ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ.
ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ಪ್ರಕಾರ, ಬುಧವಾರ ರಾತ್ರಿ ಪೊರೈಯಾಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಮತಿಹಾನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪಥರ್ಗಮ ಪೊಲೀಸ್ ಠಾಣೆ ವ್ಯಾಪ್ತಿಯ ರಾಣಿಪುರ ಗ್ರಾಮದ ನಿವಾಸಿ ಪಪ್ಪು ಅನ್ಸಾರಿ ಎಂದು ಗುರುತಿಸಲ್ಪಟ್ಟ ವ್ಯಕ್ತಿಯನ್ನು ದನಗಳನ್ನು ಕದ್ದ ಆರೋಪದ ಮೇಲೆ ಜನರ ಗುಂಪೊಂದು ಥಳಿಸಿ ಕೊಂದಿದೆ.
ಘಟನೆಯನ್ನು ದೃಢಪಡಿಸಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಜೆಪಿಎನ್ ಚೌಧರಿ, ಘಟನೆ ಹೇಗೆ ನಡೆಯಿತು ಮತ್ತು ಅಪರಾಧದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಈ ವೇಳೆ ತನಿಖೆಯ ನಂತರವೇ ಹೆಚ್ಚಿನ ವಿವರಗಳನ್ನು ಒದಗಿಸಲಾಗುವುದು ಎಂದು ಚೌಧರಿ ತಿಳಿಸಿದ್ದಾರೆ.
ಮೃತ ವ್ಯಕ್ತಿ ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದು, ಹಿಂದೆ ಹಲವಾರು ಬಾರಿ ಜೈಲಿಗೆ ಹೋಗಿದ್ದ ಎಂದು ಡಿವೈಎಸ್ಪಿ ಹೇಳಿದ್ದಾರೆ.


