ಕಾಶ್ಮೀರ ಟೈಮ್ಸ್ ನ ಕಾರ್ಯನಿರ್ವಾಹಕ ಸಂಪಾದಕರಾದ ಅನುರಾಧಾ ಭಾಸಿನ್ ರವರು ‘ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಭಾಗಗಳಲ್ಲಿನ ಪತ್ರಕರ್ತರು ಮತ್ತು ಇತರ ಎಲ್ಲ ಮಾಧ್ಯಮ ಸಿಬ್ಬಂದಿಗೆ ತಮ್ಮ ವೃತ್ತಿಯನ್ನು ಮುಕ್ತವಾಗಿ ನಿರ್ವಹಿಸುವ ವಾತವಾರಣ ಕಲ್ಪಿಸಬೇಕೆಂದು’ ಒತ್ತಾಯಿಸಿ ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ಅಂತರ್ಜಾಲ ಮತ್ತು ದೂರಸಂಪರ್ಕ ಸೇವೆಗಳ ಸಂಪೂರ್ಣ ಸ್ಥಗಿತಗೊಳಿಸುವ ಮೂಲಕ ವಿಧಿಸಲಾಗುತ್ತಿರುವ ನಿರ್ಬಂಧಗಳು ಮತ್ತು ಫೋಟೋ-ಪತ್ರಕರ್ತರು ಮತ್ತು ವರದಿಗಾರರ ಚಲನವಲನಕ್ಕೆ ತೀವ್ರವಾದ ನಿರ್ಬಂಧಗಳನ್ನು ತಕ್ಷಣ ಸಡಿಲಿಸಬೇಕು ಆ ಮೂಲಕ ಪತ್ರಿಕಾ ಮತ್ತು ಮಾಧ್ಯಮಗಳ ಸ್ವಾತಂತ್ರ್ಯವನ್ನು ಕಾಪಾಡಬೆಕೆಂದು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಆಗಸ್ಟ್ 4 ರಿಂದ ಇಡೀ ರಾಜ್ಯವನ್ನು ಕೇಂದ್ರ ಸರ್ಕಾರ ತನ್ನ ಹತೋಟಿಗೆ ತೆಗೆದುಕೊಂಡ ನಂತರ ಪತ್ರಕರ್ತರು ತಮ್ಮ ವೃತ್ತಿಯನ್ನು ಮುಂದುವರೆಸಲು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮುಕ್ತವಾಗಿ ವರದಿ ಮಾಡುವ ಹಕ್ಕನ್ನು ಚಲಾಯಿಸಲು ಎದುರಾಗಿರುವ ನಿರ್ಬಂಧಗಳನ್ನು ತೆಗೆದುಹಾಕುವಂತೆ ಜಮ್ಮು ಕಾಶ್ಮೀರ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ.
ಇಂತಹ ನಿರ್ಬಂಧಗಳು ಭಾರತದ ಸಂವಿಧಾನದ 14 ಮತ್ತು 19 ನೇ ವಿಧಿಯ ಅನ್ವಯ ಪತ್ರಕರ್ತರ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ ಮತ್ತು ಕಾಶ್ಮೀರ ಕಣಿವೆಯ ನಿವಾಸಿಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವ ಹಕ್ಕನ್ನು ತಡೆಯುತ್ತಿವೆ ಎಂದು ಅರ್ಜಿದಾರರು ದೂರಿದ್ದಾರೆ.
