ವಿಧಾನಸೌಧದಲ್ಲಿ ರಂಪಾಟ, ಕೊಳಕು ರಾಜಕಾರಣದ ಮೇಲಾಟ
ರಾಜಕಾರಣಿಗಳ ನಡೆನುಡಿಗಳು ಪ್ರಜಾಪ್ರಭುತ್ವದ ಒಳಚರಂಡಿಗಳಿದ್ದಂತೆ ಎಂದು ಖ್ಯಾತ ಪತ್ರಕರ್ತ ಪಿ. ಲಂಕೇಶ್ ರವರು ಹೇಳಿದ್ದರು. ಇವತ್ತು ಈ ಚರಂಡಿ ನೀರು ವಿಧಾನಸೌಧದ ಕಾರಿಡಾರಿನಲ್ಲೇ ಹರಿದಿದೆ. ಅದು ಇಷ್ಟು ದಿನ ಇರಲಿಲ್ಲ ಎಂದಲ್ಲ, ಕಳೆದ ಒಂದು ವರ್ಷದಿಂದ ಕೊಳಚೆ ಪ್ರಜಾಪ್ರಭುತ್ವವನ್ನು ಮಲೀನಗೊಳಿಸುತ್ತಲೇ ಇದೆ.
ಈಗ ಮತ್ತಿಬ್ಬರು ರಾಜೀನಾಮೆ ಸಲ್ಲಿಸಿದ್ದಾರೆ. ಸಚಿವ ಎಂಟಿಬಿ ನಾಗರಾಜ್ ಮತ್ತು ಚಿಕ್ಕಬಳ್ಳಾಪುರ ಶಾಸಕ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ ಸುಧಾಕರ್ ಸ್ಪೀಕರ್ ರಮೇಶಕುಮಾರ್ ಅವರ ಕೈಗೇ ರಾಜೀನಾಮೆ ಸಲ್ಲಿಸಿದ್ದಾರೆ. ಖಾನಾಪುರ ಶಾಸಕಿ ಅಂಜಲಿ ಹೆಬ್ಬಾಳಕರ್ ಮತ್ತು ಜಯನಗರ ಶಾಸಕಿ ಸೌಮ್ಯರೆಡ್ಡಿ ರಾಜೀನಾಮೆ ಸಲ್ಲಿಸುವ ಸಾಧ್ಯೆ ಇದೆ. ಮೈತ್ರಿಬಣದ ಸಂಖ್ಯೆ ಈಗ 100ರ ಕೆಳಕ್ಕೆ ಇಳಿದು ಎರಡಂಕಿ ತಲುಪುತ್ತಿದೆ.
ಅಧಿಕಾರದ ಹಪಾಹಪಿ ಈಗ ಅಧಃಪತನದ ರಾಜಕಾರಣದ ಆಯಾಮ ಪಡೆದುಕೊಂಡಿದೆ. ಅಲ್ಲಿ ಮುಂಬೈಯಲ್ಲಿ ಬಿಜೆಪಿ ಸರ್ಕಾರ ರಾಜ್ಯದ ಸಚಿವರೊಬ್ಬರನ್ನು ಹೀನಾಯವಾಗಿ ನಡೆಸಿಕೊಂಡರೆ, ಇಲ್ಲಿ ವಿಧಾನೌಧದ ಕಾರಿಡಾರಿನಲ್ಲಿ ರಾಜೀನಾಮೆ ಕೊಟ್ಟು ಹೊರಬಂದ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ ಸುಧಾಕರ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡುರಾವ್ ಮತ್ತು ಸಚಿವ ಪ್ರಿಯಾಂಕ ಗಾಂಧಿ ಅವರು ವಿಧಾನಸೌಧದ ಕಾರಿಡಾರಿನಲ್ಲೇ ಬಲವಂತದಿಂದ ಕರೆದುಕೊಂಡು ಹೋಗುತ್ತಿರುವ ದೃಶ್ಯವನ್ನು ರಾಜ್ಯದ ಜನತೆ ನೋಡಬೇಕಾಗಿತು. ಅಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಹಾಲಿ ಸಚಿವ ಹಾಲಿ ಸಚಿವ ಯು. ಟಿ. ಖಾದರ್ ಮುಖಾಮುಖಿಯಾದಾಗಲಂತೂ ಬೀದಿರಂಪವೇ ನಡೆಯಿತು.

