ ಪಾಠ ಕಲಿಸುತ್ತದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ನಮ್ಮಿಂದಲೇ ಆರಂಭ. ಕಾಂಗ್ರೆಸ್ ಸರ್ಕಾರಕ್ಕೆ 138 ಶಾಸಕ ಜನಬೆಂಬಲವಿದೆಯೇ ಹೊರತು, ಜನರ ಕಷ್ಟ, ಸುಖಗಳಿಗೆ ಸ್ಪಂದಿಸುವ ಬದ್ದತೆ ಇಲ್ಲ; ಇದೊಂದು ಹೊಣೆಗೇಡಿ ಸರ್ಕಾರ” ಎಂದು ಕಿಡಿ ಕಾರಿದರು.
“ನ್ಯಾ. ನಾಗಮೋಹನ್ ದಾಸ್ ಅವರ ಮಧ್ಯಂತರ ವರದಿಯನ್ನು ವಿರೋಧಿಸಿ, 2025ರ ಏಪ್ರಿಲ್ 9 ರಂದು ನಡೆಯುವ ಸಭೆಗೆ ಮಾದಿಗ ಮತ್ತು ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಸಂತ್ರಸ್ಥ ಜಾತಿಗಳ, ಸಂಘಟನಗಳ ಎಲ್ಲ ಮುಖಂಡರನ್ನು ಕರೆದು, ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಲಾಗುವುದು. ಇದು ಒಂದು ನಿರ್ಣಾಯಕ ಹೋರಾಟವಾಗಲಿದೆ” ಎಂದು ಘೋಷಣೆ ಮಾಡಿದರು.
ಒಳ ಮೀಸಲಾತಿ: ಜಸ್ಟೀಸ್ ನಾಗಮೋಹನದಾಸ್ ಆಯೋಗ ‘ಹೊಸ ಸಮೀಕ್ಷೆ’ಗೆ ಶಿಫಾರಸ್ಸು ಮಾಡಿದ್ದೇಕೆ?


