ಕೊರೋನಾ ಸೋಂಕಿಗೆ ಬೇರೆ ಬೇರೆ ಚಿಕಿತ್ಸಾ ವಿಧಾನಗಳನ್ನು ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿನ ವೈದ್ಯರು ಕಂಡುಕೊಂಡಿದ್ದಾರೆ. ಅಂತಹ ಒಂದು ವಿಧಾನಗಳಲ್ಲಿ ಪ್ಲಾಸ್ಮಾ ಕೂಡ ಒಂದು. ಪ್ಲಾಸ್ಮಾ ಚಿಕಿತ್ಸೆ ಸಾಕಷ್ಟು ಯಶಸ್ವಿಯಾಗದ ನಂತರ ಮೇಲೆ ಈಗ ಮತ್ತೆ ಹೊಸ ಹೊಸ ಚಿಕಿತ್ಸಾ ವಿಧಾನಗಳು ಹುಟ್ಟಿಕೊಳ್ಳುತ್ತಿವೆ. ಅದರಲ್ಲಿ ಹೈದ್ರಾಬಾದಿನ ವೈದ್ಯರ ಆಂಟಿಬಡಿ ಕಾಕ್ಟೇಲ್ ಟ್ರೀಟ್‌ಮೆಂಟ್ ಕೂಡ ಒಂದು..
ಹೈದ್ರಾಬಾದಿನ ಏಷಿಯನ್ ಇನ್ಸ್‌ಟಿಟ್ಯೂಟ್ ಆಫ್ ಗ್ಯಾಸ್ಟ್ರೋಂಟರಲಜಿಯ ವಿಜ್ಞಾನಿಗಳು ಈ ಚಿಕಿತ್ಸಾ ವಿಧಾನವನ್ನು ಕಂಡು ಹಿಡಿದಿದ್ದಾರೆ. ಈ ಚಿಕಿತ್ಸಾ ವಿಧಾನವು ಭಾರತದ ಡೆಲ್ಟಾ ರೂಪಾತಂರಿ ವೈರಸ್ ಸೋಂಕಿಗೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಲಿದೆ ಎನ್ನಲಾಗಿದೆ. ಸುಮಾರು 40 ಜನ ಕೊರೋನಾ ಸೋಂಕಿತರಿಗೆ ಒಂದು ಡೋಸ್ ನಷ್ಟು ಆಂಟಿಬಡಿಗಳನ್ನೊಳಗೊಂಡ ಕಾಕ್ಟೇಲ್ ಔಷಧಿಯನ್ನು ನೀಡಿದ್ದಾರೆ. ಈ ಕಾಕ್ಟೇಲ್ ಸಮಿಶ್ರಣಗಳ ಪರಿಣಾಮವಾಗಿ ಸೋಂಕಿತರಲ್ಲಿ ಕೋವಿಡ್ ಲಕ್ಷಣಗಳು ವಾಸಿಯಾಗಿವೆ. ಔಷಧಿಯನ್ನು ನೀಡಿದ 24 ಗಂಟೆಗಳಲ್ಲಿ ಸೋಂಕಿತರಲ್ಲಿನ ಜ್ವರ, ಮತ್ತು ಇತರ ಸಮಸ್ಯೆಗಳು ವಾಸಿಯಾಗಿವೆ ಎಂದು ಇನ್ಸ್ಟಿಟ್ಯೂಟ್ ಅಧ್ಯಕ್ಷ ಡಾ. ನಾಗೇಶ್ವರ ರೆಡ್ಡಿ ತಿಳಿಸಿದ್ದಾರೆ.
ಅಮೇರಿಕಾದಲ್ಲಿ ನಡೆದ ಅಧ್ಯಯನಗಳು ಕಾಕ್ಟೇಲ್ ಚಿಕಿತ್ಸಾ ವಿಧಾನವು ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾ ಮೂಲದ ಕೊರೊನಾ ರೂಪಾಂತರ ತಳಿಯ ಚಿಕಿತ್ಸೆಗೂ ಪರಿಣಾಮ ಬೀರಿವೆ ಎಂಬುದನ್ನು ತೋರಿಸಿವೆ.
ಮೋನೋಕ್ಲೋನಲ್ ಆಂಟಿಬಡಿ ಚಿಕಿತ್ಸೆ ಪಡೆದ 40 ಜನ ಸೋಂಕಿತರನ್ನು ನಾವು 1 ವಾರ ಬಿಟ್ಟು ಮತ್ತೆ ಪರೀಕ್ಷೆ ಮಾಡಿದ್ದೇವೆ. ಆರ್‌ಟಿಪಿಸಿಆರ್ ವಿಧಾನದಲ್ಲೂ ಪರೀಕ್ಷೆ ಮಾಡಿದ್ದೇವೆ. ಯಾರಲ್ಲೂ ಮತ್ತೆ ಸೋಂಕು ಕಾಣಿಸಿಕೊಂಡಿಲ್ಲ. ಎಲ್ಲರೂ ವಾಸಿಯಾಗಿದ್ದಾರೆ ಎಂದು ಡಾ. ನಾಗೇಶ್ವರ್ ರೆಡ್ಡಿ ಹೇಳುತ್ತಾರೆ.
