ಪ್ಯಾಲೆಸ್ತೀನಿಯರನ್ನು ಹೊರದಬ್ಬಿ ಗಾಝಾವನ್ನು ಅಮೆರಿಕದ ತೆಕ್ಕೆಗೆ ಪಡೆಯುವ ಡೊನಾಲ್ಡ್ ಟ್ರಂಪ್ ಯೋಜನೆಗೆ ಸೆಡ್ಡು ಹೊಡೆದಿರುವ ಅರಬ್ ರಾಷ್ಟ್ರಗಳ ನಾಯಕರು, ಶುಕ್ರವಾರ (ಫೆ.21) ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮಹತ್ವದ ಸಭೆ ನಡೆಸಿ ಪರ್ಯಾಯ ಯೋಜನೆ ರೂಪಿಸಿದ್ದಾರೆ.
ವರದಿಗಳ ಪ್ರಕಾರ, ಅರಬ್ ನಾಯಕರ ಸಭೆಯಲ್ಲಿ ಪ್ಯಾಲೆಸ್ತೀನಿಯರನ್ನು ಹೊರದಬ್ಬದೆ, ಗಾಝಾವನ್ನು ಮರುನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಆಯೋಜಿಸಿದ್ದ ಸಭೆಯಲ್ಲಿ ಈಜಿಪ್ಟ್, ಜೋರ್ಡಾನ್, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಕುವೈತ್ ಮತ್ತು ಬಹ್ರೈನ್ ನಾಯಕರು ಭಾಗವಹಿಸಿದ್ದರು.
ಸಭೆಯಲ್ಲಿ ಗಾಝಾವನ್ನು ಪುನರ್ ನಿರ್ಮಿಸುವ ಪ್ರಯತ್ನಗಳ ಮೇಲೆ ಕೇಂದ್ರೀಕರಿಸುವ ಮೂರು ಹಂತದ ಪ್ರಸ್ತಾವನೆಯನ್ನು ಈಜಿಪ್ಟ್ ಮಂಡಿಸಿದೆ. ಪುನರ್ ನಿರ್ಮಾಣ ವೆಚ್ಚವನ್ನು 53 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ, ಗಲ್ಫ್ ರಾಷ್ಟ್ರಗಳಿಂದ ಈ ಹಣವನ್ನು ನಿರೀಕ್ಷಿಸಲಾಗಿದೆ.
ಗಾಝಾದ ಮುಂದಿನ ಆಡಳಿತ ನಡೆಸುವವರು ಯಾರು ಎಂಬ ಮಹತ್ವದ ವಿಚಾರವನ್ನು ಸಭೆಯಲ್ಲಿ ಚರ್ಚಿಸಲಾಗಿದೆ. ವರದಿಗಳ ಪ್ರಕಾರ, ಹಮಾಸ್ ಅನ್ನು ಹೊರಗಿಟ್ಟು ಪ್ಯಾಲೆಸ್ತೀನ್ ಪ್ರಾಧಿಕಾರ ಗಾಝಾವನ್ನು ನಿಯಂತ್ರಣಕ್ಕೆ ಪಡೆಯುವ ಅಭಿಪ್ರಾಯ ವ್ಯಕ್ತವಾಗಿದೆ.
ಮಾರ್ಚ್‌ನಲ್ಲಿ ಈಜಿಪ್ಟ್‌ನ ಕೈರೋದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಜಂಟಿ ಕಾರ್ಯತಂತ್ರವನ್ನು ಅಂತಿಮಗೊಳಿಸಲು ನಾಯಕರು ಯೋಜಿಸಿದ್ದಾರೆ. ಸಭೆಯಲ್ಲಿ ಪ್ಯಾಲೆಸ್ತೀನ್-ಇಸ್ರೇಲ್ ದ್ವಿರಾಷ್ಟ್ರ ನೀತಿಯನ್ನು ನಾಯಕರು ಪುನರುಚ್ಚರಿಸಿದ್ದಾರೆ. ಗಾಝಾ ನಿವಾಸಿಗಳನ್ನು ಬಲವಂತದಿಂದ ಹೊರದಬ್ಬುವ ಯೋಜನೆಯನ್ನು ಖಂಡಿಸಿದ್ದಾರೆ.
ಅಮೆರಿಕ | ತನಿಖಾ ಸಂಸ್ಥೆ FBI ನಿರ್ದೇಶಕರಾಗಿ ಭಾರತ ಮೂಲದ ಕಾಶ್ ಪಟೇಲ್ ನೇಮಕ