ಇದು ರಾಜ್ಯ ರಾಜಕೀಯ ಮುಟ್ಟಿರುವ ಅಧಃಪತನ, ಅಸಹ್ಯದ ಸಂಕೇತ ಮಾತ್ರ. ಎಲ್ಲಾ ಮೂರೂ ಪಕ್ಷಗಳು ಅಧಿಕಾರದ ಹಪಾಹಪಿಗೆ ಬಿದ್ದಿದ್ದರ ಪರಿಣಾಮವಿದು. ಸುಧಾಕರ್ ಅವರನ್ನು ಬಲವಂತದಿಂದ ಕರೆದುಕೊಂಡು ಹೋಗುವ ಅತಿರೇಕದ ಘಟನೆ ಇಟ್ಟುಕೊಂಡು ಮಾಧ್ಯಮಗಳು ‘ಛೇ, ಛೇ, ಇದೆಂತಹ ನಾಚಿಕೆಗೇಡು ಎಂದೆಲ್ಲ ಅರಚುತ್ತಿವೆ. ಹೌದು ಇದು ನಾಚಿಕೆಗೇಡೇ.

ಆದರೆ 2018ರಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಬಂದ ಕೂಡಲೇ ಈ ಮಾನಗೇಡಿ ರಾಜಕಾರಣದ ಉದ್ಘಾಟನೆಯಾಗಿತ್ತು. ಆಗ ಬಿಜೆಪಿ ಕೇಂದ್ರ ಸರ್ಕಾರದ ಪರೋಕ್ಷ ನೆರವಿನಿಂದ ರಾಜ್ಯಪಾಲರನ್ನು ಬಳಸಿಕೊಂಡು ಬಿಜೆಪಿ ಸರ್ಕಾರ ರಚನೆ ಮಾಡಲು ನಡೆಸಿದ ಅಪ್ರಜಾತಾಂತ್ರಿಕ ನಡೆ ಈ ಮಾಧ್ಯಮಗಳಿಗೆ ಅಸಹ್ಯವಾಗಿ ಕಂಡಿರಲೇ ಇಲ್ಲ. ಅದರ ಬದಲು ಅವು ಜನಾದೇಶದ ಪ್ರಕಾರ ಬಿಜೆಪಿಯೇ ಸರ್ಕಾರ ಮಾಡಬೇಕೆ ಎಂಬ ವಾದವನ್ನು ಸಮರ್ಥಿಸಿಕೊಳ್ಳುವ, ಕೇವಲ 104 ಸದಸ್ಯರ ಬಲವಿದ್ದ ಬಿಜೆಪಿ ಕುದುರೆ ವ್ಯಾಪಾರ ಮಾಡಿ ಬಹುಮತ ಸಾಬೀತು ಮಾಡುವುದೇ ನ್ಯಾಯಯುತ ಎಂಬಂತೆ ವರ್ತಿಸಿದ್ದವು.
ಕಳೆದ ವಿಧಾನಸಭಾ ಚುನಾವಣಾ ಫಲಿತಾಂಶ ಬಂದಾಗ ಖುದ್ದು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಬಹಿರಂಗವಾಗಿ, ‘ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ನಡೆಯಲು ನಾವು ಬಿಡುವುದಿಲ್ಲ’ ಎಂದು ಯಾವುದೇ ಲಜ್ಜೆ ಇಲ್ಲದೇ ಪ್ರಜಾಪ್ರಭುತ್ವವನ್ನು ಅವಮಾನಿಸಿದಾಗ ಇದೇ ಮಾಧ್ಯಮಗಳು ಅದರ ಬಗ್ಗೆ ಚಕಾರ ಎತ್ತಿರಲಿಲ್ಲ. ರೆಸಾರ್ಟ್ ರಾಜಕಾರಣವನ್ನು ಈ ಮಾಧ್ಯಮಗಳು ವೈಭವೀಕರಿಸಿದವೇ ಹೊರತು ಅವು ಜನತೆಗೆ ಬಗೆದ ದ್ರೋಹ ಎಂದು ಜನರ ಮುಂದೆ ಇಡಲೇ ಇಲ್ಲ.
ಹೀಗಾಗಿ ಇವತ್ತು ಕರ್ನಾಟಕ ರಾಜ್ಯ ರಾಜಕಾರಣ ಗಟಾರ ತಲುಪಿರುವುದಕ್ಕೆ ಮೂರೂ ಪಕ್ಷಗಳಷ್ಟೇ ಕಾರಣವಲ್ಲ, ಈ ಮಾಧ್ಯಮಗಳಿಗೂ ಅದರಲ್ಲಿ ಸಮಪಾಲು ಇದೆ.