ಆಗಸ್ಟ್ 4 ರಿಂದ, ಮೊಬೈಲ್ ಫೋನ್ ನೆಟ್‌ವರ್ಕ್‌ಗಳು, ಇಂಟರ್ನೆಟ್ ಸೇವೆಗಳು ಮತ್ತು ಲ್ಯಾಂಡ್‌ಲೈನ್ ಫೋನ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಕಾಶ್ಮೀರ ಮತ್ತು ಜಮ್ಮುವಿನ ಕೆಲವು ಜಿಲ್ಲೆಗಳನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿ ಸಂವಹನ ಮತ್ತು ಮಾಹಿತಿಯ ಎಲ್ಲಾ ಮೂಲಗಳನ್ನು ಕಡಿದುಹಾಕುವ ಮೂಲಕ ಬಂಧನದಲ್ಲಿಡಲಾಗಿದೆ ಎಂದು ಅರ್ಜಿದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರ್ಜಿದಾರರು ಅವರ ವಕೀಲರಾದ ವೃಂದಾ ಗ್ರೋವರ್, ಸೌತಿಕ್ ಬ್ಯಾನರ್ಜಿ, ಪ್ರಸನ್ನ ಎಸ್ ಮತ್ತು ರತ್ನ ಅಪ್ನೆಂಡರ್ ರವರು ಪ್ರತಿನಿಧಿಸುತ್ತಿದ್ದಾರೆ. ಅರ್ಜಿಯನ್ನು ಅಡ್ವೊಕೇಟ್ ಸುಮಿಕಾ ಹಜರಿಕಾ ಮೂಲಕ ಸಲ್ಲಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎಲ್ಲಾ ಸಂವಹನ ಸೇವೆಗಳ ನಿರ್ಭಂದದ ಕಾರಣದಿಂದಾಗಿ ಕಾಶ್ಮೀರ ಟೈಮ್ಸ್ ನ ಕಾಶ್ಮೀರ ಆವೃತ್ತಿಯನ್ನು ಮುದ್ರಿಸಲು ಮತ್ತು ಪ್ರಕಟಿಸಲು ಆಕೆಗೆ ಸಾಧ್ಯವಾಗಲಿಲ್ಲ ಎಂದ ಅವರು ಇದರಲ್ಲಿ ಕಾಶ್ಮೀರದ ಪರಿಸ್ಥಿತಿಯನ್ನು ವರದಿ ಮಾಡುವುದು ಮತ್ತು ಪ್ರಕಟಿಸುವುದು ಸೇರಿದಂತೆ ಎಲ್ಲಾ ಮಾಧ್ಯಮ ಚಟುವಟಿಕೆಗಳ ಮೇಲೆ ದಿಗ್ಬಂಧನವನ್ನು ಹೇರಲಾಗಿದೆ ಎಂದಿದ್ದಾರೆ.
ಕಾಶ್ಮೀರದ ಜನರ ಮೇಲೆ ದೊಡ್ಡ ಪರಿಣಾಮ ಬೀರುವ ನಿರ್ಧಾರಗಳನ್ನು ಕಾಶ್ಮೀರಿಯರಿಗೆ ತಿಳಿಯದಂತೆ ತಡೆಯಲು ಕೇಂದ್ರ ಸರ್ಕಾರ ನಮ್ಮನ್ನು ಕತ್ತಲೆಯಲ್ಲಿಟ್ಟಿದೆ. ಆ ಮೂಲಕ ದೆಹಲಿಯಲ್ಲಿ ಅವರು ಅವರ ಪರವಾದ ವಾತವಾರಣವನ್ನು ಸೃಷ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದು ಕಾಶ್ಮೀರದ ನಿವಾಸಿಗಳಲ್ಲಿ ಭಯ, ಆತಂಕವನ್ನು ಉಂಟುಮಾಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಈ ರೀತಿಯ ಮಾಹಿತಿ ನಿರ್ಬಂಧವು ಜನರ ಜೀವನ ಮತ್ತು ಅವರ ಭವಿಷ್ಯದ ಮೇಲೆ ನೇರವಾಗಿ ಪರಿಣಾಮ ಬೀರುವ ನಿರ್ಧಾರಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕಿನ ನೇರ ಮತ್ತು ಗಂಭೀರ ಉಲ್ಲಂಘನೆಯಾಗಿದೆ” ಎಂದು ಅರ್ಜಿದಾರರು ಟೀಕಿಸಿದ್ದಾರೆ.
ಕೃಪೆ: ‘ದಿ ಲೀಫ್ ಲೆಟ್’