ಇದನ್ನೂ ಓದಿ : ಕೊರೊನಾ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಿದ ದೆಹಲಿ ಸರ್ಕಾರ
ಮೋನೋಕ್ಲೋನಲ್ ವಿಧಾನದಲ್ಲಿ ಕೊರೋನಾ ಚಿಕಿತ್ಸೆ ಪಡೆದಿದ್ದ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಈ ಹಿಂದೆ ಅಮೇರಿಕಾದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಕೂಡ ಮೋನೋಕ್ಲೋನಲ್ ವಿಧಾನದಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಆ ನಂತರ ಜಗತ್ತಿನ ಅನೇಕ ದೇಶಗಳಲ್ಲಿ ಈ ಆಂಟಿಬಡಿ ಕಾಕ್ಟೇಲ್ ಚಿಕಿತ್ಸಾ ವಿಧಾನವನ್ನು ಅನುಸರಿಸಲಾಗಿತ್ತು. ಭಾರತದ ಡೆಲ್ಟಾ ವೇರಿಯೆಂಟ್‌ಗೆ ಇದುವರೆಗೆ ಈ ಮಾದರಿಯ ಚಿಕಿತ್ಸಾ ವಿಧಾನವನ್ನು ಅನುಸರಿಸಿರಲಿಲ್ಲ. ಕಾಕ್ಟೇಲ್ ಚಿಕಿತ್ಸಾ ವಿಧಾನದಿಂದ ಮೈಲ್ಡ್ ಹಾಗೂ ಸಾಧಾರಣವಾದ ಸೋಂಕಿನ ಲಕ್ಷಣ ಹೊಂದಿರುವ ಕೊರೋನಾ ಸೋಂಕಿತರಿಗೆ 1 ರಿಂದ 2 ದಿನಗಳಲ್ಲಿ ಕೊರೋನಾ ಸಂಬಂಧಿ ಸಮಸ್ಯೆಯನ್ನು ವಾಸಿ ಮಾಡಬಹುದು ಎಂದು ಸಂಸ್ಥೆಯ ವೈದ್ಯರು ತಿಳಿಸಿದ್ದಾರೆ.
ಆಂಟಿಬಡಿ ಕೊಕ್‌ಟೇಲ್ ವಿಧಾನದಲ್ಲಿ ಕ್ಯಾಸಿರಿವಿಮಾಬ್ ಮತ್ತು ಇಂಡಿವಿಮ್ಯಾಬ್ ಔಷಧಗಳನ್ನು ಸಮ್ಮಿಶ್ರಣ ಮಾಡಿ ಮೋನೋಕ್ಲೋನಲ್ ಎಂಟಿಬಡಿ ಥೆರಪಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಚಿಕಿತ್ಸೆಯ ಔಷಧಿಗಳ ಬೆಲೆ ಸರಿ ಸುಮಾರು 70000 ರೂಪಾಯಿಗಳಷ್ಟಾಗುತ್ತದೆ. ಅಮೇರಿಕಾದಲ್ಲಿ ಆಂಟಿ ಬಡಿ ಚಿಕಿತ್ಸೆಯ ಖರ್ಚು ಸುಮಾರು 20000 ಡಾಲರ್‌ಗಳಷ್ಟಾಗುತ್ತದೆ. ಚಿಕಿತ್ಸೆ ವೆಚ್ಚ ದುಬಾರಿಯಾಗಿದ್ದರೂ ಜಗತ್ತಿನ ಅನೇಕ ಕಡೆ ಈ ವಿಧಾನಕ್ಕೆ ಬೇಡಿಕೆಗಳು ಹೆಚ್ಚಿವೆ. ಆದರೆ ಇದನ್ನು ಎಲ್ಲರಿಗೂ ಕೊಡಲು ಸಾಧ್ಯವಿಲ್ಲ. ಚಿಕಿತ್ಸಾ ವಿಧಾನವನ್ನು ಅತಿಯಾಗಿ ಬಳಸುವುದರಿಂದ ಇನ್ನಷ್ಟು ಹೆಚ್ಚು ಪ್ರಭಾವಶಾಲಿ ಕೊರೋನಾ ರೂಪಾಂತರಿ ತಳಿಗಳು ಹುಟ್ಟಿಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ ಎಂದು ಡಾ. ನಾಗೇಶ್ವರ್ ರೆಡ್ಡಿ ತಿಳಿಸಿದ್ದಾರೆ. ಆಂಟಿ ಬಡಿ ಕಾಕ್ಟೇಲ್ ವಿಧಾನದಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಗೆ 3 ತಿಂಗಳ ವರೆಗೆ ಕೊರೋನಾ ವ್ಯಾಕ್ಸೀನ್ ಪಡೆಯದಂತೆ ಸೂಚಿಸಲಾಗಿದೆ ಎಂದು ಡಾ ರೆಡ್ಡಿ ಹೇಳುತ್ತಾರೆ.
ಇದನ್ನೂ ಓದಿ : ಕೊರೋನಾಗೆ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥವಾದ ರಾಜ್ಯದ 42 ಮಕ್ಕಳು


