ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸ ದಿನದಂದೆ ನಾಡ ವಿರೋಧಿ ಘೋಷಣೆ ಹಾಕಿದ ಎಂ.ಇ.ಎಸ್ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ಗಂಭೀರವಾಗಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಶನಿವಾರ ರಾಜ್ಯೋತ್ಸವ ಧ್ವಜಾರೋಹಣ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಎಂಇಎಸ್ ನಾಯಕರಿಗೆ ಕರಾಳ ದಿನಾಚರಣೆಗೆ ಅವಕಾಶ ನೀಡಲಾಗಿಲ್ಲ. ಅವರು ಪ್ರತಿ ವರ್ಷ ಸಮಾವೇಶದ ಹೆಸರಿನಲ್ಲಿ ಅನುಮತಿ ಪಡೆಯುತ್ತಿದ್ದಾರೆ. ಮುಂದೆ ಕನ್ನಡ ವಿರೋಧಿ ಚಟುವಟಿಕೆ ನಡೆಸದಂತೆ ನಿಗಾ ವಹಿಸಲಾಗುವುದು. ಅಂಥ ಕೆಲಸ ಮಾಡಿದ್ದರೆ ಸಂಘಟನೆ ನಿಷೇಧಿಸಲು ಗಂಭೀರ ಚರ್ಚೆ ಮಾಡಲಾಗುವುದು. ಈ ಬಗ್ಗೆ ಪೊಲೀಸ್ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ’ ಎಂದು ತಿಳಿಸಿದ್ದಾರೆ.
ಮರಾಠ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಯಾದವ (ಹಲಗೇಕರ) ಅವರು ಕನ್ನಡ ವಿರೋಧಿ ಧೋರಣೆ ಹೊಂದಿದ್ದರೂ ಲಾಬಿ ಮಾಡಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಆ ಸಂಸ್ಥೆಯಲ್ಲಿ ಕನ್ನಡ ಬಳಕೆಯ ಬಗ್ಗೆ ಗಮನ ಹರಿಸಲಾಗುವುದು’ ಎಂದರು.
ಇದೇ ವೇಳೆ ‘ಎಂಇಎಸ್ ನಾಯಕ, ರೌಡಿ ಶೀಟರ್ ಆಗಿರುವ ಶುಭಂ ಸೆಳಕೆ ಜತೆಗೆ ಸಿಪಿಐ ಜಾಕೀರ್ ಪಾಷಾ ಖಾಲಿಮಿರ್ಚಿ ಅವರು ಕರಾಳ ದಿನಾಚರಣೆ ವೇಳೆಯೇ ಸೆಲ್ಫಿ ಕ್ಲಿಕ್ಕಿಸಿಕೊಂಡ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತಿರಿಸಿದ ಜಾರಕಿಹೊಳಿ, ‘ಇದನ್ನು ಕಮಿಷನರ್ ಗಮನಕ್ಕೆ ತಂದು ತನಿಖೆ ಮಾಡಿಸಿ ನಂತರ ಕ್ರಮ ವಹಿಸಲಾಗುವುದು’ ಎಂದರು.


