ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರದ 370 ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೋರಿ ಸಜಾದ್ ಲೋನ್ ನೇತೃತ್ವದ ಜಮ್ಮು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ.
ತಮ್ಮ ಪಕ್ಷದ ಪರವಾಗಿ ಅರ್ಜಿಯನ್ನು ಸಲ್ಲಿಸಿದ ಪೀಪಲ್ಸ್ ಕಾನ್ಫರೆನ್ಸ್ ವಕ್ತಾರ ಅದ್ನಾನ್ ಅಶ್ರಫ್ ಮಿರ್, ಕೇಂದ್ರವು ಕೈಗೊಂಡ ಬದಲಾವಣೆಗಳು ಜಮ್ಮು ಕಾಶ್ಮೀರದ ನಾಗರಿಕ ಹಕ್ಕುಗಳ ಮೇಲೆ ಸರಿಪಡಿಸಲಾಗದ ಪರಿಣಾಮವನ್ನು ಬೀರಿದೆ ಎಂದಿದ್ದಾರೆ.
ಜಮ್ಮು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ಹೊಸ ಭೂ ಕಾನೂನುಗಳನ್ನು ಗೃಹ ಸಚಿವಾಲಯ ಕಳೆದ ತಿಂಗಳು ಸೂಚಿಸಿತ್ತು. ಇದರಿಂದಾಗಿ ಯಾವುದೇ ಭಾರತೀಯ ಪ್ರಜೆಗೆ ಈ ಪ್ರದೇಶದಲ್ಲಿ ಭೂಮಿ ಖರೀದಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ: 370 ನೇ ವಿಧಿಯ ಮರುಸ್ಥಾಪನೆಗೆ ’ಪೀಪಲ್ಸ್ ಅಲಯನ್ಸ್’!
“ಸಲ್ಲಿಸಲಾಗಿರುವ ಅರ್ಜಿಗಳನ್ನು ಆಲಿಸದಿದ್ದರೆ ಮತ್ತು ತುರ್ತಾಗಿ ವಿಲೇವಾರಿ ಮಾಡದಿದ್ದಲ್ಲಿ ಪ್ರಸ್ತುತ ವಿಚಾರಣೆಯ ಉದ್ದೇಶವು ಹಾಳಾಗುತ್ತದೆ” ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಪೀಪಲ್ಸ್ ಅಲಯನ್ಸ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅರ್ಜಿಯನ್ನು ಸಲ್ಲಿಸಿದ ನಂತರ ಟ್ವೀಟ್ ಮಾಡಿದ್ದಾರೆ.
As decided in the recent meeting of the People’s Alliance we are seeking early hearings in this matter so that the petitions challenging 5th Aug 2019 move forward. https://t.co/JKKfPkwcuw
— Omar Abdullah (@OmarAbdullah) November 9, 2020
ಆರು ಪಕ್ಷಗಳ ಒಕ್ಕೂಟವಾದ ”ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲೇರ್” ಶನಿವಾರ ಸಭೆ ನಡೆಸಿ ಜಮ್ಮು ಕಾಶ್ಮೀರದ 20 ಜಿಲ್ಲಾ ಅಭಿವೃದ್ಧಿ ಮಂಡಳಿಗಳಿಗೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಸ್ಪರ್ಧಿಸಲು ನಿರ್ಧರಿಸಿತು.
ಜಮ್ಮು ಕಾಶ್ಮೀರ ಜೂನ್ 2018 ರಿಂದ ಕೇಂದ್ರ ಸರ್ಕಾರದ ಆಡಳಿತದಲ್ಲಿದೆ. 370 ನೇ ವಿಧಿ ಅನ್ವಯ ನೀಡಿದ್ದ ರಾಜ್ಯದ ವಿಶೇಷ ಸ್ಥಾನಮಾನವನ್ನು 2019 ರ ಆಗಸ್ಟ್‌ನಲ್ಲಿ ಸಂಸತ್ತು ರದ್ದುಪಡಿಸಿತ್ತು. ನಂತರ ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಯಿತು. ವಿಶೇಷಾಧಿಕಾರದ ರದ್ದುಗೊಳಿಸುವಿಕೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ಸುಪ್ರೀಂ ಕೋರ್ಟ್ ಬಾಕಿ ಇದೆ.
ಇದನ್ನೂ ಓದಿ: ಕಾಶ್ಮೀರಿಗಳ 600 ಹೇಬಿಯಸ್ ಕಾರ್ಪಸ್ ವರ್ಷದಿಂದ ಬಾಕಿ, ಅರ್ನಬ್ ಅರ್ಜಿ ಒಂದೇ ದಿನದಲ್ಲಿ ವಿಚಾರಣೆ; ಅನ್ಯಾಯ!


